ಬೆಂಗಳೂರಿನ ಹಾರೋಹಳ್ಳಿ ನಿವಾಸಿಯಾಗಿದ್ದ ಬಿಜೆಪಿ ಮುಖಂಡ (Annanthraju) ಅವರು ಆತ್ಮಹತ್ಯೆಯ ಮೂಲಕ ಸಾವನ್ನಪ್ಪಿ ಮೂರು ವಾರಗಳಿಗಿಂತ ಹೆಚ್ಚು ಸಮಯ ಕಳೆದರೂ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ದಿವಂಗತ ನಾಯಕನ ಪತ್ನಿ ಸುಮಾ (Suma) ವಿರುದ್ಧ ಬೆದರಿಕೆಯೊಡ್ಡಿದ ಬಗ್ಗೆ ನಗರದ ಪೊಲೀಸ್ ಠಾಣೆಯೊಂದಕ್ಕೆ ಬಂದಿದ್ದ ಅನಂತರಾಜು ಅವರ ಸ್ನೇಹಿತೆ ರೇಖಾ (Rekha) ಪೊಲೀಸರು ತಮ್ಮ ದೂರಿಗೆ ಸರಿಯಾಗಿ ಸ್ಪಂದಿಸದೆ ತಮ್ಮನ್ನೇ ವಿಚಾರಣೆ ನಡೆಸಲು ಆರಂಭಿಸಿದರು ಎಂದು ಆರೋಪಿಸಿ ಪೊಲೀಸ್ ಠಾಣೆ ಎದುರು ಚಲಿಸುತ್ತಿದ್ದ ಬಸ್ಸೊಂದರ ಎದುರು ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದರು. ಅವರ ಹಿಂದೆಯೇ ಓಡಿದ ಸ್ನೇಹಿತರೊಬ್ಬರು ರೇಖಾರನ್ನು ಹಿಡಿದು ರಸ್ತೆ ಬದಿಗೆ ಎಳೆತಂದರು.
ಈ ಪ್ರಕರಣ ವಿಚಿತ್ರವಾಗಿದೆ ಮಾರಾಯ್ರೇ. 46 ವರ್ಷದವರಾಗಿದ್ದ ಅನಂತರಾಜು ರಾಜ್ಯದ ಕೆಲ ಬಿಜೆಪಿ ನಾಯಕರೊಂದಿಗೆ ಸಂಪರ್ಕವಿಟ್ಟುಕೊಂಡು ತಮ್ಮ ಏರಿಯಾದಲ್ಲಿ ಪ್ರಭಾವಿ ಅನಿಸಿಕೊಂಡಿದ್ದರು. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಪತ್ನಿ ಸುಮಾ ಮತ್ತು ಮಕ್ಕಳೊಂದಿಗೆ ನೆಮ್ಮದಿಯ ಬದುಕು ನಡೆಸುತ್ತಿದ್ದರು. ಅನಂತರಾಜುಗೆ ರೇಖಾ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದಾರೆ. ಈ ಪರಿಚಯ ದೈಹಿಕ ಸಂಪರ್ಕದವರೆಗೆ ಮುಂದುವರೆದಿತ್ತು ಎನ್ನಲಾಗಿದೆ.
ನಂತರದ ದಿನಗಳಲ್ಲಿ ರೇಖಾ, ಅನಂತರಾಜುರೊಂದಿಗಿನ ತಮ್ಮ ಖಾಸಗಿ ಫೋಟೋಗಳ ಮೂಲಕ ಅವರನ್ನು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಲಾರಂಭಿಸಿದ್ದರಂತೆ. ರೇಖಾ ಕಿರುಕುಳದಿಂದಾಗೇ ತನ್ನ ಪತಿ ಆತ್ಮಹತ್ಯೆ ಮಾಡಿಕೊಂಡರು, ಇದೊಂದು ಹನಿ ಟ್ರ್ಯಾಪ್ ಪ್ರಕರಣ ಅಂತ ಸುಮಾ ಪೊಲೀಸರಿಗೆ ದೂರು ನೀಡಿದ್ದರು.
ಅವರ ದೂರಿನ ಆಧಾರದ ಮೇಲೆ ಪೊಲೀಸರು ರೇಖಾರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದ್ದರು. ಈಗ ರೇಖಾ, ಸುಮಾ ತನಗೆ ಫೋನ್ ಮಾಡಿ ಬೆದರಿಕೆ ಹಾಕುತ್ತಿದ್ದಾರೆ, ಅವರಿಂದ ಬಹಳ ಕಿರಿಕಿರಿ ಅನುಭವಿಸುತ್ತಿದ್ದೇನೆ ಅಂತ ಆರೋಪಿಸಿ ಪೊಲೀಸ್ ಠಾಣೆಗೆ ದೂರು ನೀಡಿದಾಗ, ಅವರೇ ಹೇಳುವ ಹಾಗೆ ಪೊಲೀಸರು ಸುಮಾರನ್ನು ಪ್ರಶ್ನಿಸದೆ, ಇವರನ್ನೇ ಹತ್ತು ಹಲವು ಪ್ರಶ್ನೆಗಳನ್ನು ಕೇಳಲಾರಂಭಿಸಿದರು.
ಹಾಗಾಗೇ, ರೇಖಾ ಬಿಎಮ್ ಟಿಸಿ ಬಸ್ಸೊಂದರ ಅಡಿಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದರು. ಇದಿಷ್ಟು ಕತೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.