ಬೆಂಗಳೂರು: ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ವ್ಯಾಪ್ತಿಯಲ್ಲಿ ನಡೆದಂತಹ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ಆರೋಪಿ ವಾಜಿದ್ ಪಾಷಾನನ್ನು ಇಂದು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ವಾಜಿದ್ ಪಾಷಾ ಕರ್ನಾಟಕ ಟಿಪ್ಪು ಟೈಗರ್ ಅಲ್ಫತ್ ಟ್ರಸ್ಟ್ನ ಅಧ್ಯಕ್ಷನಾಗಿದ್ದಾನೆ. ಈ ಮೊದಲು ಜೆಡಿಎಸ್ ಪಕ್ಷದಲ್ಲೂ ಗುರುತಿಸಿಕೊಂಡಿದ್ದ ವಾಜಿದ್ ಪಾಷಾ, ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕಾಣೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಸಹ ಹಾಕಿದ್ದನಂತೆ.
ಇದರಿಂದಾಗಿ ಆಕ್ರೋಶಗೊಂಡ ಶಾಸಕನ ಬೆಂಬಲಿಗರು ವಾಜಿದ್ ಪಾಷಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ವಾಜಿದ್ ಪಾಷಾನನ್ನು ಠಾಣೆಗೆ ಕರೆಸಿದ ಪೊಲೀಸರು, ಶಾಸಕರ ಬೆಂಬಲಿಗರು ಹಾಗೂ ವಾಜಿದ್ ಪಾಷಾ ನಡುವೆ ರಾಜಿ ಮಾಡಿಸಿ ಕಳುಹಿಸಿಕೊಟ್ಟಿದ್ದರು.
ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆಯ ದಿನದಂದು ಗಲಾಟೆಗೆ ಪ್ರಮುಖ ಕಾರಣವಾಗಿದ್ದ ಅವಹೇಳನಕಾರಿ ಸೋಷಿಯಲ್ ಮೀಡಿಯಾ ಪೋಸ್ಟ್ನ ಹಾಕಿದ್ದ ನವೀನ್ನನ್ನ ತಕ್ಷಣವೇ ಬಂಧಿಸಬೇಕೆಂದು ನೂರಾರು ಬೆಂಬಲಿಗರೊಂದಿಗೆ ಠಾಣೆಗೆ ಮುತ್ತಿಗೆ ಹಾಕಿದ್ದ.
ಆಗ ಪೊಲೀಸರು ದೂರು ದಾಖಲಿಸಿಕೊಂಡ ಪರಿಶೀಲನೆ ನಡೆಸಬೇಕು. ಜೊತೆಗೆ ಎಫ್ಐಆರ್ ದಾಖಲು ಮಾಡಲು ಎರಡು ಗಂಟೆಗಳ ಕಾಲ ಸಮಯ ಬೇಕು. ಹೀಗಾಗಿ ಎಫ್ಐಆರ್ ಇಲ್ಲದೆ ಆರೋಪಿಯನ್ನು ಬಂಧಿಸುವುದು ಕಾನೂನುಬಾಹಿರವೆಂದು ಪೊಲೀಸರು ವಾಜಿದ್ ಪಾಷಾನಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು.
ಆದರೆ ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದ ವಾಜಿದ್ ಪಾಷಾ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ. ಜೊತೆಗೆ ನವೀನ್ನನ್ನು ಬಂಧಿಸಲು ಯಾಕೆ ಎರಡು ಗಂಟೆಗಳ ಕಾಲ ಸಮಯಬೇಕು. ಅದೇ ನಮ್ಮವರೇನಾದರು ಆಗಿದ್ದರೆ ಐದು ಸೆಕೆಂಡ್ನಲ್ಲಿ ಬಂಧಿಸುತಿದ್ದರು ಎಂದು ಕೂಗಾಡಿದ್ದನಂತೆ.
ಬಳಿಕ ಈತನ ಅಣತಿಯಂತೆ ಜೊತೆಗೆ ಬಂದಿದ್ದ ಬೆಂಬಲಿಗರು ಪೊಲೀಸ್ ಠಾಣೆಯನ್ನು ಧ್ವಂಸ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ವಾಜಿದ್ ಪಾಷಾನನ್ನು ಪೊಲೀಸರು ಬಂಧಿಸಿದ್ದಾರೆ.