
ಚಿಕ್ಕಮಗಳೂರು: ಸಾರಿಗೆ ನೌಕರರ ಮುಷ್ಕರ ಅಂತೂ ಇಂತೂ ಅಂತ್ಯ ಕಂಡಿತು ಎನ್ನುವಷ್ಟರಲ್ಲಿ ಮತ್ತೆ ಮುಂದುವರೆಯಲಿದೆ ಎಂಬ ಸುದ್ದಿ ಬಿದ್ದಿದೆ. ಉತ್ತರ ಕರ್ನಾಟಕ ಕಡೆಯಿಂದ ಮೂರು ದಿನಗಳ ಹಿಂದೆ ಚಿಕ್ಕಮಗಳೂರಿಗೆ ಬಂದ ಕಂಡಕ್ಟರ್ ಹಾಗೂ ಡ್ರೈವರ್ಗಳು ಕೊಂಚ ನಿರಾಳರಾಗುವಷ್ಟರಲ್ಲಿ ಮುಷ್ಕರ ಮುಂದುವರೆಯುವ ಸುದ್ದಿ ಮತ್ತೆ ನಡುಕ ಹುಟ್ಟಿಸಿದೆ. ಈ ನಡುಕಕ್ಕೆ ಕಾರಣ ಮಲೆನಾಡಿನ ಕೊರೆಯುವ ಚಳಿ. ಮೂರು ದಿನಗಳಿಂದ ಚಿಕ್ಕಮಗಳೂರಿನ ಕೊರೆವ ಚಳಿಯಲ್ಲಿ ಬಸ್ಸಿನಲ್ಲೇ ದಿನದೂಡುತ್ತಿರುವ ಅವರ ಪರಿಸ್ಥಿತಿ ನಿಜಕ್ಕೂ ಅಯ್ಯೋ.. ಪಾಪ!
ಬಸ್ ನಿಲ್ದಾಣದಲ್ಲೇ ಮುಖ ತೊಳೆದುಕೊಂಡು, ನಿಲ್ದಾಣದಲ್ಲೇ ಊಟ-ತಿಂಡಿ ಮಾಡಿ ರಾತ್ರಿ ಬಸ್ಸಿನೊಳಗೆ ಕಾಲ ಕಳೆಯುತ್ತಿರುವ ಡ್ರೈವರ್ ಹಾಗೂ ಕಂಡಕ್ಟರ್ಗಳ ಅವಸ್ಥೆ ಯಾರಿಗೂ ಬೇಡ ಎನ್ನುವಂತಾಗಿದೆ. ಒಂದೆಡೆ ಜೋರಾಗಿ ಬೀಸುವ ಗಾಳಿ. ಇನ್ನೊಂದೆಡೆ ಮೈಕೊರೆವ ರಣ ಚಳಿ. ಸಂಜೆ ಆರರಿಂದ ಬೆಳಗ್ಗೆ 9 ಗಂಟೆಯವರೆಗೆ ಚಳಿಯನ್ನು ತಡೆದುಕೊಳ್ಳುವುದೇ ಕಷ್ಟ ಎನ್ನುವ ಪರಿಸ್ಥಿತಿಯಲ್ಲಿ ಬಸ್ಸಿನಲ್ಲಿ ಮಲಗಿ ರಾತ್ರಿ ಕಳೆಯುತ್ತಿರುವ ಡ್ರೈವರ್, ಕಂಡಕ್ಟರ್ಗಳಿಗೆ ‘ಪ್ರತಿಭಟನೆಯ ಚಳಿ’ ಜೋರಾಗಿಯೇ ತಟ್ಟಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಭೀಕರ ಚಳಿಯ ಮಧ್ಯೆ ಕಂಡಕ್ಟರ್ ಹಾಗೂ ಡ್ರೈವರ್ಗಳು ಬಸ್ನಲ್ಲಿ ನಡುಗುತ್ತಲೇ ದಿನದೂಡುತ್ತಿದ್ದಾರೆ. ಹಾಸಿಕೊಳ್ಳಲು ಹಾಸಿಗೆ ಇಲ್ಲದೇ, ಹೊದ್ದು ಮಲಗಲು ದಪ್ಪನೆಯ ಬೆಡ್ಶೀಟ್, ರಗ್ ಕೂಡ ಇಲ್ಲದೇ, ಕೊರೆವ ಚಳಿ ನಡುವೆಯೂ ಇರುವ ಸೊಳ್ಳೆ ಕಾಟದಲ್ಲಿ ರಾತ್ರಿ ಕಳೆಯಲು ಹರಸಾಹಸ ಪಡುತ್ತಿದ್ದಾರೆ.
ಡ್ರೈವರ್ ಪ್ಲಾಸ್ಟಿಕ್ ಚಾಪೆ ಹಾಸಿಕೊಂಡು ಮಲಗಿದ್ರೆ, ಕಂಡಕ್ಟರ್ ರಟ್ಟಿನ ಬಾಕ್ಸ್ ಹಾಸಿಕೊಂಡು ಮಲಗುತ್ತಿದ್ದಾರೆ. ಚಳಿಯಲ್ಲಿ ನಡುಗುತ್ತಾ ಕಾಲ ದೂಡುವ ಮಧ್ಯೆ ಏಕಾಏಕಿ ಬೀಸುವ ಗಾಳಿ ಡ್ರೈವರ್, ಕಂಡಕ್ಟರ್ಗಳನ್ನ ಕಂಗಾಲಾಗಿಸುತ್ತಿದೆ.
ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಸಿಬ್ಬಂದಿಗಳು ಇಡೀ ರಾತ್ರಿ ನಿದ್ದೆ ಬರಲ್ಲ ಸಾರ್, ಭಾರೀ ಚಳಿ ಇದೆ ಎಂದು ಅಳಲು ತೋಡಿಕೊಂಡರು. ಈಗ ಪ್ರತಿಭಟನೆ ಮತ್ತೆ ಮುಂದುವರೆಯುವ ನಿರ್ಧಾರ ಹೊರಬಿದ್ದಿರುವುದರಿಂದ ಚಿಕ್ಕಮಗಳೂರಿನಲ್ಲಿ ದಿನ ಕಳೆಯುತ್ತಿರುವ ಡ್ರೈವರ್, ಕಂಡಕ್ಟರ್ಗಳಿಂತೂ ಚಳಿ ಹಿಡಿದಿರುವುದು ಸುಳ್ಳಲ್ಲ.
ಸಾರಿಗೆ ನೌಕರರ ಜೊತೆಗಿನ ಸರ್ಕಾರದ ಸಂಧಾನ ಸಕ್ಸಸ್: ನಾಳೆಯಿಂದ ಬಸ್ ರೈಟ್.. ರೈಟ್!