Budget 2021 | ಆರೋಗ್ಯ ಕ್ಷೇತ್ರಕ್ಕೆ ಕಾಯಕಲ್ಪ, ಹೊಸ ಯೋಜನೆ, ಅನುದಾನ ಹೆಚ್ಚಳ ನಿರೀಕ್ಷಿತ
ಕೊರೊನಾ ಎದುರಿಸುವ ಭರದಲ್ಲಿ ಮಿಕ್ಕ ರೋಗಗಳನ್ನು ಮರೆತರೆ ನಿಜವಾಗಿಯೂ ಸಂಕಷ್ಟ ಎದುರಾಗಲಿದೆ. ಆರೋಗ್ಯ ವ್ಯವಸ್ಥೆ ಸದೃಢವಾಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ್ದು, ಈ ವರ್ಷದ ಬಜೆಟ್ನದ್ದು.

ಈ ವರ್ಷದ ಬಜೆಟ್ನಲ್ಲಿ ಅತ್ಯಂತ ಪ್ರಮುಖ ಪಾಲು ಆರೋಗ್ಯ ಕ್ಷೇತ್ರಕ್ಕೇ ಸಲ್ಲುತ್ತದೆ. ಕೊರೊನಾ ಸೋಂಕು ಹರಡುವ ಭೀತಿ ಈಗಲೂ ಸಾರ್ವಜನಿಕರಲ್ಲಿ ಮನೆಮಾಡಿದೆ. ಕೊರೊನಾ ಕಾರಣದಿಂದ ಆರೋಗ್ಯಕ್ಕೆ ಇತರೆಲ್ಲಾ ಕ್ಷೇತ್ರಗಳಿಗಿಂತಲೂ ಹೆಚ್ಚು ಮಹತ್ವ ಸಿಗುತ್ತಿದೆ.
ಅದು ಎಂತಹದೇ ಲಸಿಕೆಯಿರಲಿ, ಜನರಲ್ಲಿ ಕೊರೊನಾ ಕುರಿತ ಭಯ ಈಗಲೂ ಇದೆ. ಕೊರೊನಾ ಲಸಿಕೆ ಕುರಿತ ವದಂತಿಗಳು, ಗಾಳಿಸುದ್ದಿಗಳು ಆಗಾಗ ಹರಿದಾಡುತ್ತಲೇ ಇವೆ. ಆದರೆ, ಆಡಳಿತಗಳು ಕೊರೊನಾ ಎದುರಿಸುವ ಭರದಲ್ಲಿ ಮಿಕ್ಕ ರೋಗಗಳನ್ನು ಮರೆತರೆ ನಿಜವಾಗಿಯೂ ಸಂಕಷ್ಟ ಎದುರಾಗಲಿದೆ. ಆರೋಗ್ಯ ವ್ಯವಸ್ಥೆಗೆ ‘ಕೊರೊನಾ ಪಾಸಿಟಿವ್’ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ್ದು, ಈ ವರ್ಷದ ಬಜೆಟ್ನದ್ದು.
ಹಿಂದಿನ ಬಜೆಟ್ನಲ್ಲಿ ಆರೋಗ್ಯಕ್ಕೆ ಸಿಕ್ಕಿದ್ದೆಷ್ಟು? 2019-20ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ₹ 61,398.12 ಕೋಟಿ ಮೊತ್ತವನ್ನು ಸರ್ಕಾರ ಒದಗಿಸಿತ್ತು. ಹಿಂದಿನ ವರ್ಷದ ಬಜೆಟ್ನಲ್ಲಿ ಈ ಮೊತ್ತ ಕೊಂಚ ಹೆಚ್ಚಳವಾಗಿ, ₹ 69,000 ಕೋಟಿಯನ್ನು ದೇಶದ ಜನರ ಆರೋಗ್ಯಕ್ಕಾಗಿ ಮೀಸಲಿಡಲಾಯಿತು. ಸದ್ಯ ದೇಶದ ಜಿಡಿಪಿಯ ಶೇ 1.4 ಭಾಗವನ್ನಷ್ಟೇ ಆರೋಗ್ಯ ಕ್ಷೇತ್ರದಲ್ಲಿ ತೊಡಗಿಸುತ್ತಿದ್ದೇವೆ. ಐರೋಪ್ಯ ದೇಶಗಳಿಗೆ ಹೋಲಿಸಿದರೆ ಆರೋಗ್ಯ ಕ್ಷೇತ್ರದ ಮೇಲಿನ ನಮ್ಮ ಹೂಡಿಕೆ ಕಿಂಚಿತ್ ಮಾತ್ರ.
ಸಬಲಗೊಳ್ಳಲಿ ಆಯುಷ್ಮಾನ್ ಭಾರತ್ ಆಯುಷ್ಮಾನ್ ಭಾರತ್ ಯೋಜನೆಯ ಮೇಲೆ ಈ ಬಜೆಟ್ನಲ್ಲಿ ಎಲ್ಲಿಲ್ಲದ ನಿರೀಕ್ಷೆ ಮೂಡಿದೆ. ದೇಶದ ಬಡಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿದ್ದ ಈ ಯೋಜನೆಗೆ ಶಕ್ತಿ ತುಂಬುವ ಕೆಲಸ 2021ರ ಬಜೆಟ್ನಿಂದ ಆಗಬೇಕಿದೆ.
ಬದಲಾಗುತ್ತಿರುವ ಜೀವನಶೈಲಿಯಿಂದ ಭಾರತೀಯರಲ್ಲಿ ಮಧುಮೇಹಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಲೆಕ್ಕವೊಂದರ ಪ್ರಕಾರ ದೇಶದ ಮಧುಮೇಹಿಗಳ ಸಂಖ್ಯೆ 7.7 ಕೋಟಿ. ಹೃದ್ರೋಗ, ರಕ್ತದೊತ್ತಡ ಮುಂತಾದವುಗಳನ್ನಂತೂ ಮರೆಯುವಂತಿಲ್ಲ. ಮಾರಕ ಕ್ಯಾನ್ಸರ್ನಂತಹ ಕಾಯಿಲೆಗಳಿಗೆ ಚಿಕಿತ್ಸೆ ಈಗಲೂ ನಮ್ಮಲ್ಲಿ ಗಗನಕುಸುಮವೇ ಆಗಿರುವಾಗ ಕೊರೊನಾ ಸೋಂಕು ಕಾಲಿಟ್ಟಿದೆ. ಜನರನ್ನು ರೋಗಗಳ ಪ್ರಭಾವಳಿಯಿಂದ ಹೊರತರುವಂತಹ ಜಾದೂ ಮಾಡಬೇಕಿದೆ ಸರ್ಕಾರ. ಇದೇ ಕಾರಣದಿಂದ ಆಯುಷ್ಮಾನ್ ಭಾರತಕ್ಕೆ ಮಹತ್ವ ಹೆಚ್ಚಿದೆ.
ಇದನ್ನೂ ಓದಿ: ಆರ್ಥಿಕತೆ V-ಆಕಾರದಲ್ಲಿ ಚೇತರಿಸಿಕೊಳ್ಳುತ್ತಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ, ಅದರರ್ಥವೇನು?
ಆರೋಗ್ಯ ಕ್ಷೇತ್ರವನ್ನು ಬಲಗೊಳಿಸುವ ಮಂತ್ರವನ್ನು ಕೇಂದ್ರ ಸರ್ಕಾರ ಎಡಬಿಡದೇ ತುಟಿಗೆ ಬಿಡುವು ನೀಡದಂತೆ ಜಪಿಸಬೇಕಿದೆ. ಅದರಲ್ಲೂ, ಕೊರೊನಾ ಸೋಂಕಿನ ನಂತರ ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡುವ ಅನಿವಾರ್ಯತೆ ಎದುರಾಗಿದೆ. ತುರ್ತು ಚಿಕಿತ್ಸೆಗಾಗಿ ಗ್ರಾಮೀಣ ಭಾಗಗಳ ಆಸ್ಪತ್ರೆಗಳಲ್ಲಿ ದೊರಕುವ ಸೌಲಭ್ಯಗಳನ್ನು ಉನ್ನತೀಕರಿಸದೇ ವಿಧಿಯಿಲ್ಲ. ಜತೆಜತೆಗೆ, ದೇಶದಲ್ಲಿ ಮುಂಚೂಣಿಗೆ ಬರುತ್ತಿರುವ ಔಷಧ ತಯಾರಿಕೆ ಕ್ಷೇತ್ರಕ್ಕೆ ಸರ್ಕಾರ ಖಂಡಿತ ಆದ್ಯತೆ ನೀಡಲಿದೆ ಎಂಬ ಭರವಸೆಯಂತೂ ಈಗಾಗಲೇ ದೊರೆತಿದೆ.
ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಸರ್ಕಾರವೂ ಸನ್ನದ್ಧವಾಗಿದೆ ಎನ್ನುತ್ತವೆ ಬಲ್ಲ ಮೂಲಗಳು. ಈ ವರ್ಷದ ಬಜೆಟ್ನಲ್ಲಿ ಆರೋಗ್ಯ ಸೆಸ್ ವಿಧಿಸುವ ಸಾಧ್ಯತೆಗಳೂ ಇಲ್ಲದಿಲ್ಲ. ಈ ವರ್ಷದಿಂದ ಇತರ ರೋಗಗಳ ಜತೆ ಕೊರೊನಾ ಕೂಡ ರೋಗಗಳ ಪಟ್ಟಿಗೆ ಸೇರಿಕೊಂಡಿದೆ. ಈ ಬಜೆಟ್ನಿಂದಾದರೂ ಆಸ್ಪತ್ರೆಗಳ ಮೇಲೆ ಸುರಿಯುವ ಹಣಕಡಿಮೆಯಾಗಬಹುದೇ ಎಂಬ ನಿರೀಕ್ಷೆ ಶ್ರೀಸಾಮಾನ್ಯರದು.
Budget 2021 | ರೈತರ ಖಾತೆಗೆ ಹೆಚ್ಚು ಹಣ, ಕಿಸಾನ್ ಸಮ್ಮಾನ್ ಮೊತ್ತ ₹10,000ಕ್ಕೆ ಏರುವ ನಿರೀಕ್ಷೆ