ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಸಂಪುಟದ 6 ಸಚಿವರು ಕೋರ್ಟ್ ಮೊರೆ ಹಿನ್ನೆಲೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಕೋರ್ಟ್ಗೆ ಹೋಗಿ ಮತ್ತಷ್ಟು ಗೋಜಲಾಗಿಸುವುದು ಒಳ್ಳೆಯ ಬೆಳವಣಿಗೆಯಲ್ಲ. ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಬಯಲಾದ ಹಿನ್ನೆಲೆ ಬಿಜೆಪಿ ಹೈಕಮಾಂಡ್ ಕೂಡಲೇ ರಾಜೀನಾಮೆ ಪಡೆದಿದೆ. ಈ ವೇಳೆ ಅನಾವಶ್ಯಕವಾಗಿ ಕೋರ್ಟ್ಗೆ ಹೋಗುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಚಿವರು ಕೋರ್ಟ್ಗೆ ಹೋಗಿದ್ದರಿಂದ ಸ್ವಲ್ಪ ಮಟ್ಟಿಗೆ ಮುಜುಗರವಾಗಿದೆ. ರಾಜಕೀಯ ಡೊಂಬರಾಟದಲ್ಲಿ ಸಿಡಿಗಳು ತನ್ನದೇ ಪ್ರಭಾವ ಬೀರುವುದನ್ನು ನೋಡುತ್ತಿದ್ದೇವೆ. ಟೆಕ್ನಾಲಜಿ ಸಾಕಷ್ಟು ಮುಂದುವರೆದಿದೆ. ಹೇಗೆ ಬೇಕಾದರೂ ಮ್ಯಾನಿಪ್ಯುಲೇಟ್ ಮಾಡಬಹುದು. ಆದರೆ ಆಗಿದ್ದೆಲ್ಲವೂ ಮ್ಯಾನಿಪ್ಯುಲೇಟ್ ಎಂದು ಹೇಳುತ್ತಿಲ್ಲ. ತನಿಖೆ ತನ್ನದೇ ಕಾರ್ಯ ಮಾಡುತ್ತದೆ. ನೈತಿಕತೆಗೆ ಪ್ರಾಮುಖ್ಯತೆ ಕೊಡುವುದು ನಮ್ಮೆಲ್ಲರ ಜವಾಬ್ದಾರಿ. ನೈತಿಕತೆಗೆ ತೊಂದರೆ ಬಂದಾಗ ಸಾಮಾಜಿಕ ವ್ಯವಸ್ಥೆಯಲ್ಲಿ ಕೂಡಾ ಅಧಪತನದ ಅಂಚಿಗೆ ಹೋಗುತ್ತದೆ. ಇಂತಹ ವಿಚಾರ ಬಂದಾಗ ರಾಜಕೀಯ ಲಾಭ ಪಡೆಯುವುದರಿಂದ ಒಳ್ಳೆಯದಾಗುವುದಿಲ್ಲ. ಆಡಳಿತಕ್ಕೂ ಇದು ತೊಂದರೆ ಆಗುತ್ತದೆ ಎಂದು ಹೇಳಿದರು.
ಜಾರಕಿಹೊಳಿ ವಿಚಾರದಲ್ಲಿ ಕೇಂದ್ರದವರು ನಮ್ಮಲ್ಲಿ ಕೇಳಿದ್ದರು. ಮಾಧ್ಯಮ ವರದಿ ಆಧಾರಿತವಾಗಿ ನಾವು ವರದಿ ಕೊಟ್ಟಿದ್ದೇವೆ. ಸ್ವಾಭಾವಿಕವಾಗಿ ಇಂತಹ ಆರೋಪ ಬಂದಾಗ ತನಿಖೆಗೆ ಮಂತ್ರಿಗಳು ಸಹಕಾರ ನೀಡಬೇಕು. ವೈಯಕ್ತಿಕವಾಗಿ ಹಲವಾರು ಜನ ಅವರ ಭಾವನೆಗಳನ್ನು ಕೋರ್ಟ್ನಲ್ಲಿ ವ್ಯಕ್ತಪಡಿಸಬಾರದು ಅಂತಾ ನಾವು ಮಧ್ಯಪ್ರವೇಶ ಮಾಡಲು ಆಗಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಕೂಡಾ ತನ್ನ ಭವಿಷ್ಯದ ಯೋಚನೆ ಇರುತ್ತದೆ. ಅದನ್ನು ನೋಡಿಕೊಂಡು ಅವರು ಹೆಜ್ಜೆ ಇಡುತ್ತಾರೆ. ಅದು ಅವರವರಿಗೆ ಬಿಟ್ಟಿದ್ದು. ಆದರೆ ಅನಾವಶ್ಯಕವಾಗಿ ಕೋರ್ಟ್ಗೆ ಹೋಗುವುದು ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟರು.
ಕೇರಳ ಮುಖ್ಯಮಂತ್ರಿ ವಿರುದ್ಧ ಸರಿತಾ ಆರೋಪ: ಪ್ರಕರಣದಲ್ಲಿ ಭಾಗಿಯಾದವರೇ ಮಾಹಿತಿ ಹೇಳಿದ್ದಾರೆ
ಕೇರಳ ಮುಖ್ಯಮಂತ್ರಿ ವಿರುದ್ಧ ಸರಿತಾ ಆರೋಪ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಡಿ.ವಿ.ಸದಾನಂದಗೌಡ ಪ್ರಕರಣದಲ್ಲಿ ಭಾಗಿಯಾದವರೇ ಮಾಹಿತಿ ಹೇಳಿರುವ ಕಾರಣ ಇದು ಗಂಭೀರ ಸ್ವರೂಪದ್ದು. ಪಿಣರಾಯಿ ವಿಜಯನ್ ಇದು ಚುನಾವಣೆಗಾಗಿ ಮಾಡಿರುವುದು ಅಂತಾ ಹೇಳಬಹುದು. ಇಂತಹದ್ದು ಬಂದ ಮೇಲೆ ಅವರು ಸ್ವಯಂ ಪ್ರೇರಿತರಾಗಿ ಅವರ ರಾಜಕೀಯ ನಿಲುವು ತೆಗೆದುಕೊಳ್ಳುವುದು ಸೂಕ್ತ. ರಾಜೀನಾಮೆ ಕೊಡುವ ಬಗ್ಗೆ ಅವರಲ್ಲಿ ನೈತಿಕತೆ ಇದ್ದರೆ ಅವರು ಪರಿಶೀಲನೆ ಮಾಡಬೇಕು ಎಂದು ಹೇಳಿದರು.