ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ನರ್ತನ ಕಡಿಮೆಯಾಗುವ ಸುಳಿವೇ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ತೀವ್ರತೆ ಹೆಚ್ಚಾಗುತ್ತಿದೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೇ ನಿಟ್ಟಿನಲ್ಲಿ ಬಿಬಿಎಂಪಿ ಮಾಸ್ಕ್ ಹಾಕದವರಿಗೆ 1 ಸಾವಿರ ರೂಪಾಯಿ ದಂಡ ಹಾಕುತ್ತಿದೆ. ಆದರೆ ಬಿಬಿಎಂಪಿಯ ಈ ನಿಲುವು ಅನೇಕರಿಗೆ ಅಸಮಾಧಾನ/ ಆಕ್ರೋಶ ತಂದಿದೆ. 1 ಸಾವಿರ ದಂಡ ಹಾಕೋ ಬಗ್ಗೆ ತಜ್ಞರು ಸಹ ಬೇಸರ ವ್ಯಕ್ತಪಡಿಸಿದ್ದಾರೆ.
ಸಾವಿರ ರೂ ದಂಡದ ಜೊತೆಗೆ ಮಾಸ್ಕ್ ನೀಡಿ:
ಹೌದು ಕೊರೊನಾ ಸಂಕಷ್ಟದಿಂದ ಹೊಡೆತ ತಿಂದ ಜನ ಮೆಲ್ಲನೆ ಸುಧಾರಿಸಿಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಬಿಬಿಎಂಪಿ ಸಾವಿರ ರೂಪಾಯಿಗಳ ದಂಡ ವಸೂಲಿ ಮಾಡುತ್ತಿದೆ. ಹೀಗಾಗಿ ಮಾಸ್ಕ್ ಹಾಕದವರ ಬಳಿ 1 ಸಾವಿರ ರೂಪಾಯಿ ದಂಡ ವಸೂಲಿ ಮಾಡಿ ಜೊತೆಗೆ ಮಾಸ್ಕ್ ನೀಡಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದಂಡ ಹಾಕಿಸಿಕೊಂಡ ವ್ಯಕ್ತಿಗೆ ಸರ್ಕಾರವೇ ಮಾಸ್ಕ್ ನೀಡಬೇಕು. 10 ಮಾಸ್ಕ್ಗಳನ್ನ ಉಚಿತವಾಗಿ ನೀಡಬೇಕು. ಆ ಮೂಲಕ ಅರಿವು ಮೂಡಿಸೋದ್ರ ಜೊತೆಗೆ ಅನುಕೂಲ ಕೂಡಾ ಆಗಲಿದೆ. ಬರೀ ದಂಡ ಹಾಕೋದ್ರಿಂದ ಅನಾನುಕೂಲವಾಗಲಿದೆ ಎಂದು ತಜ್ಞರು ಬೇಸರ ವ್ಯಕ್ತಪಡಿಸಿದ್ದಾರೆ.
ದಂಡದ ಜೊತೆಗೆ ಮಾಸ್ಕ್ ನೀಡಿದಾಗ ಮಾತ್ರ ದುಬಾರಿ ದಂಡ ಪ್ರಯೋಗ ಯಶಸ್ವಿಯಾಗಲಿದೆ. ಬರೀ ದಂಡ ಹಾಕೋದ್ರಿಂದ ಜನ ಸಿಟ್ಟಿಗೇಳೋ ಸಾಧ್ಯತೆ ಇದೆ. ಮಾರ್ಷಲ್ಗಳಿಗೆ ಸರ್ಕಾರ ಮಾಸ್ಕ್ಗಳನ್ನ ಕೊಟ್ಟು ಅರಿವು ಮೂಡಿಸಬೇಕು. ಸಾರ್ವಜನಿಕರ ಬಳಿ ದಂಡ ವಸೂಲಿ ಮಾಡುವುದು ಅರಿವು ಮೂಡಿಸೋ ಕ್ರಮವಾಗಬೇಕೇ ವಿನಃ ದುಡ್ಡು ವಸೂಲಿ ಮಾಡೋಹಾಗಾಗಬಾರದು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಇನ್ನು ಅಕ್ಟೋಬರ್ 2 ರಿಂದ ಒಂದು ಸಾವಿರ ರೂಪಾಯಿ ದಂಡ ಜಾರಿಯಾಗಿದೆ. ಹಾಗಿದ್ರೆ ಇಲ್ಲಿಯ ವರೆಗೆ ವಸೂಲಿಯಾಗಿರುವ ದಂಡವೆಷ್ಟು ಅಂದ್ರೆ.. ಅಕ್ಟೋಬರ್ 2 ರಂದು ಅಂದ್ರೆ ಮೊದಲ ದಿನವೇ 5,65,200 ದಂಡ ವಸೂಲಿಯಾಗಿದೆ. ನಂತರ ಅ.3 ರಂದು 403767,ಅ.4 ರಂದು 4,36,067, ಅ.5 ರಂದು 4,78,000, ಅ.6 ರಂದು 5,50,000.
ಕಳೆದ ಐದು ದಿನದಲ್ಲಿ 24,33,034 ರೂಪಾಯಿ ಸಂಗ್ರಹವಾಗಿದೆ. ಜೂನ್ 6 ರಿಂದ ನಿನ್ನೆ ವರೆಗೂ ಒಟ್ಟು 2,97,14,055 ರೂಪಾಯಿ ದಂಡ ವಸೂಲಿಯಾಗಿದೆ. ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನರಿಂದ 2 ಕೋಟಿ 97 ಲಕ್ಷ ದಂಡ ವಸೂಲಿಯಾಗಿದೆ.