ಜಗನ್ಮಾರಿ ಎನಿಸಿಕೊಂಡಿದ್ದ ಕೊರೊನಾಗೆ ಭಾರತದಲ್ಲಿ ಸದ್ಯ ಎರಡು ಲಸಿಕೆಗಳು ಲಭ್ಯವಿದೆ. ಪುಣೆಯ ಸೆರಮ್ ಇನ್ಸ್ಟಿಟ್ಯೂಟ್ ಹಾಗೂ ಭಾರತ್ ಬಯೋಟೆಕ್ ಸಂಸ್ಥೆ ಕೊವ್ಯಾಕ್ಸಿನ್, ಕೊವಿಶೀಲ್ಡ್ ಲಸಿಕೆಗಳನ್ನು ಸಿದ್ಧಪಡಿಸಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮತ್ತು ಕೊರೊನಾ ವಾರಿಯರ್ಸ್ಗೆ ಲಸಿಕೆ ವಿತರಣೆ ನಡೆಸುವ ಕೆಲಸವೂ ದೇಶದಲ್ಲಿ ನಡೆಯುತ್ತಿದೆ. ಆದರೆ, ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಈ ಚುಚ್ಚುಮದ್ದು ತೆಗೆದುಕೊಳ್ಳುವವರ ಪ್ರಮಾಣ ಕಡಿಮೆ ಇದೆ. ಇದಕ್ಕೆ ಕಾರಣವೇನು? ರಾಜ್ಯದ ಪರಿಸ್ಥಿತಿ ಯಾಕೆ ಹೀಗಿದೆ? ಎಂಬ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಇಂದು (ಫೆ.9) ಲೈವ್ ಕಾರ್ಯಕ್ರಮ ನಡೆಸಿಕೊಟ್ಟಿತು. ಶ್ವಾಸಕೋಶತಜ್ಞ ಡಾ. ಚೇತನ್ ಮತ್ತು ಸಾಂಕ್ರಾಮಿಕರೋಗ ತಜ್ಞ ಡಾ. ಸುನಿಲ್ ಲೈವ್ನಲ್ಲಿ ಭಾಗವಹಿಸಿದರು. ನಿರೂಪಕ ಆನಂದ್ ಬುರಲಿ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶ್ವಾಸಕೋಶತಜ್ಞ ಡಾ. ಚೇತನ್, ಕೊರೊನಾ ಲಸಿಕೆಯ (Corona Vaccine) ಕಾರ್ಯಕ್ಷಮತೆ, ಪರಿಣಾಮ ಇತ್ಯಾದಿ ವಿಚಾರಗಳ ಬಗ್ಗೆ ಜನರಿಗೆ ಅಥವಾ ಲಸಿಕೆ ಪಡೆದುಕೊಳ್ಳಬೇಕಾದವರಿಗೆ ಭಯ, ಆತಂಕವಿದೆ. ಜೊತೆಗೆ, ಕೊರೊನಾ ಬಗ್ಗೆ ಜನಸಾಮಾನ್ಯರಿಗೆ ಮೊದಲು ಇದ್ದಷ್ಟು ಭಯ ಈಗಿಲ್ಲ. ಸಾಮಾಜಿಕ ವಾತಾವರಣ ಸಂಪೂರ್ಣವಾಗಿ ಬದಲಾಗಿದೆ. ಕೊರೊನಾದಿಂದ ಸಂಭವಿಸುತ್ತಿರುವ ಸಾವು, ಕೊವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಇಂತಹ ಕಾರಣಗಳಿಂದ ಕೊವಿಡ್ ವಿರುದ್ಧದ ಚುಚ್ಚುಮದ್ದು ಪಡೆಯುತ್ತಿರುವವರ ಪ್ರಮಾಣ ಕಡಿಮೆ ಆಗಿರಬಹುದು ಎಂದು ಅಭಿಪ್ರಾಯಪಟ್ಟರು.
ಲಸಿಕೆಯ ಕಾರ್ಯಕ್ಷಮತೆ ಸಾಬೀತಾದ ಬಳಿಕ ಚುಚ್ಚುಮದ್ದು ಹಾಕಿಸಿಕೊಳ್ಳುತ್ತೇವೆ ಎಂಬುದು ಹಲವರ ಉದ್ದೇಶ ಇರಬಹುದು. ವದಂತಿಗಳ ಬಗ್ಗೆ ಭಯವಿರಬಹುದು. ನಿಗದಿತ ಸಮಯದವರೆಗೆ ಕಾದು ನೋಡಿ ನಂತರ ಲಸಿಕೆ ಪಡೆಯೋಣ ಎಂಬ ಮನಸ್ಥಿತಿ ಜನರಿಗೆ ಇರಬಹುದು. ಲಸಿಕೆ ಪಡೆಯುವುದು ಐಚ್ಛಿಕ (Optional) ಎಂಬ ಕಾರಣವೂ ಇರಬಹುದು ಎಂದು ಅವರು ವಿಶ್ಲೇಷಿಸಿದರು.
ಲಸಿಕೆಯನ್ನು ಹಿರಿಯರಿಗೆ, ಆರೋಗ್ಯ ಸಮಸ್ಯೆ ಇರುವವರಿಗೆ (ಹೃದಯ, ಶ್ವಾಸಕೋಶ ಸಂಬಂಧಿ ಅಥವಾ ಶುಗರ್, ಬಿಪಿ) ಮೊದಲು ನೀಡಬೇಕು. ಕೊರೊನಾದಿಂದ ಮೃತರಾದವರ ಸಂಖ್ಯೆ ಯಾರಲ್ಲಿ ಹೆಚ್ಚಿದೆ ನೋಡಬೇಕು. ಅದರಂತೆ ಲಸಿಕೆ ನೀಡುವಲ್ಲಿ ಆದ್ಯತೆ ನೀಡಬೇಕು. ಪ್ರಸ್ತುತ ಕೊರೊನಾ ಪಾಸಿಟಿವ್ ಆಗುತ್ತಿರುವವರ ಸಂಖ್ಯೆ ದಿನೇದಿನೇ ಕಡಿಮೆ ಆಗುತ್ತಿದೆ. ನಿನ್ನೆಯ ಅಂಕಿ ಅಂಶ ಗಮನಿಸಿದರೆ, ಕರ್ನಾಟಕದಲ್ಲಿ ಕೊರೊನಾ ಪರೀಕ್ಷೆ ನಡೆಸಿದವರು 50,000 ಮಂದಿಯಾದರೆ, ಸುಮಾರು 300ರಷ್ಟು ಮಂದಿ ಮಾತ್ರ ಕೋವಿಡ್ ಪಾಸಿಟಿವ್ ಆಗಿದ್ದಾರೆ. ಹೀಗಾಗಿ, ಲಸಿಕೆ ಯಾಕೆ ಬೇಕು. ಕೊರೊನಾ ತನ್ನಿಂದ ತಾನೇ ಹೋಗುತ್ತೆ ಎಂದು ಜನರು ಅಂದುಕೊಂಡಿರಬಹುದು ಎಂದು ಅಭಿಪ್ರಾಯಪಟ್ಟರು.
ಜನರಿಗೆ ಅನಾರೋಗ್ಯ ಉಂಟಾಗುತ್ತಿಲ್ಲ. ಮೂರನೇ ಹಂತದ ಕೊರೊನಾ ಹರಡುವಿಕೆ ಆಗಿದೆ. ದೇಶದೆಲ್ಲಡೆ ಅನ್ಲಾಕ್ ಕೂಡ ಆಗಿದೆ. ಕೊರೊನಾ ಗುಣಲಕ್ಷಣಗಳು ಕಡಿಮೆ ಆದಂತೆ, ವೈರಾಣು ಪ್ರಭಾವ ಸಹಜವಾಗಿ ಕ್ಷೀಣವಾಗುವುದು ತಿಳಿಯುತ್ತಿದೆ. ದೆಹಲಿ ಅಂಕಿ ಅಂಶ ಗಮನಿಸಿದರೆ, ಶೇ. 50ರಿಂದ 60ರಷ್ಟು ಜನರಿಗೆ ರೋಗನಿರೋಧಕ ಶಕ್ತಿ ಇರುವುದು ಗಮನಿಸಬಹುದು ಎಂದು ಸಲಹೆ ನೀಡಿದರು.
ಎರಡನೇ ಡೋಸ್ ಪಡೆಯುವುದು ಅತ್ಯಗತ್ಯ
ಸಂವಾದದಲ್ಲಿ ಮಾತನಾಡಿದ ಸಾಂಕ್ರಾಮಿಕ ರೋಗತಜ್ಞ ಡಾ.ಸುನಿಲ್, ಲಸಿಕೆ ಪಡೆಯಲು ಆರೋಗ್ಯ ಕಾರ್ಯಕರ್ತರೇ ಮುಂದೆ ಬರ್ತಿಲ್ಲ. ನಾವು ಹೇಗೆ ಲಸಿಕೆ ಪಡೆಯೋಣ ಎಂದು ಜನರಲ್ಲಿ ಗೊಂದಲ ಇರಬಹುದು. ಎಲ್ಲರಲ್ಲಿಯೂ ಒಂದೇ ಮನೋಭಾವ ಇರುವುದಿಲ್ಲ. ಲಸಿಕೆಯ ಗುಣಮಟ್ಟದ ಬಗ್ಗೆ ಸಂಶಯ ಇದ್ದೇ ಇರುತ್ತದೆ. ಜನರ ನಿರೀಕ್ಷೆಗೂ ಮೊದಲು ಲಸಿಕೆ ಬಂದಿದೆ. ಹಾಗಾಗಿ, ಐದಾರು ತಿಂಗಳು ಕಳೆದು ಲಸಿಕೆ ಕಾರ್ಯಕ್ಷಮತೆ ಗಮನಿಸೋಣ ಎಂಬ ಭಾವ ಇರಬಹುದು ಎಂದು ಡಾ. ಸುನಿಲ್ ಅಭಿಪ್ರಾಯವ್ಯಕ್ತಪಡಿಸಿದರು.
ಲಸಿಕೆಯ ಮೊದಲ ಡೋಸ್ ನಂತರ ಎರಡನೇ ಡೋಸ್ ಪಡೆಯುವುದು ಖಂಡಿತಾ ಅಗತ್ಯ. ಎರಡೂ ಚುಚ್ಚುಮದ್ದು ಪಡೆದು 45 ದಿನಗಳ ಬಳಿಕ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅದಕ್ಕಾಗಿ ಎರಡೂ ಡೋಸ್ ಬೇಕೇಬೇಕು. ಇಲ್ಲವಾದರೆ ಲಸಿಕೆಯಿಂದ ಸಿಗುವ ಸುರಕ್ಷತೆ ಅಥವಾ ರಕ್ಷಣೆ ಕಡಿಮೆ ಆಗುತ್ತದೆ ಎಂದು ವಿವರಿಸಿದರು.
ವೈರಸ್ ರೂಪಾಂತರ ಆಗಲು ಒಂದೇ ಚುಚ್ಚುಮದ್ದು ಪಡೆದು ಸುಮ್ಮನಿರುವುದೂ ಕಾರಣ ಆಗಬಹುದು. ಹಾಗಾಗಿ ಎರಡೂ ಡೋಸ್ ಮುಖ್ಯ. ಲಸಿಕೆ ವಿತರಣೆಯನ್ನು ಸವಾಲಾಗಿ ಪರಿಗಣಿಸಬೇಕು. ಸರಿಯಾದ ಸಿದ್ಧತೆ ಮಾಡಿಕೊಳ್ಳಬೇಕು. ಲಸಿಕೆ ಪಡೆಯಬೇಕಾದವರಿಗೆ ನಾಲ್ಕೈದು ದಿನ ಮೊದಲೇ ಸಂದೇಶ ನೀಡಿ, ಮಾನಸಿಕವಾಗಿ ಅವರು ಸಿದ್ಧರಾಗಿರುವಂತೆ ನೋಡಿಕೊಳ್ಳಬೇಕು. ಲಸಿಕೆ ನೀಡುವಲ್ಲಿ ತಾಂತ್ರಿಕ ಸಿದ್ಧತೆಯೂ ಬೇಕು. ಲಸಿಕೆ ವಿತರಣೆ ಯಶಸ್ವಿಯಾಗಿಸಲು ಈ ನೆಲೆಯಲ್ಲಿ ಕೆಲಸಗಳಾಗಬೇಕು ಎಂದು ತಿಳಿಸಿದರು.
ವಯಸ್ಕರಿಗೆ, ಕೆಲವಾರು ಆರೋಗ್ಯ ಸಮಸ್ಯೆ ಹೊಂದಿದವರಿಗೆ ಮೊದಲು ಲಸಿಕೆ ಕೊಟ್ಟರೆ, ಕೊರೊನಾ ವಿರುದ್ಧ ಹೆಚ್ಚಿನ ರಕ್ಷಣೆ ಸಾಧ್ಯವಾಗುತ್ತದೆ. ಮಾರ್ಚ್ನಿಂದ ಎರಡನೇ ಹಂತದ ಲಸಿಕೆ ವಿತರಣೆ ಶುರು ಎನ್ನುತ್ತಿದ್ದಾರೆ. ಖಂಡಿತಾ ಈ ಕ್ರಮ ಒಳ್ಳೆಯದು ಎಂದು ಡಾ. ಸುನಿಲ್ ಹೇಳಿದರು.
ಕೊರೊನಾ ವೈರಾಣು ಮೂಲ ಪತ್ತೆಗೆ ಚೀನಾದ ವುಹಾನ್ ಪ್ರಯೋಗಾಲಯಕ್ಕೆ ಕಾಲಿಟ್ಟ WHO ತಂಡ
Published On - 7:47 pm, Tue, 9 February 21