Fraud: ಚೀನಾ ನಂಟಿನ ನಕಲಿ ಕಂಪನಿಗಳ ವಿರುದ್ಧ ಕಾರ್ಯಾಚರಣೆ ಚುರುಕು; ಮಾಸ್ಟರ್ಮೈಂಡ್ ಬಂಧನ
ಕಂಪನಿಯ ಮೊಹರುಗಳು (ಸೀಲ್) ಮತ್ತು ನಕಲಿ ನಿರ್ದೇಶಕರ ಡಿಜಿಟಲ್ ಸಹಿಗಳನ್ನು ವಶಪಡಿಸಿಕೊಳ್ಳಲಾಗಿದೆ
ದೆಹಲಿ: ಗಂಭೀರ ಸ್ವರೂಪದ ಆರ್ಥಿಕ ಅಪರಾಧಗಳ ತನಿಖಾ ದಳದ (Serious Fraud Investigation Office – SFIO) ಅಧಿಕಾರಿಗಳು ಚೀನಾ ಮೂಲದ ಬಂಡವಾಳ ಪಡೆಯುತ್ತಿದ್ದ ಮೋಸದ ಕಂಪನಿಗಳ ವಿರುದ್ಧ ಚುರುಕಿನ ಕಾರ್ಯಾಚರಣೆ ನಡೆಸಿ, ಓರ್ವ ಪ್ರಮುಖ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಹಿಮಾಚಲ ಪ್ರದೇಶದ ಮಂಡಿ ಪಟ್ಟಣದ ಡೊರ್ಟ್ಸ್ ಎಂದು ಗುರುತಿಸಲಾಗಿದೆ. ಈತ ಅಕ್ರಮ ವಹಿವಾಟಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಎಂದು ಹಣಕಾಸು ಸಚಿವಾಲಯದ ಕಾರ್ಪೊರೇಟ್ ವ್ಯವಹಾರಗಳ ವಿಭಾಗವು ಭಾನುವಾರ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ. ಕಾರ್ಪೊರೇಟ್ ಕಂಪನಿಗಳ ಮೂಲಕ ನಡೆಯುವ ಮೋಸದ ಬಗ್ಗೆ ‘ಗಂಭೀರ ಸ್ವರೂಪದ ಆರ್ಥಿಕ ಅಪರಾಧಗಳ ತನಿಖಾ ದಳ’ ತನಿಖೆ ನಡೆಸುತ್ತದೆ.
ತನ್ನನ್ನು ಅಧಿಕಾರಿಗಳು ಹುಡುಕುತ್ತಿದ್ದಾರೆ ಎಂಬುದು ಮನಗಂಡ ಡೊರ್ಟ್ಸ್ ಬಿಹಾರದ ಹಳ್ಳಿಯೊಂದರಲ್ಲಿ ತಲೆಮರೆಸಿಕೊಂಡಿದ್ದ. ರಸ್ತೆ ಮಾರ್ಗದಲ್ಲಿ ಭಾರತದಿಂದ ಹೊರಗೆ ಹೋಗಲು ಪ್ರಯತ್ನಿಸುತ್ತಿದ್ದ. ಈ ಹಂತದಲ್ಲಿಯೇ ಅವನನ್ನು ಪೊಲೀಸರು ಶನಿವಾರ ಬಂಧಿಸಿ ವಶಕ್ಕೆ ತೆಗೆದುಕೊಂಡರು. ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ, ಟ್ರಾನ್ಸಿಟ್ ಆದೇಶ ಪಡೆಯಲಾಯಿತು.
ಡೊರ್ಟ್ಸ್ ಬಂಧನದ ನಂತರ ಗುರುಗ್ರಾಮದ ಜಿಲಿಯನ್ ಕನ್ಸಲ್ಟೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಬೆಂಗಳೂರಿನ ಫಿನಿಟಿ ಪ್ರೈವೇಟ್ ಲಿಮಿಟೆಡ್, ಹೈದರಾಬಾದ್ನ ಹುಸಿಸ್ ಕನ್ಸಲ್ಟಿಂಗ್ ಲಿಮಿಟೆಡ್ ಕಚೇರಿಗಳ ಶೋಧ ಮತ್ತು ದಾಖಲೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕಾರ್ಯಾಚರಣೆ ನಡೆಯಿತು. ಈ ಪೈಕಿ ಜಿಲಿಯನ್ ಕನ್ಸಲ್ಟೆಂಟ್ ಕಂಪನಿಯು ಜಿಲಿಯನ್ ಹಾಕಾಂಗ್ ಲಿಮಿಟಿಡ್ನ ನೇರ ಅಧೀನದಲ್ಲಿರುವ ಕಂಪನಿಯಾಗಿದೆ. ಡೊರ್ಟ್ಸ್ ಈಈ ಕಂಪನಿಯ ನಿರ್ದೇಶಕ ಮಂಡಳಿಯಲ್ಲಿದ್ದ.
ಭಾರತದ ಆರ್ಥಿಕ ಭದ್ರತೆಗೆ ಕಂಟಕ ತಂದೊಡ್ಡುವ ಗಂಭೀರ ಸ್ವರೂಪದ ಆರ್ಥಿಕ ಅಪರಾಧದಲ್ಲಿ ಈ ನಕಲಿ ಕಂಪನಿಗಳು ತೊಡಗಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ತನಿಖೆಯು ಚುರುಕಾಗಿದ್ದು, ತನಿಖಾಧಿಕಾರಿಗಳು ಹಲವು ಆಯಾಮಗಳನ್ನು ಪರಿಶೀಲಿಸುತ್ತಿದ್ದಾರೆ. ಜಿಲಿಯಾನ್ ಕನ್ಸಲ್ಟಂಟ್ಸ್ ಜೊತೆಗೆ ಇತರ 32 ಕಂಪನಿಗಳ ವಿರುದ್ಧವೂ ಪ್ರಕರಣಗಳು ದಾಖಲಾಗಿದ್ದು, ತನಿಖೆ ಚುರುಕಾಗಿದೆ. ಕಂಪನಿಯ ಮೊಹರುಗಳು (ಸೀಲ್) ಮತ್ತು ನಕಲಿ ನಿರ್ದೇಶಕರ ಡಿಜಿಟಲ್ ಸಹಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಾರತದ ನೌಕರರು ಚೀನಾದ ಸಹೋದ್ಯೋಗಿಗಳೊಂದಿಗೆ ಚೀನಾದ ಹ್ಯುಸಿಸ್ ಮೆಸೇಜಿಂಗ್ ಆ್ಯಪ್ ಮೂಲಕ ನಿರಂತರ ಸಂಪರ್ಕದಲ್ಲಿ ಇದ್ದರು. ಜಿಲಿಯನ್ ಇಂಡಿಯಾ ಲಿಮಿಟೆಡ್ ಪರವಾಗಿ ಕಾರ್ಯನಿರ್ವಹಿಸುತ್ತಿದ್ದ ಸಂಗತಿಯೂ ತನಿಖೆ ವೇಳೆ ಬೆಳಕಿಗೆ ಬಂದಿದೆ.