AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jack Ma: ಜಾಕ್ ಮಾಗೆ ಸೇರಿದ ಉದ್ಯಮಗಳ ಕತ್ತು ಹಿಸುಕುತ್ತಿದೆ ಚೀನಾದ ಕಮ್ಯುನಿಸ್ಟ್ ಸರ್ಕಾರ

ಚೀನಾ ಹಾಗೂ ಉದ್ಯಮಿ ಜಾಕ್ ಮಾ ಮಧ್ಯದ ಪ್ರೀತಿ ಈಗ ಕರಗಿ ಹೋದಂತಿದೆ. ಅಷ್ಟೇ ಅಲ್ಲ, ಜಾಕ್ ಮಾ- ಅಲಿಬಾಬ ಸಮೂಹವನ್ನು ಹಣಿಯಲು ಚೀನಾ ಸರ್ಕಾರ ಈಗ ಹೊಸ ಸೂಚನೆ ನೀಡಿದೆ. ಮಾಧ್ಯಮ ಆಸ್ತಿಯನ್ನು ಮಾರಾಟ ಮಾಡುವಂತೆ ಸೂಚಿಸಿದೆ ಎಂದು ವರದಿ ಆಗಿದೆ.

Jack Ma: ಜಾಕ್ ಮಾಗೆ ಸೇರಿದ ಉದ್ಯಮಗಳ ಕತ್ತು ಹಿಸುಕುತ್ತಿದೆ ಚೀನಾದ ಕಮ್ಯುನಿಸ್ಟ್ ಸರ್ಕಾರ
ಜಾಕ್​ ಮಾ ಹಾಗೂ ಜಿನ್​ ಪಿಂಗ್
Srinivas Mata
|

Updated on:Mar 18, 2021 | 4:26 PM

Share

ಚೀನಾದ “ಪೋಸ್ಟರ್ ಬಾಯ್” ಆಗಿದ್ದ ಅಲಿಬಾಬ ಸಮೂಹದ ಸ್ಥಾಪಕ ಹಾಗೂ ಶತಕೋಟ್ಯಧಿಪತಿ ಜಾಕ್ ಮಾ ಕಳೆದ ವರ್ಷ ಒಂದು ಸುತ್ತು ಥಂಡಾ ಹೊಡೆದು ಹೋಗಿದ್ದಾರೆ. ಇ- ಕಾಮರ್ಸ್ ದೈತ್ಯ ಕಂಪೆನಿ ಅಲಿಬಾಬ ಮತ್ತು ಅದರ ಹಣಕಾಸು ಸಂಸ್ಥೆಯಾದ ಆಂಟ್ ಸಮೂಹದ ಮೇಲೆ ಚೀನಾ ಸರ್ಕಾರ ಕಳೆದ ವರ್ಷ ಮುರಿದುಕೊಂಡು ಬಿದ್ದ ಪರಿಗೆ ಈ ಆಸಾಮಿಯೇ ಕೆಲ ಕಾಲ ನಾಪತ್ತೆಯೇ ಆಗಿಬಿಟ್ಟಿದ್ದರು. ಇದೀಗ ವಾಲ್​​ಸ್ಟ್ರೀಟ್ ಜರ್ನಲ್ ವರದಿ ಮಾಡಿರುವ ಪ್ರಕಾರ, ಅಲಿಬಾಬ ಸಮೂಹದ ಮಾಧ್ಯಮ ಆಸ್ತಿಯನ್ನು ಮಾರುವಂತೆ ಚೀನಾ ಸರ್ಕಾರ ಹೇಳಿದೆ ಎಂಬುದಾಗಿ ಅಮೆರಿಕದ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.

ಅಲಿಬಾಬ ಕಂಪೆನಿಯ ಮುಖ್ಯ ವ್ಯವಹಾರ ಆನ್​ಲೈನ್ ರೀಟೇಲ್. ಆದರೆ ಮೈಕ್ರೋಬ್ಲಾಗಿಂಗ್ ಪ್ಲಾಟ್​ಫಾರ್ಮ್ ವೈಬೋ ಕಾರ್ಪ್​ನಲ್ಲೂ (ಹತ್ತಿರ ಹತ್ತಿರ 350 ಕೋಟಿ ಅಮೆರಿಕನ್ ಡಾಲರ್) ಪಾಲು ಹೊಂದಿದೆ. ಹಾಂಕಾಂಗ್​ನಲ್ಲಿ ಮುಂಚೂಣಿ ಇಂಗ್ಲಿಷ್ ದೈನಿಕವಾಗಿರುವ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್​ನಂಥ ಸುದ್ದಿ ಮಾಧ್ಯಮಗಳಲ್ಲೂ ಅಲಿಬಾಬ ಪಾಲಿದೆ. ಆದ್ದರಿಂದ ಈ ಕಂಪೆನಿಗೆ ಸಾರ್ವಜನಿಕ ಅಭಿಪ್ರಾಯ ರೂಪಿಸುವ ಸಾಮರ್ಥ್ಯ ಇರುವ ಬಗ್ಗೆ, ಅದರಲ್ಲೂ ಸಾಮಾಜಿಕ ಮಾಧ್ಯಮದಲ್ಲಿ ಈ ಕೆಲಸವನ್ನು ಸಮರ್ಥವಾಗಿ ಮಾಡಬಲ್ಲದು ಎಂಬ ಕಾರಣಕ್ಕೆ ಚೀನಾ ಸರ್ಕಾರ ಆತಂಕಗೊಂಡಿದೆ. ಆದ್ದರಿಂದ ಮಾಧ್ಯಮದ ಆಸ್ತಿಗಳನ್ನು ಅಲಿಬಾಬ ಕಂಪೆನಿಯು ಮಾರಬೇಕು ಎಂದು ಬಯಸುತ್ತಿದೆ.

ಸರ್ಕಾರದ ಪಾಲಿಗೇಕೆ ಜಾಕ್ ಮಾ ಆತಂಕ? ಚೀನಾದಲ್ಲಿ ಜಾಕ್ ಮಾ ಅಂದರೆ ಸಕ್ಸಸ್ ಸ್ಟೋರಿ ಎಂಬಂತೆ ಇದ್ದವರು. 2020ರ ತನಕ ಪರಿಸ್ಥಿತಿ ಹಾಗೇ ಇತ್ತು. ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿರುವಂತೆ, ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಚೀನಾದ ಜನ ಸಾಮಾನ್ಯರ ಮಧ್ಯೆ ಸಿರಿವಂತರ ಬಗ್ಗೆ ಸಿಟ್ಟಿನ ಭಾವನೆ ಮೂಡಿತು. ಈ ಸನ್ನಿವೇಶವನ್ನು ತನಗೆ ಪೂರಕವಾಗಿ ಬಳಸಿಕೊಳ್ಳಲು ನಿರ್ಧರಿಸಿತು ಆಳುವ ಪಕ್ಷ. ಇನ್ನು ಇದೇ ಸಂದರ್ಭದಲ್ಲಿ ಅಲಿಪೇ (Alipay) ಆರಂಭಿಸಿ ಯಶಸ್ಸು ಕಂಡ ಜಾಕ್ ಮಾ, ಸೀದಾ ಸರ್ಕಾರದ ಕಣ್ಣೊಳಗೇ ಕೈ ಹಾಕುವ ಕೆಲಸ ಮಾಡಿದ್ದರು. ಏಕೆಂದರೆ ಚೀನಾದಲ್ಲಿ ಹಣಕಾಸು ನಿರ್ವಹಣೆಯನ್ನು ಸರ್ಕಾರವೇ ಮಾಡುತ್ತದೆ. ಅಲಿಪೇ ಮೂಲಕ ಆ ಸಂಪ್ರದಾಯಚನ್ನೇ ಮುರಿಯುವುದಕ್ಕೆ ಮುಂದಾದರು ಜಾಕ್ ಮಾ.

ಚೀನಾ ಸರ್ಕಾರದ ಸಿಟ್ಟಿಗೆ ಇನ್ನೊಂದು ಕಾರಣವೂ ಇತ್ತು. ಫೇಸ್​ಬುಕ್ ಅಥವಾ ಗೂಗಲ್​ಗೆ ಹೋಲಿಸಿದಲ್ಲಿ ದೊಡ್ಡ ಮಟ್ಟದ ಡೇಟಾ (ದತ್ತಾಂಶ) ಇರುವುದು ಅಲಿಬಾಬ ಬಳಿ. ಆ ಸಮೂಹದ ಕಂಪೆನಿಗಳ ಗಾತ್ರ ನೋಡಿ ಗಾಬರಿ ಬಿದ್ದ ಚೀನಾ ಸರ್ಕಾರ, ಇದು ತನ್ನ ಪಾಲಿಗೆ ಆತಂಕ ಅಂತಲೇ ಭಾವಿಸಿತು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಹಿಂದೆಯೇ ಹೇಳಿದಂತೆ, 2020ರ ಅಕ್ಟೋಬರ್​ನಲ್ಲಿ ದಿಢೀರ್ ಟೀವಿ ಶೋನಲ್ಲೂ ಕಾಣಿಸಿಕೊಳ್ಳದೆ ಕೆಲ ಕಾಲ ನಾಪತ್ತೆಯಾದ ಜಾಕ್ ಮಾ, ಏನೇನೋ ಗುಮಾನಿಗಳಿಗೆ ಕಾರಣರಾದರು. ಆ ಟೀವಿ ಶೋನಲ್ಲಿ ಜಾಕ್ ಮಾ ಅಂತಿಮ ತೀರ್ಪುಗಾರರ ಪೈಕಿ ಒಬ್ಬರಾಗಿರಲಿಲ್ಲ ಎಂದು ಅಲಿಬಾಬ ಸಮೂಹದಿಂದ ಹೇಳಿಕೆಯನ್ನೂ ನೀಡಲಾಯಿತು. ಚೀನಾ ಸರ್ಕಾರವು ಅಲಿಬಾಬ ಸಮೂಹದ ಕಂಪೆನಿಗಳ ಮೇಲೆ ನಿರಂತರ ದಾಳಿ ನಡೆಸುತ್ತಿರುವಾಗ ಈ ಬೆಳವಣಿಗೆಗಳು ನಡೆದವು.

ತಪ್ಪಾಗಿದ್ದು ಎಲ್ಲಿ? ಕಳೆದ ವರ್ಷ ಡಿಸೆಂಬರ್​ನಲ್ಲಿ ಚೀನೀ ಅಧಿಕಾರಿಗಳು ಅಲಿಬಾಬ ಕಂಪೆನಿ ವಿರುದ್ಧ ನಂಬಿಕೆ ವಿರೋಧಿ ನಡಾವಳಿಗಳ ಆರೋಪದಲ್ಲಿ ವಿಚಾರಣೆ ಕೈಗೆತ್ತಿಕೊಂಡರು. ಇನ್ನು ಜಾಕ್ ಮಾ ಅವರ ಇ- ಕಾಮರ್ಸ್ ವ್ಯವಹಾರದ ಪವರ್​ಹೌಸ್​ನಂತಿದ್ದ ಆಂಟ್ ಸಮೂಹಕ್ಕೂ ಸರ್ಕಾರದ ದಾಳಿ ವಿಸ್ತರಿಸಿತು. ಅಲಿಬಾಬಗೆ ಸದ್ಯಕ್ಕೆ ಜಾಕ್ ಮುಖ್ಯಸ್ಥರಲ್ಲ. ಆದರೂ ಕಂಪೆನಿಯಲ್ಲಿ ದೊಡ್ಡ ಪ್ರಮಾಣದ ಷೇರು ಹೊಂದಿರುವ ಅವರ ಆಸ್ತಿ ಮೇಲೆ ಪ್ರಭಾವ ಆಗೇ ಆಗುತ್ತದೆ. ಇನ್ನು ಅಲಿಬಾಬದ ಆಡಳಿತ ಮಂಡಳಿಯ ಮುಖ್ಯ ಸದಸ್ಯರನ್ನು ಆರಿಸುವ ತಂಡದಲ್ಲಿ ಈಗಲೂ ಮಾ ಭಾಗವಾಗಿದ್ದಾರೆ.

ಕಳೆದ ವರ್ಷದ ನವೆಂಬರ್ ಆರಂಭದಲ್ಲಿ ಆಂಟ್ ಸಮೂಹದ ಐಪಿಒ ಬರಬೇಕಿತ್ತು. ಚೀನಾದ ಅಧಿಕಾರಿಗಳು ಅದು ಬಾರದಂತೆ ತಡೆದರು. ಈ ಘಟನೆ ನಡೆಯುವುದಕ್ಕೆ ಕೇವಲ ಎರಡು ವಾರಗಳ ಮುಂಚೆಯಷ್ಟೇ ಜಾಕ್ ಮಾ, ಚೀನಾ ಬ್ಯಾಂಕ್​ಗಳು “ಗಿರವಿ ಅಂಗಡಿಗಳಂತೆ” ವರ್ತಿಸುತ್ತವೆ ಎಂದಿದ್ದರು. ಯಾರಿಗೆ ಅಡ ಇಡುವುದಕ್ಕೆ ಏನಾದರೂ ಇದಯೋ ಅಂಥವರಿಗೆ ಮಾತ್ರ ಬ್ಯಾಂಕ್​ಗಳು ಸಾಲ ನೀಡುತ್ತಿವೆ ಎಂದಿದ್ದರು.

ನಿಮಗೆ ಗೊತ್ತಿರಲಿ, ಈ ಮಾತುಕತೆಗಳ ಮುಂಚೆ ಚೀನಾ ಸರ್ಕಾರ- ಜಾಕ್ ಮಾ ಮಧ್ಯದ ಸಮೀಕರಣವೇ ಬೇರೆ ಇತ್ತು. ಎರಡು ದಶಕಗಳ ಕಾಲ ಚೀನೀ ಸರ್ಕಾರದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಜಾಕ್ ಮಾ. ಹಾಗಿದ್ದರೆ ಸಂಬಂಧ ಹದಗೆಟ್ಟಿದ್ದು ಎಲ್ಲಿ ಎಂಬ ಬಗ್ಗೆ ಕೆಲವು ವಾದಗಳಿವೆ. ಕೆಲವು ವಿಶ್ಲೇಷಕರು ಹೇಳುವ ಪ್ರಕಾರ, ಅಲಿಬಾಬ ಸಮೂಹ ಸಿಕ್ಕಾಪಟ್ಟೆ ಬೆಳೆದಿದ್ದರಿಂದ ಅಧಿಕಾರಿಗಳು ಕಣ್ಣು ಕುಕ್ಕಿತು. ಇನ್ನು ಕಳೆದ ಅಕ್ಟೋಬರ್​ನಲ್ಲಿ ನಡೆದ ಸಮಾವೇಶವೊಂದರಲ್ಲಿ ಮಾತನಾಡಿದ್ದ ಜಾಕ್ ಮಾ, ಚೀನಾ ಸರ್ಕಾರದ ಅಧಿಕಾರಿಗಳು ದೂರದೃಷ್ಟಿ ಇಲ್ಲ ಎಂದಿದ್ದಲ್ಲದೆ, ಅಲ್ಲಿನ ಆರ್ಥಿಕ ವ್ಯವಸ್ಥೆ ಬಗ್ಗೆ ಟೀಕಿಸಿದ್ದರು. ಇದಾದ ನಂತರವೇ ಎಲ್ಲ ಬದಲಾವಣೆ ಆಯಿತು. ಹೊಸ ನಿಯಮಾವಳಿಗಳನ್ನು ಪರಿಚಯಿಸಲಾಯಿತು.

ಯಾರು ಈ ಜಾಕ್ ಮಾ? ಆತ ಗೈಡ್, ಇಂಗ್ಲಿಷ್ ಶಿಕ್ಷಕ, ನಂತರ ಇಂಟರ್​ನೆಟ್ ಉದ್ಯಮಿ. ಆಮೇಲೆ ಚೀನಾದ ಶ್ರೀಮಂತ. 2016ರಲ್ಲಿ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾದ ಮೇಲೆ ಅವರು ಭೇಟಿ ಮಾಡಿದ ಚೀನಾದ ಮೊದಲ ಹೈಪ್ರೊಫೈಲ್ ವ್ಯಕ್ತಿ ಜಾಕ್ ಮಾ. ಚೀನಾದಲ್ಲಿ ಯುವ ಜನರ ಪಾಲಿಗೆ ಮಾ ಬೆಳೆದ ಪರಿ ಬೆರಗಿನ ಕಥೆ. ಈ ಜಾಕ್ ಮಾ ಹುಟ್ಟಿದ್ದು ಚೀನಾದ ಹಂಗ್ಝೌ ನಗರದಲ್ಲಿ, 1964ರಲ್ಲಿ. ಬಹಳ ಚಿಕ್ಕ ವಯಸ್ಸಿನಲ್ಲೇ ವಿದೇಶೀ ಪ್ರವಾಸಿಗರಿಗೆ ಗೈಡ್ ಆಗಿ ವೃತ್ತಿ ಆರಂಭಿಸಿದರು. ಫೋರ್ಬ್ಸ್ ವರದಿಯ ಪ್ರಕಾರ, ಪ್ರತಿ ದಿನ ಬೆಳಗ್ಗೆ 5ಕ್ಕೇ ಏಳುತ್ತಿದ್ದ ಜಾಕ್ ಮಾ, ಅಂತರರಾಷ್ಟ್ರೀಯ ಹೋಟೆಲ್​ಗಳ ಟೂರಿಸ್ಟ್​ಗಳ ಬಳಿ ತೆರಳುತ್ತಿದ್ದರಂತೆ. ನಗರವನ್ನು ಸುತ್ತಾಡಿ ತೋರಿಸುವ ತನಗೆ ಹಣದ ಬದಲಿಗೆ ಇಂಗ್ಲಿಷ್ ಹೇಳಿಕೊಡುವಂತೆ ಕೇಳಿಕೊಳ್ಳುತ್ತಿದ್ದರಂತೆ. ಆ ನಂತರ ಹಂಗ್ಝೌ ಶಿಕ್ಷಕರ ಸಂಸ್ಥೆಗೆ ಸೇರಿ, ಅಲ್ಲಿಂದ 1988ರಲ್ಲಿ ಇಂಗ್ಲಿಷ್ ಪದವಿ ಪಡೆದುಕೊಂಡರು.

ಸುಮಾರು 30 ಕೆಲಸಗಳಿಗೆ ಅರ್ಜಿ ಹಾಕಿಕೊಂಡಿದ್ದ ಜಾಕ್ ಮಾ ಅಲ್ಲೆಲ್ಲ ತಿರಸ್ಕೃತರಾಗಿದ್ದರು. ಆ ನಂತರ ಸ್ಥಳೀಯ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಹೇಳಿಕೊಡುವುದಕ್ಕೆ ಅವಕಾಶ ಸಿಕ್ಕಿತು. ಅದಕ್ಕೆ ಸಿಗುತ್ತಿದ್ದ ಸಂಬಳ ತಿಂಗಳಿಗೆ 15 ಅಮೆರಿಕನ್ ಡಾಲರ್. ಅದರ ಜತೆಗೆ ತನ್ನ ಇತರ ಸ್ನೇಹಿತರನ್ನು ಜತೆಗೂಡಿಸಿಕೊಂಡು ಅನುವಾದದ ಕಂಪೆನಿ ಶುರು ಮಾಡಿದರು. 1995ರಲ್ಲಿ ಮೊದಲ ಬಾರಿಗೆ ಜಾಕ್ ಮಾ ಅಮೆರಿಕಾಗೆ ಹೋದಾಗ ಇಂಟರ್​ನೆಟ್ ಎಷ್ಟು ಪ್ರಭಾವಿ ಎಂಬುದು ಅವರ ಗಮನಕ್ಕೆ ಬಂದಿತು. ಚೀನಾ ಪೇಜಸ್ ಎಂಬ ವೆಬ್​ಸೈಟ್ ರೂಪಿಸಲು ವಿಫಲರಾದ ನಂತರ, ಸರ್ಕಾರಿ ಏಜೆನ್ಸಿಯೊಂದಕ್ಕೆ ಬೀಜಿಂಗ್​ನಲ್ಲಿ ವೆಬ್​ಸೈಟ್ ಆರಂಭಿಸಲು ಸಹಾಯ ಮಾಡಿದರು. ಆ ನಂತರದಲ್ಲಿ ಈ ಆಸಾಮಿ ಹಿಂತಿರುಗಿದ್ದೇ ಇಲ್ಲ.

ಜಾಕ್ ಮಾ, ಅವರ ಪತ್ನಿ ಹಾಗೂ ಸ್ನೇಹಿತರು ಸೇರಿಕೊಂಡು 1999ರಲ್ಲಿ ಅಲಿಬಾಬ ಸ್ಥಾಪಿಸಿದರು. ಅದಕ್ಕಾಗಿ ಹಣ ಸಂಗ್ರಹ ಮತ್ತು ವಿಸ್ತರಣೆಯನ್ನು ಮುಂದುವರಿಸಿದರು. ಆರಂಭದಲ್ಲಿ ಆನ್​ಲೈನ್​ನಲ್ಲಿ B2B ಮಾರ್ಕೆಟ್​ಪ್ಲೇಸ್ ಆಗಿ ಶುರು ಮಾಡಿದ್ದು ದೊಡ್ಡದಾಗುತ್ತಲೇ ಸಾಗಿತು. 2014ರಲ್ಲಿ ವಿಶ್ವದ ಅತಿದೊಡ್ಡ ಐಪಿಒದಲ್ಲಿ ಅಲಿಬಾಬ ಕಂಪೆನಿಯು 2500 ಕೋಟಿ ಅಮೆರಿಕನ್ ಡಾಲರ್ ಸಂಗ್ರಹಿಸಿತು ಮತ್ತು ನ್ಯೂಯಾರ್ಕ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಲಿಸ್ಟಿಂಗ್ ಆಯಿತು. ಮಾ ಅವರ ವೈಯಕ್ತಿಕ ಆಸ್ತಿ 5000 ಕೋಟಿ ಅಮೆರಿಕನ್ ಡಾಲರ್ ದಾಟಿ, ವಿಶ್ವದ 25ನೇ ಅತಿ ಸಿರಿವಂತ ವ್ಯಕ್ತಿ ಎನಿಸಿಕೊಂಡರು. ಆದರೆ ನಂತರದಲ್ಲಿ ಸಾರ್ವಜನಿಕರ ಭಾವನೆಯೇ ಬದಲಾಯಿತು. ಇಂಟರ್​ನೆಟ್​ನಲ್ಲಿ ಡ್ಯಾಡಿ ಮಾ ಎನಿಸಿಕೊಳ್ಳುವ ವ್ಯಕ್ತಿ ಈಗ ಚೀನೀಯರು ದ್ವೇಷಿಸಲು ಬಯಸುವಂಥ ವ್ಯಕ್ತಿಯಾಗಿದ್ದಾರೆ.

ಇದನ್ನೂ ಓದಿ: ಚೀನಾ ಕಾಯಂ ಅಧ್ಯಕ್ಷ ಜಿನ್​ ಪಿಂಗ್ ಜೊತೆ ಸಂಘರ್ಷ: ಅಲಿಬಾಬಾ ಸಂಸ್ಥಾಪಕ ಜಾಕ್ ಮಾ 2 ತಿಂಗಳಿಂದ ಕಣ್ಮರೆ?

Published On - 4:21 pm, Thu, 18 March 21