
ಭಾರತದ ಸರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿರುವ ರಾಹುಲ್ ದ್ರಾವಿಡ್ ಬ್ಯಾಟ್ ಮಾಡುವಾಗ ಹೇಗೆ ಸ್ಟ್ರೇಟ್ಬ್ಯಾಟ್ ಉಪಯೋಗಿಸುತ್ತಿದರೋ ಅವರ ಮಾತುಗಳು ಸ್ಟ್ರೇಟ್ ಫಾರ್ವರ್ಡ್. ನೇರ ಮಾತು ಮತ್ತು ಯಾವುದೇ ವಿಷಯವನ್ನು ಇದ್ದದ್ದು ಇದ್ದ ಹಾಗೆ ಹೇಳುವ ಜಾಯಮಾನ ಅವರದ್ದು.
ದ್ರಾವಿಡ್ ಸಕ್ರಿಯ ಕ್ರಿಕೆಟ್ನಿಂದ ನಿವೃತ್ತರಾಗಿದ್ದರೂ ಕ್ರೀಡೆಗೆ ಹಲವಾರು ವಿಧಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಕೋಚ್ ಆಗಿ, ಐಪಿಎಲ್ ಟೀಮುಗಳಿಗೆ ಮೆಂಟರ್ ಅಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಅವರ ವಿಷಯವಾಗಿ ಮಾತಾಡುತ್ತಿರುವುದಕ್ಕೆ ಕಾರಣಗಳೇ ಬೇಕಿಲ್ಲ. ಅದಕ್ಕೆ ಬೇಕಾದಷ್ಟು ಸರಕು ನಮಗೆ ಸಿಗುತ್ತದೆ. ಈಗಿನ ಸಂದರ್ಭವೇನೆಂದರೆ. ಟಿ20 ಕ್ರಿಕೆಟನ್ನು ಒಲಂಪಿಕ್ಸ್ಗೆ ಸೇರಿಸಬೇಕೆಂದು ದ್ರಾವಿಡ್ ವಾದಿಸುತ್ತಿದ್ದಾರೆ.
ರಾಜಸ್ತಾನ್ ರಾಯಲ್ಸ್ ಫ್ರಾಂಚೈಸಿಯ ಮಾಲೀಕರಲ್ಲೊಬ್ಬರಾಗಿರುವ ಮನೋಜ್ ಬದಾಲೆ ಅವರ, ‘ಎ ನ್ಯೂ ಇನ್ನಿಂಗ್ಸ್’ ಪುಸ್ತಕ ಲಾಂಚಿನ ವರ್ಚುಅಲ್ ಸೆಮಿನಾರ್ನಲ್ಲಿ ಭಾಗವಹಿಸಿದ್ದ ದ್ರಾವಿಡ್, ‘ಟಿ20 ಫಾರ್ಮಾಟ್ ಕ್ರಿಕೆಟ್ ಒಲಂಪಿಕ್ಸ್ನಲ್ಲಿ ಒಂದು ಕ್ರೀಡೆಯಾಗಿ ಸೇರ್ಪಡೆಯಾದರೆ ಅದಕ್ಕಿಂತ ಸಂತೋಷ ಮತ್ತೇನಿದೆ? ಆದರೆ, ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಅದಕ್ಕೇ ಆದ ಸವಾಲುಗಳಿವೆ. ಅದಕ್ಕೆ ನಿರ್ದಿಷ್ಟವಾದ ಕೆಲ ಸೌಲಭ್ಯಗಳು ಬೇಕಾಗುತ್ತವೆ,’ ಎಂದು ದ್ರಾವಿಡ್ ಹೇಳಿದರು.
‘‘ಈ ಸಲದ ಐಪಿಎಲ್ ಭರ್ಜರಿ ಯಶ ಕಂಡಿದ್ದು ಬಹಳ ಸಂತೋಷವಾಗಿದೆ. ಈ ಪ್ರಮಾಣದ ಯಶಸ್ಸು ಅದು ಕಾಣಲು ಸಾಧ್ಯವಾಗಿದ್ದು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿನ ಕ್ವಾಲಿಟಿ ಪಿಚ್ಗಳಿಂದ. ಸ್ವಲ್ಪ ಯೋಚಿಸಿ ನೋಡಿ, ಯುಎಈಯಂಥ ಪಿಚ್ಗಳನ್ನು ಒಲಂಪಿಕ್ಸ್ ಆಯೋಜಿಸುವ ದೇಶ ಒದಗಿಸಬಹುದಾದರೆ, ಕ್ರಿಕೆಟ್ ಅನ್ನು ಯಾಕೆ ಸೇರಿಸಬಾರದು? ಕ್ರಿಕೆಟ್ ಹಾಗೆ ವಿಸ್ತರಣೆಯಾಗುವುದನ್ನು ನೋಡಲು ನಾನು ಉತ್ಸುಕನಾಗಿದ್ದೇನೆ. ಕ್ರಿಕೆಟ್ಗೆ ಸಂಬಂಧಪಟ್ಟವರು, ಅದರ ಆಡಳಿತದಲ್ಲಿರುವವರು ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳನ್ನು ಮಾಡಬೇಕು,’’ ಎಂದು ದ್ರಾವಿಡ್ ಹೇಳಿದರು.