ಬೆಂಗಳೂರು: ರಾಜ್ಯದ ಎರಡು ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಗುರುವಾರ ರಾತ್ರಿ ಘೋಷಿಸಲಾಗಿದೆ. ಆದರೆ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ದಿವಂಗತ ಬಿ.ನಾರಾಯಣರಾವ್ ಪತ್ನಿ ಮಲ್ಲಮ್ಮ, ಮಸ್ಕಿ ಕ್ಷೇತ್ರದಲ್ಲಿ ಬಸವನಗೌಡ ತುರವಿಹಾಳಗೆ ಟಿಕೆಟ್ ಘೋಷಿಸಲಾಗಿದೆ. ಸಿಂದಗಿ ಕ್ಷೇತ್ರದ ಉಪ ಚುನಾವಣೆ ಇನ್ನೂ ಘೋಷಣೆಯಾಗಿಲ್ಲ. ಆದರೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಶೋಕ್ ಮನಗೂಳಿಗೆ ಟಿಕೆಟ್ ಘೋಷಿಸಿದೆ.
ಏಪ್ರಿಲ್ 17 ರಂದು ಉಪಚುನಾವಣೆಗಳ ಮತದಾನ ನಡೆಯಲಿದೆ. ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ. ಮಾರ್ಚ್ 30 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು ಮಾರ್ಚ್ 31 ನಾಮಪತ್ರ ಪರಿಶೀಲನೆ ನಡೆಯಲಿದೆ. ಮೇ 2 ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರ ಬಿಜೆಪಿ ಸಂಸದ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿತ್ತು. ಕೊರೊನಾ ಸೋಂಕಿಗೆ ತುತ್ತಾಗಿದ್ದ 65 ವರ್ಷದ ಸುರೇಶ್ ಅಂಗಡಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ 10 ದಿನಗಳ ಕಾಲ ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆದಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಕಾರಣ ವೆಂಟಿಲೇಟರ್ ತೆಗೆದು ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೂ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದರು.
ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಜಗದೀಶ್ ಶೆಟ್ಟರ್, ಶ್ರದ್ಧಾ ಶೆಟ್ಟರ್ (ಸುರೇಶ್ ಅಂಗಡಿ ಪುತ್ರಿ), ಡಾ.ಗಿರೀಶ್ ಸೋನವಾಲ್ಕರ್, ಮಹಾಂತೇಶ್ ಕವಟಗಿಮಠ್, ಪ್ರಮೋದ್ ಮುತಾಲಿಕ್, ಮಾಜಿ ಸಂಸದ ರಮೇಶ್ ಕತ್ತಿ, ಡಾ.ರವಿ ಪಾಟೀಲ್, ರಮೇಶ್ ದೇಶಪಾಂಡೆ, ವಕೀಲ ಎಂ.ಬಿ.ಜಿರಲಿ, ಉದ್ಯಮಿ ಮಹಾಂತೇಶ್ ವಕ್ಕುಂದ, ಉಜ್ವಲಾ ಬಡವನಾಚೆ, ದೀಪಾ ಕುಡಚಿ ಆಕಾಂಕ್ಷಿಗಳಾಗಿದ್ದಾರೆ.
ಕಾಂಗ್ರೆಸ್ ಪಾಳಯದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ, ಚನ್ನರಾಜ ಹಟ್ಟಿಹೊಳಿ (ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ), ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಟಿಕೆಟ್ ಘೋಷಿಸುವ ಸಾಧ್ಯತೆಗಳಿವೆ.
ಬಸವಕಲ್ಯಾಣ ಕ್ಷೇತ್ರದಲ್ಲಿ ಬಿಜೆಪಿಯಿಂದ ಶರಣು ಸಲಗಾರ್, ಮಾಜಿ ಶಾಸಕ ಮಲ್ಲಿಕಾರ್ಜುನ್ ಖೂಬಾ, ಬಸವಕಲ್ಯಾಣ ತಾಲೂಕಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ಜಿಲ್ಲಾ ಪಂಚಾಯತ್ ಸದಸ್ಯ ಗುಂಡೂರೆಡ್ಡಿ, ಭಾರತೀಯ ಆಹಾರ ನಿಗಮದ ಸದಸ್ಯ ಉಮೇಶ್ ಬಿರಬಿಟ್ಟೆ, ಪ್ರದೀಪ್ ವಾತಡೆ ಆಕಾಂಕ್ಷಿಗಳಾಗಿದ್ದಾರೆ. ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.
ಉಪ ಚುನಾವಣೆ ಘೋಷಣೆಯಾದ ಈ ಹೊತ್ತಲ್ಲಿ ರಾಜ್ಯದಲ್ಲಿ ಸಿಡಿ ರಾಜಕೀಯದ ಧ್ವನಿ ಜೋರಾಗಿದೆ. ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಂಗಡಿಗರು ಸಿಡಿ ವಿಷಯ ಇಟ್ಟುಕೊಂಡು ಬಿಜೆಪಿಯ ಅಭ್ಯರ್ಥಿಗಳನ್ನು ಮಣಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವುದು ಈಗಾಗಲೇ ಖಚಿತವಾಗಿದೆ. ಆದರೆ ಬಿಜೆಪಿ ಸಿಡಿ ರಾಜಕೀಯ ಮಾಡಲು ಅವಕಾಶ ನೀಡದೇ, ಕಮಲದ ಧ್ವಜ ಹಾರಿಸುವ ಸಿದ್ಧತೆಯಲ್ಲಿದೆ. ಈ ಕಾರಣಗಳಿಂದ ಬೆಳಗಾವಿ ಲೋಕಸಭಾ ಉಪ ಚುನಾವಣೆ ಕಣ ಅತ್ಯಂತ ರೋಚಕ ಘಟ್ಟದತ್ತ ಮುಖಮಾಡುವುದಂತೂ ಗ್ಯಾರಂಟಿ.
ಉಳಿದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಲಿಂಗಾಯತ ಮತಗಳ ಪ್ರಾಬಲ್ಯವಿರುವುದರಿಂದ ಆಡಳಿತಾರೂಢ ಬಿಜೆಪಿಗೆ ಸವಾಲಾಗಿದೆ. ಆದರೂ, ಮೇಲ್ನೋಟಕ್ಕೆ ಜಾತಿ ಸಮೀಕರಣವನ್ನು ಗಮನಿಸಿದರೆ ಬಿಜೆಪಿಗೆ ಸ್ವಲ್ಪ ಮುನ್ನಡೆ ಸಿಗಬಹುದು ಎನ್ನುವ ಅಂದಾಜು ಮಾಡಲಾಗುತ್ತಿದೆ.
ಇದನ್ನೂ ಓದಿ: ವಿಶ್ಲೇಷಣೆ | ಕರ್ನಾಟಕದ ಉಪ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗವು ಘೋಷಿಸಲಿಲ್ಲ ಏಕೆ?
ಇದನ್ನೂ ಓದಿ: ಉಪ ಚುನಾವಣೆಯನ್ನು ದಾಖಲೆ ಮತಗಳ ಅಂತರದಿಂದ ಗೆಲ್ಲುತ್ತೇವೆ: ಬಸವರಾಜ ಬೊಮ್ಮಾಯಿ
Published On - 8:53 pm, Thu, 18 March 21