ಕೊಪ್ಪಳ:ಕಿತ್ತು ತಿನ್ನೋ ಬಡತನ, ಯಾರೂ ನೋಡಿಕೊಳ್ಳುವವರಿಲ್ಲದೆ ಅನಾಥರಾಗಿದ್ದ ತಾಯಿ ಮಗಳು ಹೇಗೊ ಭಿಕ್ಷೆ ಬೇಡಿ, ಪ್ಲ್ಯಾಸ್ಟಿಕ್ ಸಂಗ್ರಹಿಸಿ ಜೀವನ ನೆಡೆಸುತ್ತಿದ್ದರು. ಆದರೆ ಈಗ ಮಗಳಿಗೆ ಕೊರೊನಾ ವಕ್ಕರಿಸಿದ್ದು ವಯಸ್ಸಾದ ತಾಯಿಯನ್ನು ನೋಡಿಕೊಳ್ಳುವವರಿಲ್ಲದೆ ಅನಾಥೆಯಾಗಿದ್ದಾರೆ.
ಮೂಲತಃ ಆಂಧ್ರದವರಾದ ತಾಯಿ ಮಗಳಿಗೆ ಇರಲು ಆಶ್ರಯವಿಲ್ಲದೆ ಆಂಧ್ರದಿಂದ ಕೊಪ್ಪಳ ತಾಲೂಕಿನ ಚುಕ್ಕನಕಲ್ ಗ್ರಾಮಕ್ಕೆ ವಲಸೆ ಬಂದಿದ್ದರು. ಭಿಕ್ಷೆ ಬೇಡಿ, ಪ್ಲಾಸ್ಟಿಕ್ ಸಂಗ್ರಹಿಸಿ ತಾಯಿಯೊಂದಿಗೆ ಜೀವನ ಮಾಡ್ತಿದ್ದ 19 ವರ್ಷದ ಯುವತಿಗೆ ಕೊರನಾ ಪಾಸಿಟಿವ್ ಬಂದಿದೆ. ಇದರಿಂದ ಯುವತಿ ಆಸ್ಪತ್ರೆ ಸೇರಿದ್ದು, ದುಡಿದು ಸಾಕುವವರಿಲ್ಲದೆ ವೃದ್ಧೆ ಹಸಿವಿನಿಂದ ನರಳುತ್ತಿರುವ ಹೃದಯ ವಿದ್ರಾವಕ ಘಟನೆ ಕೊಪ್ಪಳದಲ್ಲಿ ನೆಡೆದಿದೆ.
ಭಿಕ್ಷೆ ಬೇಡುತ್ತಿದ್ದ ಯುವತಿಗೆ ಕೊರನಾ ಪಾಸಿಟಿವ್ ಬಂದಿರುವುದರಿಂದ ಈಗ ಆಕೆ ಭಿಕ್ಷೆ ಬೇಡಿದ ಚುಕ್ಕನಕಲ್ ಗ್ರಾಮ ಸೇರಿ ನಾಲ್ಕೈದು ಗ್ರಾಮಗಳಲ್ಲಿ ಕೊರೊನಾ ಭೀತಿ ಎದುರಾಗಿದೆ. ಇಷ್ಟೆ ಅಲ್ಲದೆ ಸೋಂಕಿತೆಯ ತಾಯಿಯನ್ನು ಕ್ವಾರಂಟೈನ್ ಮಾಡದೇ ಜಿಲ್ಲಾಡಳಿತ ದಿವ್ಯ ನಿರ್ಲಕ್ಷ ತೋರಿದೆ. ಇದರಿಂದ ಆತಂಕಗೊಂಡಿರುವ ಗ್ರಾಮಸ್ಥರು ವೃದ್ಧೆಯನ್ನು ಗ್ರಾಮದಿಂದ ಹೊರಹೋಗುವಂತೆ ಒತ್ತಾಯ ಮಾಡುತ್ತಿದ್ದಾರೆ.