ಮುಂಬೈ: ಕೊವಿಡ್-19 ಪರಿಸ್ಥಿತಿ ಹಾಗೂ ಲಾಕ್ಡೌನ್ ಕೇವಲ ಮನೆಯಿಂದ ಕೆಲಸ/ ವರ್ಕ್ ಫ್ರಮ್ ಹೋಮ್ ಸಂಸ್ಕೃತಿಯನ್ನು ಮಾತ್ರ ಹೆಚ್ಚಿಸಿದ್ದಲ್ಲ. ಬದಲಾಗಿ, ವಿವಿಧ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲೇ ಔಷಧೋಪಚಾರ ಮಾಡಿಕೊಳ್ಳುವ (ಹೋಮ್ ಹಲ್ತ್ ಕೇರ್) ಜೀವನಶೈಲಿಯನ್ನು ಕೂಡ ರೂಪಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದು ಹೋಮ್ ಹಲ್ತ್ ಕೇರ್ ವಿಧಾನದ ಆರಂಭ ಮಾತ್ರ. ಮುಂಬರುವ ದಿನಗಳಲ್ಲಿ ಇದು ನಮ್ಮ ಜನಜೀವನವನ್ನು ಬಹುವಾಗಿ ಪ್ರಭಾವಿಸಲಿದೆ. ಹೋಮ್ ಹೆಲ್ತ್ ಕೇರ್ ವ್ಯವಸ್ಥೆ ಭವಿಷ್ಯದಲ್ಲಿ ಇನ್ನಷ್ಟು ಆವರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಡಯಲಿಸಿಸ್, ಫಿಸಿಯೋಥೆರಪಿ ಹಾಗೂ ಕಿಮೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಗಳು ಕೂಡ ಲಾಕ್ಡೌನ್ ಕಾಲದಲ್ಲಿ ಮನೆಯಲ್ಲೇ ಆರೋಗ್ಯ ಸೇವೆ ಪಡೆದುಕೊಂಡಿದ್ದಾರೆ. ಹಲವಾರು ಮಂದಿ ಟೆಲಿಮೆಡಿಸಿನ್ ಸಮಾಲೋಚನೆಯನ್ನು (ದೂರವಾಣಿ ಮೂಲಕ ಆರೋಗ್ಯ ಸೇವೆ) ಬಳಸಿಕೊಂಡಿದ್ದಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ನೆಫ್ರಾಲಜಿಸ್ಟ್ ಹಾಗೂ ವೈದ್ಯ, ಡಾ. ಅವಿನಾಶ್ ಇಗ್ನೇಶಿಯಸ್ ಪಿಟಿಐ ಜೊತೆಗೆ ಮಾತನಾಡಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರು ಮನೆಯಲ್ಲೇ ಡಯಾಲಿಸಿಸ್ ಮಾಡಿಕೊಳ್ಳುವ ಅವಕಾಶವಿದೆ. ಆ ತಂತ್ರಜ್ಞಾನವೂ ಲಭ್ಯವಿದೆ. ಅದಕ್ಕಾಗಿ ಡಯಾಲಿಸಿಸ್ ಮಾಡುವಾತನೊಬ್ಬ ಮನೆಗೆ ತೆರಳಿ, ಸೇವೆ ನೀಡುತ್ತಾನೆ ಎಂದು ವಿವರಣೆ ನೀಡಿದ್ದಾರೆ.
ರಕ್ತದೊತ್ತಡ ಪರಿಶೀಲಿಸುವ ಉಪಕರಣಗಳು, ತೂಕ ನೋಡುವ ಯಂತ್ರಗಳು, ಪಲ್ಸ್ ಆಕ್ಸಿಮೀಟರ್ಗಳನ್ನು ಈಗ ಬಹಳಷ್ಟು ಮನೆಗಳಲ್ಲಿದೆ. ಹಾಗಾಗಿ, ಮನೆಯಲ್ಲೇ ಸಣ್ಣಪುಟ್ಟ ಆರೋಗ್ಯ ಪರಿಶೀಲನೆ ನಡೆಸುವುದು ಸಾಧ್ಯವಾಗಿದೆ. ಮತ್ತೆ ಮತ್ತೆ ಆಸ್ಪತ್ರೆಗೆ ತೆರಳುವುದು ಕಡಿಮೆಯಾಗಿದೆ ಎಂದು ಡಾ. ಅವಿನಾಶ್ ಹೇಳಿದ್ದಾರೆ. ಆದರೆ, ಮನೆಯಲ್ಲಿ ನೀಡಲಾಗುವ ಚಿಕಿತ್ಸಾ ಸೌಲಭ್ಯಕ್ಕಿಂತ ಆಸ್ಪತ್ರೆಯಲ್ಲಿ ಸಿಗುವ ಚಿಕಿತ್ಸೆ ಅಥವಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವುದು ಕಡಿಮೆ ಖರ್ಚಿನ ವಿಚಾರ ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಪಿಟಿಐ ಜೊತೆಗೆ ಪುಣೆಯ ತಜ್ಞ ವೈದ್ಯ ಮಿನಿಶ್ ಜೈನ್ ಕೂಡ ಮಾತನಾಡಿದ್ದಾರೆ. ಕೆಲವು ವಿಧದ ಕ್ಯಾನ್ಸರ್ಗಳಿಗೆ ಚಿಕಿತ್ಸೆ ಹಾಗೂ ಕಿಮೋಥೆರಪಿಯನ್ನು ಮನೆಯಲ್ಲಿಯೇ ಪಡೆಯಬಹುದಾಗಿದೆ. ಆದರೆ, ಕಿಮೋಥೆರಪಿ ಚಿಕಿತ್ಸೆಯನ್ನು ಮನೆಯಲ್ಲೇ ಪಡೆಯುವ ಸೌಲಭ್ಯವು ಭಾರತದಲ್ಲಿ ಅಷ್ಟಾಗಿ ಪ್ರಚಲಿತದಲ್ಲಿ ಇಲ್ಲ ಎಂದು ತಿಳಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿ ಬಹಳಷ್ಟು ಮಂದಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ಹಿಂಜರಿಕೆ ತೋರಿದ್ದರು. ಅಂಥವರು ಮನೆಯಲ್ಲೇ ಕಿಮೋಥೆರಪಿ ಆರಂಭಿಸಿದ್ದಾರೆ ಎಂದು ಹೇಳಿದ್ದಾರೆ.
ಶೀಘ್ರವೇ ವರ್ಕ್ ಫ್ರಮ್ ಹೋಂ ಅಂತ್ಯ?: ಸೂಚನೆ ಕೊಟ್ಟ ದೊಡ್ಡ ಐಟಿ ಕಂಪೆನಿಗಳು
Published On - 6:44 pm, Sat, 30 January 21