ನವದೆಹಲಿ: ವಿಮಾ ವಲಯದಲ್ಲಿ ವಿದೇಶಿ ನೇರ ಹೂಡಿಕೆಯನ್ನು (ಎಫ್ಡಿಐ) ಶೇ 49ರಿಂದ ಶೇ 74ಕ್ಕೆ ಏರಿಕೆ ಮಾಡುವ ಮಸೂದೆಗೆ ಗುರುವಾರ (ಮಾರ್ಚ್ 18) ರಾಜ್ಯಸಭೆಯಲ್ಲಿ ಅನುಮೋದನೆ ದೊರೆತಿದೆ. ವಿಮೆ (ತಿದ್ದುಪಡಿ) ಮಸೂದೆ, 2021 ರಾಜ್ಯಸಭೆಯಲ್ಲಿ ಅನುಮೋದನೆ ಆಗಿದ್ದು, ಪ್ರಮುಖ ನಿರ್ವಹಣೆಯ ವ್ಯಕ್ತಿಗಳು ಹಾಗೂ ಆಡಳಿತ ಮಂಡಳಿ ನಿರ್ದೇಶಕರು ಭಾರತೀಯರೇ ಆಗಿರುತ್ತಾರೆ. ಹೊಸ ರಚನೆಯು ಕನಿಷ್ಠ ಶೇ 50ರಷ್ಟು ನಿರ್ದೇಶಕರು ಸ್ವತಂತ್ರ ನಿರ್ದೇಶಕರಾಗಿರಲು ಅವಕಾಶ ಒದಗಿಸುತ್ತದೆ. ಇನ್ನು ನಿರ್ದಿಷ್ಟ ಪ್ರಮಾಣದ ಲಾಭವನ್ನು ಸಾಮಾನ್ಯ ಮೀಸಲು ನಿಧಿ ಎಂದು ಎತ್ತಿಡಬೇಕಾಗುತ್ತದೆ.
ಹತೋಟಿ ಎಂಬ ವಿಚಾರದ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ಹತೋಟಿ ಅಂದರೆ ಬಹುಪಾಲು ನಿರ್ದೇಶಕರು ಮತ್ತು ಮುಖ್ಯ ನಿರ್ವಹಣೆಗೆ ಭಾರತೀಯ ನಿವಾಸಿಗಳನ್ನೇ ನೇಮಿಸಬೇಕು ಎಂಬ ಹಕ್ಕು ಇದು. ನಿರ್ದಿಷ್ಟ ಪ್ರಮಾಣದ ಲಾಭವನ್ನು ಸಾಮಾನ್ಯ ಮೀಸಲು ನಿಧಿ ಎಂದು ಎತ್ತಿಡಬೇಕು. ಈ ನೆಲದ ಕಾನೂನು ನ್ಯಾಯಸಮ್ಮತವಾಗಿ ಪಕ್ವವಾಗಿದೆ. ಯಾರೋ ಅದನ್ನು ಪಕ್ಕಕ್ಕೆ ಸರಿಸಿ, ನಾವು ನೋಡಿಕೊಂಡು ಕೂರುವಂತೆ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ದೇಶದ ಪಾಲಿಸಿದಾರರ ಹಣವನ್ನು ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಭಾರತದ ಹೊರಗೆ ಹೂಡಿಕೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ನಿರ್ಮಲಾ ಸ್ಪಷ್ಟಪಡಿಸಿದ್ದಾರೆ. ಇನ್ನು ಇನ್ಷೂರೆನ್ಸ್ ಸಂಸ್ಥೆಗಳು ಹೇಗೆ ನಿರ್ಧಾರ ಕೈಗೊಳ್ಳುತ್ತವೆ ಎಂದು ಕಣ್ಣಿಟ್ಟಿರಲಾಗುತ್ತದೆ ಎಂದಿದ್ದಾರೆ. ಈಗ ವಿದೇಶಿ ನೇರ ಬಂಡವಾಳ ಮಿತಿ ಹೆಚ್ಚಳವಾಗಿದೆ ಅಂದರೆ, ಅಷ್ಟು ಪರ್ಸೆಂಟ್ ತನಕ ವಿದೇಶಿ ಹೂಡಿಕೆ ತರುವುದು ಅಂತಲ್ಲ. ಹಣ ಬೇಕೆ? ಯಾವ ಮೊತ್ತ ಬೇಕಾಗುತ್ತದೆ ಎಂಬ ಬಗ್ಗೆ ಪ್ರತಿ ಕಂಪೆನಿಯೂ ತಾವಾಗಿಯೇ ನಿರ್ಧರಿಸುತ್ತವೆ. ಈಗಿನ ತಿದ್ದುಪಡಿಯಿಂದ ಸ್ವಲ್ಪ ಹಣ ಪಡೆಯುವುದಕ್ಕೆ ಅನುಕೂಲ ಮಾಡಿಕೊಡುತ್ತದೆ. ಆದರೆ ಶೇ 74 ದಾಟುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.
ಸುರಕ್ಷತೆಯೊಂದಿಗೆ ಎಫ್ಡಿಐ ಹೆಚ್ಚಳ ಮಾಡಬೇಕು ಎಂಬ ಬಗ್ಗೆ ಐಆರ್ಡಿಎಐ ಹೇಳಿದ್ದಾಗಿ ನಿರ್ಮಲಾ ತಿಳಿಸಿದ್ದಾರೆ. ಈ ಮಧ್ಯೆ, ವಿಮಾ ಕ್ಷೇತ್ರದಲ್ಲಿ ಎಫ್ಡಿಐ ಮಿತಿ ಹೆಚ್ಚಳವನ್ನು ವಿರೋಧಿಸಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ರಾಜ್ಯಸಭೆಯಲ್ಲಿ ಸಭಾ ತ್ಯಾಗ ಮಾಡಿದವು. 2021ರ ಬಜೆಟ್ನಲ್ಲಿ ವಿಮಾ ಕ್ಷೇತ್ರದಲ್ಲಿ ಎಫ್ಡಿಐ ಮಿತಿಯನ್ನು ಶೇ 74ಕ್ಕೆ (ಈ ಹಿಂದೆ ಶೇ 49 ಇತ್ತು) ಹೆಚ್ಚಿಸುವ ಪ್ರಸ್ತಾವ ಮಾಡಲಾಗಿತ್ತು. ವಿಮೆ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸಂಪುಟವು ಒಪ್ಪಿಗೆ ನೀಡಿತ್ತು. ಇದಕ್ಕೂ ಮುನ್ನ 2015ನೇ ಇಸವಿಯಲ್ಲಿ ಮೋದಿ ನೇತೃತ್ವದ ಸರ್ಕಾರವು ವಿಮೆ ಕ್ಷೇತ್ರದಲ್ಲಿ ಇದ್ದ ಎಫ್ಡಿಐ ಮಿತಿ ಶೇ 26 ಅನ್ನು ಶೇ 49ಕ್ಕೆ ಹೆಚ್ಚಿಸಿತ್ತು.
ಇದನ್ನೂ ಓದಿ: ಗಡಿ ಸಂಘರ್ಷವಿದ್ದರೂ 2020ರಲ್ಲಿಯೂ ಚೀನಾದಿಂದಲೇ ಭಾರತ ಅತಿಹೆಚ್ಚು ಆಮದು