SBI Annuity Scheme: ಎಸ್‌ಬಿಐ ಆನ್ಯುಯುಟಿ ಸ್ಕೀಮ್ ಬಗ್ಗೆ ಕೇಳಿದ್ದೀರಾ?
ಎಸ್‌ಬಿಐ ಆನ್ಯುಯುಟಿ ಯೋಜನೆ ಎಂಬುದು ವಿಶಿಷ್ಟವಾದ ಠೇವಣಿ ಸ್ಕೀಮ್. ಪ್ರತಿ ತಿಂಗಳು ನಿಶ್ಚಿತವಾದ ಹಾಗೂ ಹೆಚ್ಚಿನ ಆದಾಯ ನಿರೀಕ್ಷೆ ಮಾಡುವವರಿಗೆ ಇದು ಸೂಕ್ತ. ಈ ಸ್ಕೀಮ್ ಬಗ್ಗೆ ವಿವರ ಇಲ್ಲಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಆನ್ಯುಯುಟಿ ಸ್ಕೀಮ್ ಬಗ್ಗೆ ಕೇಳಿದ್ದೀರಾ? ಬಹಳ ಆಸಕ್ತಿಕರವಾದ ಠೇವಣಿ ಯೋಜನೆ ಇದು. ಆದರೆ ಈ ಹೂಡಿಕೆಯಲ್ಲಿ ಒಂದು ಬದಲಾವಣೆ ಇದೆ. ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಈ ಸ್ಕೀಮ್ನಲ್ಲಿ ಹೂಡಿಕೆದಾರರಿಗೆ ನಿರಂತರವಾಗಿ ತಿಂಗಳ ಆದಾಯ ಬರುತ್ತಲೇ ಇರುತ್ತದೆ. ಆದರೆ ಪಕ್ವತೆ (ಮೆಚ್ಯೂರಿಟಿ) ಆಗುವಾಗ ಏನನ್ನೂ ಹೂಡಿಕೆದಾರರಿಗೆ ನೀಡುವುದಿಲ್ಲ. ಯಾಕೆ ಹೀಗೆ ಅಂದರೆ, ಹೂಡಿಕೆದಾರರು ಇಡಿಗಂಟಾಗಿ (ಲಮ್ಸಮ್) ಹಣವನ್ನು ಠೇವಣಿ ಇಡುತ್ತಾರೆ. ಅದನ್ನು ನಿಶ್ಚಿತ ಅವಧಿಗೆ ಅಸಲು ಹಾಗೂ ಬಡ್ಡಿಯ ಸಮೇತ ವಾಪಸ್ ಪಾವತಿಸಲಾಗುತ್ತದೆ. ಅದರಲ್ಲೂ ಆ ಹೂಡಿಕೆಯನ್ನು ಅಸಲು ಮೊತ್ತದ ಇಳಿಕೆ ವಿಧಾನದಲ್ಲಿ (ರೆಡ್ಯೂಸಿಂಗ್ ಬ್ಯಾಲೆನ್ಸ್ ವಿಧಾನ) ಹಿಂತಿರುಗಿಸಲಾಗುತ್ತದೆ. ಅಸಲು ಹಾಗೂ ಬಡ್ಡಿಯನ್ನು ಕಂತುಕಂತಾಗಿ ಬ್ಯಾಂಕ್ನಿಂದ ವಾಪಸ್ ಹಿಂತಿರುಗಿಸುವುದರಿಂದ ಮೆಚ್ಯೂರಿಟಿ ಹೊತ್ತಿಗೆ ಅಂತ ಏನೂ ಉಳಿಯುವುದಿಲ್ಲ.
ಅದೇ ಫಿಕ್ಸೆಡ್ ಡೆಪಾಸಿಟ್ ಆದಲ್ಲಿ ಬಡ್ಡಿಯನ್ನು ತಿಂಗಳು, ತ್ರೈಮಾಸಿಕ ಆಧಾರದಲ್ಲಿ ನೀಡಲಾಗುತ್ತದೆ. ನೆನಪಿನಲ್ಲಿರಲಿ, ಬಡ್ಡಿಯ ಮೊತ್ತವನ್ನು ಮಾತ್ರ ನೀಡಲಾಗುತ್ತದೆ. ಮೆಚ್ಯೂರಿಟಿ ಸಂದರ್ಭದಲ್ಲಿ ಹೂಡಿಕೆ ಮೊತ್ತವನ್ನು ಹಿಂತಿರುಗಿಸಲಾಗುತ್ತದೆ. ಎಸ್‌ಬಿಐ ಆನ್ಯುಯುಟಿ ಠೇವಣಿ ಯೋಜನೆಯಲ್ಲಿ ಹೂಡಿಕೆದಾರರು ಇಡಿಗಂಟನ್ನು ಒಟ್ಟಿಗೆ ನೀಡುತ್ತಾರೆ. ಆ ಮೊತ್ತವನ್ನು ಬಡ್ಡಿಯ ಜೊತೆಗೆ ಸೇರಿಸಿ, ಹೂಡಿಕೆದಾರರು ಆರಿಸಿಕೊಂಡ ಅವಧಿಗೆ ಕಂತುಗಳಲ್ಲಿ ಹಿಂತಿರುಗಿಸಲಾಗುತ್ತದೆ. ಆನ್ಯುಯುಟಿ ಅಂದರೆ ಮೂಲಭೂತವಾಗಿ ಪೆನ್ಷನ್ ಅಥವಾ ನಿಶ್ಚಿತ ಕಾಲಾವಧಿಗೆ ಅಥವಾ ಜೀವಿತಾವಧಿಗೆ ದೊರೆಯುವ ನಿರಂತರ ಆದಾಯ.
ಕನಿಷ್ಠ ಎಷ್ಟು ಹಣವನ್ನು ಆನ್ಯುಯುಟಿ ಠೇವಣಿಯಾಗಿ ಇಡಬೇಕು? ಕನಿಷ್ಠ ಎಷ್ಟು ಹಣವನ್ನು ಆನ್ಯುಯುಟಿ ಠೇವಣಿಯಾಗಿ ಇಡಬೇಕಾಗುತ್ತದೆ ಎಂಬುದರ ಲೆಕ್ಕಾಚಾರ ಹೇಗೆಂದರೆ, ಎಷ್ಟು ತಿಂಗಳ ಅವಧಿಗೆ ಎಂಬುದರ ಆಧಾರದಲ್ಲಿ ತಿಂಗಳ ಕನಿಷ್ಠ ಆನ್ಯುಯುಟಿ ಮೊತ್ತ ರೂ. 1000 ಅಂತ ಲೆಕ್ಕ ಹಾಕಿಕೊಳ್ಳಿ. ಮೂರು ವರ್ಷದ ಅವಧಿಗಾದರೆ ಕನಿಷ್ಠ ಠೇವಣಿ ಮೊತ್ತ ರೂ. 36000. ಆನ್ಯುಯುಟಿ ಅವಧಿ 3, 5, 7 ಮತ್ತು 10 ವರ್ಷಗಳದಾಗಿರುತ್ತದೆ. ಅಪ್ರಾಪ್ತರು ಸೇರಿದಂತೆ ಎಲ್ಲರೂ ಇದರಲ್ಲಿ ಹೂಡಿಕೆ ಮಾಡಬಹುದು. ನಿಶ್ಚಿತ ಅವಧಿಯ ಠೇವಣಿಗಳಿಗೆ ಬಡ್ಡಿ ದರ ಎಷ್ಟಿದೆಯೋ ಅದೇ ದರ ಆನ್ಯುಯುಟಿ ಡೆಪಾಸಿಟ್ಗೂ ಅನ್ವಯಿಸುತ್ತದೆ.
ಲೆಕ್ಕಾಚಾರಕ್ಕಾಗಿ ಈ ಉದಾಹರಣೆಯನ್ನೇ ನೋಡಿ, ಎಸ್‌ಬಿಐ ಆನ್ಯುಯುಟಿ 3 ವರ್ಷಗಳ ಅವಧಿಗೆ ಬಡ್ಡಿ ದರ ಶೇ 5.3 ಅಂದುಕೊಳ್ಳಿ. 1.5 ಲಕ್ಷ ರೂಪಾಯಿ ಠೇವಣಿ ಮಾಡಿದಲ್ಲಿ ಮೂರು ವರ್ಷಗಳ ಕಾಲ ಪ್ರತಿ ತಿಂಗಳು 4,500 ರೂಪಾಯಿ ದೊರೆಯುತ್ತದೆ. ಮೆಚ್ಯೂರಿಟಿ ಸಮಯದಲ್ಲಿ ಯಾವ ಹಣವೂ ಸಿಗಲ್ಲ. ಎಸ್‌ಬಿಐ ನೆಟ್ ಬ್ಯಾಂಕಿಂಗ್ ಮೂಲಕವಾಗಿ ಎಸ್‌ಬಿಐ ಆನ್ಯುಯುಟಿ ಡೆಪಾಸಿಟಿ ಯೋಜನೆಯಲ್ಲಿ ಹಣ ತೊಡಗಿಸಬಹುದು. ಆನ್ಯುಯುಟಿ ಡೆಪಾಸಿಟ್ ಖಾತೆಗೆ ಯಾವುದರಿಂದ ಹಣ ಬರುತ್ತದೋ ಅದರಿಂದಲೇ ಆಗಬೇಕು. ಇ- ಆನ್ಯುಯುಟಿ ಡೆಪಾಸಿಟ್ ಖಾತೆಯು ಯಾವ ಖಾತೆದಾರರಿಂದ ಹಣ ವರ್ಗಾವಣೆ ಆಗಿರುತ್ತದೋ ಅವರ ಹೆಸರಲ್ಲೇ ಜನರೇಟ್ ಆಗುತ್ತದೆ.
ಹೆಚ್ಚಿನ ತಿಂಗಳ ಆದಾಯ ನಿರೀಕ್ಷೆ ಮಾಡುವವರಿಗೆ ಸೂಕ್ತ ಯಾರು ಹೆಚ್ಚಿನ ತಿಂಗಳ ಆದಾಯವನ್ನು ನಿರೀಕ್ಷೆ ಮಾಡುತ್ತಾರೋ ಅಂಥವರಿಗೆ ಈ ಎಸ್‌ಬಿಐ ಆನ್ಯುಯುಟಿ ಸೂಕ್ತವಾಗುತ್ತದೆ. ಆದರೆ ಇದು ಹೆಚ್ಚಿನ ಬಡ್ಡಿ ನಿರೀಕ್ಷೆ ಮಾಡುವವರಿಗಲ್ಲ. ಎಸ್‌ಬಿಐ ಆನ್ಯುಯುಟಿ ಪ್ಲಾನ್ನಲ್ಲಿ ಹಣ ಹಾಕುವ ಮುನ್ನ ಬ್ಯಾಂಕ್ ಅಧಿಕಾರಿಗಳ ಜೊತೆಗೆ ಇತರ ಮುಖ್ಯ ಸಂಗತಿಗಳನ್ನು ಮಾತನಾಡಬೇಕು. ಮೆಚ್ಯೂರಿಟಿ ನಂತರ ಯಾವುದೇ ಹಣವೂ ವಾಪಸ್ ಬರುವುದಿಲ್ಲವಾದ್ದರಿಂದ ಈ ಹೂಡಿಕೆ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಂಡು, ಹೂಡಿಕೆ ಮಾಡಿ. ಇನ್ನು ನೀವು ಈಗಾಗಲೇ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡವವರಾಗಿದ್ದರೆ ಸಿಸ್ಟಮ್ಯಾಟಿಕ್ ವಿಥ್ಡ್ರಾವಲ್ ಪ್ಲಾನ್ ಬಗ್ಗೆ ಕೇಳಿರಬಹುದು. ಒಂದು ವೇಳೆ ಗೊತ್ತಿಲ್ಲ ಎಂದಾದಲ್ಲಿ ತಿಳಿದುಕೊಳ್ಳಿ. ಎಸ್‌ಬಿಐ ಆನ್ಯುಯುಟಿ ಡೆಪಾಸಿಟ್ ಅದೇ ರೀತಿ ಕಾರ್ಯ ನಿರ್ವಹಿಸುತ್ತದೆ.
ಇದನ್ನೂ ಓದಿ: SBI Multi Option Deposit Scheme: ಎಸ್‌ಬಿಐ ಮಲ್ಟಿ ಆಪ್ಷನ್ ಡೆಪಾಸಿಟ್ ಸ್ಕೀಮ್ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಮಾಹಿತಿಗಳಿವು