ನೀರಾವರಿ ಸೌಲಭ್ಯ ಕೊರತೆ: ಯಾದಗಿರಿಯ ರೈತರು ಕಂಗಾಲು

| Updated By: ರಶ್ಮಿ ಕಲ್ಲಕಟ್ಟ

Updated on: Jan 27, 2021 | 1:37 PM

ತಾಲೂಕಿನ ಚಾಮನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಲುವೆಯ ಕೊನೆ ಭಾಗದ ರೈತರಿಗೆ ಸಮರ್ಪಕ ನೀರು ಸಿಗುತ್ತಿಲ್ಲ. ಸನ್ನತಿ ಏತ ನೀರಾವರಿ ಯೋಜನೆ ಅನ್ನದಾತನಿಗೆ ಕಣ್ಣೀರೇ ಗತಿಯಾಗಿದೆ.

ನೀರಾವರಿ ಸೌಲಭ್ಯ ಕೊರತೆ: ಯಾದಗಿರಿಯ ರೈತರು ಕಂಗಾಲು
ಕಾಲುವೆ
Follow us on

ಯಾದಗಿರಿ:  ಜಿಲ್ಲೆಯಲ್ಲಿ ಎರಡು ನದಿಗಳು ಹರಿಯುತ್ತದೆ. ಆದರೂ ಕೆಲ ಭಾಗಕ್ಕೆ ನೀರಾವರಿ ಸೌಲಭ್ಯ ಸಿಗುತ್ತಿಲ್ಲ. ಹೀಗಾಗಿ ಏತ ನೀರಾವರಿ ಮೂಲಕ ಜಿಲ್ಲೆ ಸೇರಿದಂತೆ ಪಕ್ಕದ ಜಿಲ್ಲೆಯ ಕೆಲ ಕೃಷಿ ಭೂಮಿಗೆ ನೀರು ಪೂರೈಸುವ ಉದ್ದೇಶವನ್ನು ಸರ್ಕಾರ ಹೊಂದಿತ್ತು. ಆದರೆ ಆಮೆ ಗತಿಯಲ್ಲಿ ಸಾಗಿದ ಕಾಮಗಾರಿಯಿಂದಾಗಿ ಈಗ ಆ ಭಾಗದ ಜನರು ರೋಸಿ ಹೋಗಿದ್ದಾರೆ. ಕಾಲುವೆಗಾಗಿ ಜಮೀನು ಕೊಟ್ಟ ರೈತರು ಇತ್ತ ಪರಿಹಾರವೂ  ಇಲ್ಲ, ಅತ್ತ ನೀರು ಇಲ್ಲದೆ ಪರದಾಡುವಂತಾಗಿದೆ.

ರೈತರಿಗೆ ಪರಿಹಾರವಿಲ್ಲ
ತಾಲೂಕಿನ ಚಾಮನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಲುವೆಯ ಕೊನೆ ಭಾಗದ ರೈತರಿಗೆ ಸಮರ್ಪಕ ನೀರು ಸಿಗುತ್ತಿಲ್ಲ. ಸನ್ನತಿ ಏತ ನೀರಾವರಿ ಯೋಜನೆ ಅನ್ನದಾತನಿಗೆ ಕಣ್ಣೀರೇ ಗತಿಯಾಗಿದೆ. ಕಾಲುವೆಗಾಗಿ ಭೂಮಿ ಕೊಟ್ಟ ರೈತರಿಗೆ ಪರಿಹಾರ ಇನ್ನು ಸಿಗಲಿಲ್ಲ. ಹೀಗಾಗಿ ಬೇಸತ್ತ ರೈತರು, ದೊಡ್ಡ ದೊಡ್ಡ ಆಸೆಗಳನ್ನು ಇಟ್ಟುಕೊಂಡು ಖುಷಿ ಪಟ್ಟಿದ್ದೆವು. ಆದರೆ ಎಲ್ಲವೂ ನಿರಾಶೆ, ಕೇವಲ ಭರವಸೆಯಾಗಿದೆ ಎಂದು ಹೇಳುತ್ತಿದ್ದಾರೆ.

ರೈತರ ಅನುಕೂಲಕ್ಕಾಗಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸನ್ನತಿ ಬ್ರಿಡ್ಜ್ ಕಮ್ ಬ್ಯಾರೇಜ್​ನಿಂದ ಕಾಲುವೆ ಅಳವಡಿಸಿ ಕಲಬುರಗಿ, ಯಾದಗಿರಿಯ ಸುಮಾರು 16 ಸಾವಿರ ಹೆಕ್ಟೇರ್ ಪ್ರದೇಶಗಳಿಗೆ ನೀರಾವರಿ ಪೂರೈಸುವ ಉದ್ದೇಶ ಹೊಂದಿತ್ತು. 673 ಕೋಟಿ ಅನುಧಾನದೊಂದಿಗೆ 2012 ರಲ್ಲಿ ಮಾರ್ಕಿಂಗ್ ಮಾಡಿ 2013 ರಲ್ಲಿ ಕಾಮಗಾರಿ ಆರಂಭ ಮಾಡಿದ್ದರು. ಆದರೆ ಆಮೆ ಗತಿಯಲ್ಲಿ ಸಾಗಿದ್ದ ಕಾಮಗಾರಿ ಐದಾರು ವರ್ಷ ನಡೆದಿತ್ತು. ಕಾಲುವೆ ವ್ಯಾಪ್ತಿಯ ರೈತರ ಒತ್ತಾಯಕ್ಕೆ 2018 ರಲ್ಲಿ ತರಾತುರಿಯಲ್ಲೇ ನೀರು ಹರಿಸಲಾಗಿದೆ. ಕಾಮಗಾರಿ ಕಳಪೆಯಾಗಿರುವುದರಿಂದ ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಇದರಿಂದಾಗಿ ರೈತರು ಕಂಗಾಲಾಗಿದ್ದಾರೆ.

ಒಡೆದು ಹೋದ ಕಾಲುವೆ
ಕಾಮಗಾರಿ ತರಾತುರಿಯಲ್ಲಿ ಮುಗಿಸಿದ್ದರಿಂದ ಕಾಲುವೆ ಮಳೆ ನೀರಿಗೆ ಎಲ್ಲಂದರಲ್ಲಿ ಒಡೆದು ಹೋಗಿವೆ.  ಕಾಲುವೆ ಒಡೆದು ಹೋದ ಕಾರಣ  ನೀರು ಬಿಟ್ಟಾಗ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಕೂಡ ಹಾಳಾಗಿರುವ ಸಂಗತಿಗಳು ನಡೆದಿವೆ.  ಈ ಕಾಲುವೆ ನಿರ್ಮಾಣಕ್ಕಾಗಿ ಚಾಮನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ರೈತರು ಭೂಮಿಯನ್ನು ನೀಡಿದ್ದಾರೆ. ಸರ್ಕಾರಿ ಬೆಲೆಯಂತೆ ಮೂರು ಪಟ್ಟು ಹೆಚ್ಚು ಹಣವನ್ನು ರೈತರಿಗೆ ಪರಿಹಾರದ ರೂಪದಲ್ಲಿ ಕೊಡಬೇಕು. ಆದರೆ ಆದು ಕೂಡ ರೈತರಿಗೆ ಸಿಕ್ಕಿಲ್ಲ. ಇನ್ನು ಕಾಲುವೆಗಾಗಿ ಭೂಮಿ ಬಳಸಿಕೊಳ್ಳುವಾಗ ರೈತರ ಜಮೀನಿನಲ್ಲಿ ಬೆಳೆ ಕೂಡ ಇತ್ತು ಅದಕ್ಕೂ ಪರಿಹಾರ ಕೊಡುವುದಾಗಿ ಹೇಳಿದ ಅಧಿಕಾರಿಗಳು ಮಾಯವಾಗಿದ್ದಾರೆ. ಆಗಿದ್ದು ಆಗಲಿ ನಮ್ಮ ಜಮೀನುಗಳಿಗೆ ನೀರಾದರೂ ಸಿಗುತ್ತದೆ ಎಂದು ಸುಮ್ಮನ್ನಾಗಿದ್ದು, ಕಳೆದ ಆರೇಳು ವರ್ಷಗಳಿಂದ ನೀರಿಗಾಗಿ ಕಾಯುವುದೇ ಕೆಲಸವಾಗಿದೆ ಎಂದು ರೈತ ಮೊಹ್ಮದ್ ಶಫೀ ತಿಳಿಸಿದ್ದಾರೆ.

ಪಾಠ ಹೇಳಿಕೊಡುವ ಕೃಷಿ ವಿಶ್ವವಿದ್ಯಾಲಯ ರೈತರ ಪಾಲಿಗೆ ಹೇಗೆ ವರವಾಗಿದೆ ಗೊತ್ತಾ? ತಪ್ಪದೇ ಓದಿ..