Budget 2021 ನಿರೀಕ್ಷೆ | ನಮ್ಮನೆ ಮಗುವಿನ ಕೈಗೇಕೆ ವಿದೇಶಿ ಆಟಿಕೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 30, 2021 | 7:59 PM

ಈ ಬಾರಿಯ ಬಜೆಟ್​ನಲ್ಲಿ ಆಟಿಕೆಗಳ ವಲಯವನ್ನು ಸುಧಾರಿಸಲು ಬೇಕಿರುವ ನೀತಿಯೊಂದನ್ನು ಕೇಂದ್ರ ಸರ್ಕಾರ ಪ್ರಕಟಿಸಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.

Budget 2021 ನಿರೀಕ್ಷೆ | ನಮ್ಮನೆ ಮಗುವಿನ ಕೈಗೇಕೆ ವಿದೇಶಿ ಆಟಿಕೆ
ಆಟಿಕೆಗಳು
Follow us on

ನಮ್ಮೂರಿನ ಮಕ್ಕಳ ಕೈಗೆ ವಿದೇಶಿ ಆಟಿಕೆಗಳನ್ನು ಏಕೆ ಕೊಡಬೇಕು ಎಂದು ಅಪ್ಪ-ಅಮ್ಮ ಯೋಚಿಸಿದರೂ ಸಾಕು, ಕಿನ್ನಾಳ-ಚನ್ನಪಟ್ಟಣದಂಥ ಆಟಿಕೆಗೆ ಹೆಸರುವಾಸಿಯಾದ ಊರುಗಳ ಸಾವಿರಾರು ಮಂದಿಗೆ ದುಡಿಯುವ ಮಾರ್ಗ ತೆರೆದುಕೊಳ್ಳುತ್ತದೆ. ಈ ಬಾರಿಯ ಬಜೆಟ್​ನಲ್ಲಿ ಆಟಿಕೆಗಳ ವಲಯವನ್ನು ಸುಧಾರಿಸಲು ಬೇಕಿರುವ ನೀತಿಯೊಂದನ್ನು ಕೇಂದ್ರ ಸರ್ಕಾರ ಪ್ರಕಟಿಸಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಆಟಿಕೆಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಈಗಾಗಲೇ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕಳೆದ ವರ್ಷ ಆಟಿಕೆಗಳ ಮೇಲಿನ ಆಮದು ಸುಂಕವನ್ನೂ ಹೆಚ್ಚಿಸಿತ್ತು. ಇದರ ಜೊತೆಗೆ ಕಟ್ಟುನಿಟ್ಟಿನ ಗುಣಮಟ್ಟದ ನಿಯಂತ್ರಣ ಕ್ರಮವೂ ಅಗತ್ಯವಿದೆ. ಆಗಷ್ಟೇ ದೇಶೀಯ ಮಾರುಕಟ್ಟೆಯಲ್ಲಿ ಅಗ್ಗದ ಆಟಿಕೆಗಳ ಹರಿವಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ.

ಅಂತರರಾಷ್ಟ್ರೀಯ ಆಟಿಕೆ ಉದ್ಯಮದಲ್ಲಿ ದೇಶದ ಪಾಲು ತೀರಾ ಕಡಿಮೆಯಿದೆ. ಜಾಗತಿಕ ಆಟಿಕೆ ಬೇಡಿಕೆಯ ಶೇ 0.5ಕ್ಕಿಂತ ಕಡಿಮೆ ಪ್ರಮಾಣದ ಉತ್ಪನ್ನ ಭಾರತದಿಂದ ರಫ್ತಾಗುತ್ತಿದೆ. ಉತ್ಪಾದನೆಯಲ್ಲಿ ಸುಧಾರಣೆಗಳಾದರೆ ರಫ್ತು ಹೆಚ್ಚಿಸಲು ಸಹಕಾರಿಯಾಗುತ್ತದೆ. ಚೀನಾ ಮತ್ತು ವಿಯೆಟ್ನಾಂ ದೇಶಗಳು ಆಟಿಕೆ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿವೆ.

ಭಾರತದ ಆಟಿಕೆ ರಫ್ತು ಸುಮಾರು 10 ಕೋಟಿ ಡಾಲರ್​ ಮೌಲ್ಯಕ್ಕೆ ಸೀಮಿತವಾಗಿದೆ. ಸುಮಾರು 4,000 ಸಣ್ಣ ಮತ್ತು ಮಧ್ಯಮ ಉದ್ಯಮಗಳು ಈ ನಿಟ್ಟಿನಲ್ಲಿ ಶ್ರಮಿಸುತ್ತಿವೆ. ದೇಶೀಯ ಬೇಡಿಕೆಯ ಶೇ 85ರಷ್ಟು ಆಟಿಕೆಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಗರಿಷ್ಠ ಮಟ್ಟದಲ್ಲಿ ಈ ಆಟಿಕೆಗಳು ಚೀನಾದಿಂದ ಬರುತ್ತಿವೆ. ಇದರ ನಂತರದ ಸ್ಥಾನದಲ್ಲಿ ಶ್ರೀಲಂಕಾ, ಮಲೇಷ್ಯಾ, ಜರ್ಮನಿ, ಹಾಂಗ್​ಕಾಂಗ್ ಮತ್ತು ಅಮೆರಿಕ ದೇಶಗಳಿವೆ.

Budget 2021 | ಸಿದ್ಧ ವಸ್ತುಗಳ ಆಮದಿಗೆ ಸುಂಕ ಹೆಚ್ಚಳ? ಮೇಕ್​ ಇನ್​ ಇಂಡಿಯಾಗೆ ಒತ್ತು ನಿರೀಕ್ಷಿತ