ಗಡಿ ಸಂಘರ್ಷವಿದ್ದರೂ 2020ರಲ್ಲಿಯೂ ಚೀನಾದಿಂದಲೇ ಭಾರತ ಅತಿಹೆಚ್ಚು ಆಮದು
ಭಾರತ ಮತ್ತು ಚೀನಾ ಮಧ್ಯೆ 2020ರಲ್ಲಿ ಉದ್ವಿಗ್ನ ವಾತಾವರಣ ಇತ್ತು. ಚೀನಾವಿರೋಧಿ ಭಾವನೆ ದೇಶದಾದ್ಯಂತ ಇದ್ದರೂ ಭಾರತ ಆಮದು ಮಾಡಿಕೊಂಡ ಟಾಪ್ ಐದು ದೇಶಗಳಲ್ಲಿ ಚೀನಾವೇ ಮೊದಲ ಸ್ಥಾನದಲ್ಲಿದೆ.
ಭಾರತ- ಚೀನಾ ಮಧ್ಯೆ 2020ನೇ ಇಸವಿಯಲ್ಲಿ ಬಹುತೇಕ ಉದ್ವಿಗ್ನ ವಾತಾವರಣವೇ ಇತ್ತು. ವಾಸ್ತವ ನಿಯಂತ್ರಣ ರೇಖೆ (Line of Actual Control – LAC) ಬಳಿ ಹಾಗೂ ಗಲ್ವಾನ್ ಕಣಿವೆಯಲ್ಲಿ ಉದ್ಭವಿಸಿದ ಸನ್ನಿವೇಶದ ಪರಿಣಾಮ ಇದಾಗಿತ್ತು. ಆದರೂ 2020ರ ಜನವರಿಯಿಂದ ಡಿಸೆಂಬರ್ ಮಧ್ಯೆ ಭಾರತವು ವಸ್ತುಗಳನ್ನು ಆಮದು ಮಾಡಿಕೊಂಡ ದೇಶಗಳ ಪಟ್ಟಿಯ ಟಾಪ್ನಲ್ಲಿ ಚೀನಾವೇ ಇದೆ. 2020ರಲ್ಲಿ 58.71 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ವಸ್ತುಗಳು ಚೀನಾದಿಂದ ಆಮದಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ರಾಜ್ಯ ಸಚಿವರಾದ ಹರ್ದೀಪ್ ಸಿಂಗ್ ಪುರಿ ಲೋಕಸಭೆಗೆ ಬುಧವಾರ ಮಾಹಿತಿ ನೀಡಿದ್ದಾರೆ. ತೃಣಮೂಲ ಕಾಂಗ್ರೆಸ್ ಸಂಸದರಾದ ಮಾಲಾ ರಾಯ್ ಅವರ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿದ್ದಾರೆ.
ಸಚಿವರು ಈ ಬಗ್ಗೆ ನೀಡಿರುವ ಲಿಖಿತ ಉತ್ತರದಲ್ಲಿ, ಚೀನಾ, ಅಮೆರಿಕ, ಯುಎಇ, ಸೌದಿ ಅರೇಬಿಯಾ ಹಾಗೂ ಇರಾಕ್ ಈ ಐದು ದೇಶಗಳು ಭಾರತಕ್ಕೆ ಆಮದು ಮಾಡಿರುವ ಪಟ್ಟಿಯಲ್ಲಿ ಮೊದಲ ಐದು ಸ್ಥಾನದಲ್ಲಿವೆ ಎಂದಿದ್ದಾರೆ. ಚೀನಾದಿಂದ 58.71 ಬಿಲಿಯನ್ ಅಮೆರಿಕನ್ ಡಾಲರ್, ಅಮೆರಿಕದಿಂದ 26.89 ಬಿಲಿಯನ್ ಅಮೆರಿಕನ್ ಡಾಲರ್, ಯುನೈಟೆಡ್ ಅರಬ್ ಎಮಿರೇಟ್ಸ್ನಿಂದ 23.96 ಬಿಲಿಯನ್ ಯುಎಸ್ಡಿ, ಸೌದಿ ಅರೇಬಿಯಾದಿಂದ 17.73 ಬಿಲಿಯನ್ ಡಾಲರ್ ಹಾಗೂ ಇರಾಕ್ನಿಂದ 16.26 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ವಸ್ತುಗಳನ್ನು 2020ರ ಜನವರಿಯಿಂದ ಡಿಸೆಂಬರ್ ಮಧ್ಯೆ ಆಮದು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಭಾರತವು ಒಟ್ಟು 371.98 ಬಿಲಿಯನ್ ಯುಎಸ್ಡಿಯಷ್ಟು ಆಮದು ಮಾಡಿಕೊಂಡಿದ್ದು, ಆ ಪೈಕಿ ಶೇಕಡಾ 38.59ರಷ್ಟು ಮೌಲ್ಯದ್ದು, ಅಂದರೆ 143.55 ಬಿಲಿಯನ್ ಯುಎಸ್ಡಿ ಮೌಲ್ಯದ ವಸ್ತುಗಳ ಆಮದು ಐದು ದೇಶಗಳಿಂದ ಆಗಿದೆ. ದೇಶೀಯ ಉತ್ಪಾದನೆ ಮತ್ತು ಪೂರೈಕೆ ಮಧ್ಯದ ವ್ಯತ್ಯಾಸವನ್ನು ಭರ್ತಿ ಮಾಡಲು ಹಾಗೂ ವಿವಿಧ ವಸ್ತುಗಳಿಗೆ ಗ್ರಾಹಕರ ಬೇಡಿಕೆ ಮತ್ತು ಆದ್ಯತೆಯ ಕಾರಣಕ್ಕೆ ಆಮದು ಮಾಡಿಕೊಳ್ಳಲಾಗಿದೆ. ಟೆಲಿಕಾಂ ಸಾಧನಗಳು, ಕಂಪ್ಯೂಟರ್ ಹಾರ್ಡ್ವೇರ್ ಮತ್ತು ಪೆರಿಫರಲ್ಗಳು, ಗೊಬ್ಬರ, ಎಲೆಕ್ಟ್ರಾನಿಕ್ ಬಿಡಿ ಭಾಗಗಳು ಮತ್ತು ಸಾಧನ, ಪ್ರಾಜೆಕ್ಟ್ ವಸ್ತುಗಳು, ಸಾವಯವ ರಾಸಾಯನಿಕಗಳು, ಗ್ರಾಹಕ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ ಮಶೀನರಿಗಳು ಮುಂತಾದವು ಆಮದು ಮಾಡಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: Jack Ma: ಜಾಕ್ ಮಾಗೆ ಸೇರಿದ ಉದ್ಯಮಗಳ ಕತ್ತು ಹಿಸುಕುತ್ತಿದೆ ಚೀನಾದ ಕಮ್ಯುನಿಸ್ಟ್ ಸರ್ಕಾರ