
ಕೋಲಾರ: ಹಗಲಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುವ ಹೂವಿನ ತೋಟ. ರಾತ್ರಿಯಾಗುತ್ತಲೇ ತೋಟದಲ್ಲಿ ಕಾಣಸಿಗುತ್ತೆ ನಕ್ಷತ್ರ ಲೋಕ. ಅರೆ ಇದೆಂತ ಸುದ್ದಿ ಆಕಾಶದಲ್ಲಿರುವ ನಕ್ಷತ್ರಗಳು ಭೂಮಿ ಮೇಲೆ ಬಿದ್ವಾ ಅಂತ ಕನ್ಫ್ಯೂಸ್ ಆಗ್ಬೇಡಿ. ಇದು ಭೂಮಿ ಮೇಲೆ ರೈತ ಸೃಷ್ಟಿಸಿರೋ ನಕ್ಷತ್ರ ಲೋಕ.
ಕೋಲಾರ ತಾಲೂಕು ಗಡಿಭಾಗದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾವರೆಕೆರೆ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಒಂದು ಅಪರೂಪದ ಹೂವಿನ ತೋಟವಿದೆ. ತಾವರೆಕೆರೆ ಗ್ರಾಮದ ಶಿವಕುಮಾರ್ ಅನ್ನೋರ ಸೇವಂತಿ ಹೂವಿನ ತೋಟದಲ್ಲಿ ವಿಭಿನ್ನವಾಗಿ ಹೂವನ್ನು ಬೆಳೆಯಲಾಗುತ್ತಿದೆ. ಶಿವಕುಮಾರ್, ತಮ್ಮ ನಾಲ್ಕು ಎಕರೆಯಲ್ಲಿ ಐಶ್ವರ್ಯ ಅನ್ನೋ ತಳಿಯ ಸೇವಂತಿಗೆಯನ್ನು ಬೆಳೆಯುತ್ತಿದ್ದಾರೆ.
ಎಲ್ಇಡಿ ಬಲ್ಬ್ಗಳಿಂದ ತೋಟಕ್ಕೆ ನಕ್ಷತ್ರದ ಅಂದ:
ಈಗ ಚಳಿಗಾಲ ಜೊತೆಗೆ ಹಗಲು ಕಡಿಮೆ ರಾತ್ರಿ ಹೆಚ್ಚು, ಇಂಥಹ ವಾತಾವರಣದಲ್ಲಿ ಹೂವು ಚೆನ್ನಾಗಿ ಬೆಳೆಯೋದಿಲ್ಲ ಅನ್ನೋ ಕಾರಣಕ್ಕೆ ತಮ್ಮ ನಾಲ್ಕು ಎಕರೆ ಹೂವಿನ ತೋಟಕ್ಕೆ ಎಲ್ಇಡಿ ಬಲ್ಪಿಗಳನ್ನು ಅಳವಡಿಸಿ ಕೃತಕ ಬೆಳಕು ಸೃಷ್ಟಿಮಾಡಿದ್ದಾರೆ. ಸುಮಾರು 1500 ಬಲ್ಪ್ಗಳನ್ನು ಅಳವಡಿಸಿ ಸೂರ್ಯ ಮುಳುಗಿದ ನಂತರ ತಮ್ಮ ತೋಟಕ್ಕೆ ವಿದ್ಯುತ್ ಬೆಳಕನ್ನು ನೀಡುತ್ತಿದ್ದಾರೆ.
ಇನ್ನು 45 ದಿನಗಳು ಈ ರೀತಿ ಲೈಟ್ ಹಾಕಿದ ಹಿನ್ನೆಲೆಯಲ್ಲಿ ವಿದ್ಯುತ್ ಬಿಲ್ 50 ರಿಂದ 60 ಸಾವಿರ ರೂಪಾಯಿ ಬರುತ್ತದೆ. ಈ ರೀತಿ ಬೆಳಕು ನೀಡುವುದರಿಂದ ಒಂದು ಎಕರೆಗೆ ಎಲ್ಲಾ ವೆಚ್ಚ ಸೇರಿ ಎರಡುವರೆ ಲಕ್ಷದಷ್ಟು ಬರುತ್ತದೆಯಂತೆ.
ರೈತ ಅಂದ್ರೆ ಕೇವಲ ಸಾಂಪ್ರದಾಯಿಕ ಕೃಷಿ ಮಾಡದೆ ಈ ರೀತಿ ಹೊಸ ಪ್ರಯೋಗಗಳನ್ನು ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅದರಲ್ಲೂ ರಾತ್ರಿ ಈ ನಕ್ಷತ್ರದ ತೋಟ ಸಾಕಷ್ಟು ಜನರ ಗಮನ ಸೆಳೆದಿದ್ದು ಮಾತ್ರ ಸುಳ್ಳಲ್ಲ.
-ರಾಜೇಂದ್ರಸಿಂಹ