Budget 2021 | ಮಂಡನೆಯಾಯ್ತು Economic Survey: ಕೃಷಿಯ ಭರವಸೆ, ಶೇ 11ರ ಜಿಡಿಪಿ ಪ್ರಗತಿ ನಿರೀಕ್ಷೆ
ಸಂಸತ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2020-21 ರ ಆರ್ಥಿಕ ಸಮೀಕ್ಷೆಯಲ್ಲಿ ಆರ್ಥಿಕ ಪ್ರಗತಿ ಶೀಘ್ರಗತಿಯಲ್ಲಿ ಚೇತರಿಕೆ ಕಾಣುವ ಆಶಾಭಾವನೆ ವ್ಯಕ್ತವಾಗಿದೆ.
ದೆಹಲಿ: ಸಂಸತ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2020-21 ರ ಆರ್ಥಿಕ ಸಮೀಕ್ಷೆಯಲ್ಲಿ ಆರ್ಥಿಕ ಪ್ರಗತಿ ಶೀಘ್ರಗತಿಯಲ್ಲಿ ಚೇತರಿಕೆ ಕಾಣುವ ಆಶಾಭಾವನೆ ವ್ಯಕ್ತವಾಗಿದೆ. V-Shape Recovery ಎಂಬ ಆರ್ಥಿಕ ಪರಿಭಾಷೆಯಲ್ಲಿ ಸಮೀಕ್ಷೆ ಉಲ್ಲೇಖಿಸಿದೆ. ಕೊರೊನಾ ಕಾರಣದಿಂದ ತೀವ್ರಗತಿಯಲ್ಲಿ ಕುಸಿದಿದ್ದ ದೇಶದ ಆರ್ಥಿಕ ಪರಿಸ್ಥಿತಿಯು, ಅತಿಶೀಘ್ರ ಚೇತರಿಸಿಕೊಳ್ಳಲಿದೆ ಎಂದು ಸಮೀಕ್ಷೆ ಆಶಾಭಾವನೆ ಬಿತ್ತಿದೆ.
ಆರ್ಥಿಕ ಸಮೀಕ್ಷೆ 2021ರ ಮುಖ್ಯ ಅಂಶಗಳು
2021 ರ ಮೇ ತಿಂಗಳಲ್ಲಿ ಖಾಸಗಿ ಟ್ರೇನ್ ಬಿಡ್ಡಿಂಗ್ ಮುಕ್ತಾಯವಾಗಲಿದ್ದು, 2023-24ರಲ್ಲಿ ಖಾಸಗಿ ರೈಲು ಸಂಚಾರಕ್ಕೆ ಅವಕಾಶ ನೀಡುವ ಸಂಭವವಿದೆ.
2021 ರ ಪ್ರಾರಂಭದಲ್ಲಿ ವಾಯುಮಾರ್ಗ ಪ್ರಯಾಣ ಮೊದಲಿನ ಸ್ಥಿತಿಗೆ ಬರಲಿದೆ ಎಂದು ಉಲ್ಲೇಖಿಸಲಾಗಿದೆ.
2020-21 ರಲ್ಲಿ ದೇಶದ ಜಿಡಿಪಿ ಪ್ರಮಾಣದಲ್ಲಿ ಶೇಕಡಾ 7.7 ರ ಕುಸಿತ ದಾಖಲಾಗುವ ಸಾಧ್ಯತೆಯಿದೆ. ಆದರೆ 2021- 22 ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ 11 ರ ದರದಲ್ಲಿ ಬೆಳವಣಿಗೆ ನಿರೀಕ್ಷೆ ವ್ಯಕ್ತಪಡಿಸಲಾಗಿದೆ.
ದೇಶದ ಕೃಷಿ ಕ್ಷೇತ್ರದಲ್ಲಿ ಮಾತ್ರ ಆಶಾದಾಯಕ ಚೇತರಿಕೆ ಕಾಣಿಸುವ ಸಾಧ್ಯತೆಯಿದೆ ಎಂದು ಆರ್ಥಿಕ ಸಮೀಕ್ಷೆ 2021 ತಿಳಿಸಿದೆ. ಜತೆಗೆ, ಮುಂದಿನ ಎರಡು ವರ್ಷದಲ್ಲಿ ಆರ್ಥಿಕತೆ ಸಂಪೂರ್ಣ ಚೇತರಿಕೆ ಆಗಲಿದೆ ಎಂದು ಉಲ್ಲೇಖಿಸಲಾಗಿದೆ.
ದೇಶದ ಕೃಷಿ ಕ್ಷೇತ್ರದಲ್ಲಿ ಮಾತ್ರ ಆಶಾದಾಯಕ ಚೇತರಿಕೆ ಕಾಣಿಸುವ ಸಾಧ್ಯತೆಯಿದೆ ಎಂದು ಆರ್ಥಿಕ ಸಮೀಕ್ಷೆ 2021 ತಿಳಿಸಿದೆ. ಜತೆಗೆ, ಮುಂದಿನ ಎರಡು ವರ್ಷದಲ್ಲಿ ಆರ್ಥಿಕತೆ ಸಂಪೂರ್ಣ ಚೇತರಿಕೆ ಆಗಲಿದೆ ಎಂದು ಉಲ್ಲೇಖಿಸಲಾಗಿದೆ.
ನಲುಗಿದ ಆರ್ಥಿಕತೆ ಸರಿಪಡಿಸಲು 2001ರ ನೊಬೆಲ್ ಪುರಸ್ಕಾರ ಪಡೆದ ಸಂಶೋಧನೆ ಅಳವಡಿಕೆ
ಕೊರೊನಾ ಪಿಡುಗಿನ ಕಾರಣದಿಂದ ದೇಶವು ಬಳಲಿದ್ದು ಜನರ ಜೀವ-ಜೀವನ ಉಳಿಸಲು ತನ್ನ ಸಾಮರ್ಥ್ಯವನ್ನು ಸಶಕ್ತವಾಗಿ ಬಳಸುತ್ತಿದೆ. 2001ರಲ್ಲಿ ಹನ್ಸನ್ ಮತ್ತು ಸರ್ಜೆಂಟ್ ಅವರುಗಳ ಸಂಶೋಧನಾ ಪದ್ಧತಿಯ ಮೂಲಕ ದೇಶದಲ್ಲಿ ಕೊರೊನಾ ವಿರುದ್ಧದ ಆರ್ಥಿಕ ಹೋರಾಟ ನಡೆಸಲಾಯಿತು ಎಂದು ಸಮೀಕ್ಷೆ ತಿಳಿಸಿದೆ. ಹನ್ಸನ್ ಮತ್ತು ಸರ್ಜೆಂಟ್ ಅವರ ಅರ್ಥಶಾಸ್ತ್ರದಲ್ಲಿನ ಈ ಸಂಶೋಧನೆಗೆ 2001ರಲ್ಲಿ ನೊಬೆಲ್ ಪುರಸ್ಕಾರ ಸಂದಿತ್ತು. ಆಸ್ತಿ ಬೆಲೆಗಳ ಪ್ರಾಯೋಗಿಕ ವಿಶ್ಲೇಷಣೆಯ ಕುರಿತು ಸಂಶೋಧನೆ ನಡೆಸಲಾಗಿತ್ತು.
ಕೊರೊನಾದಿಂದ ಇಡೀ ವಿಶ್ವದ ಆರ್ಥಿಕ ಸ್ಥಿತಿಯೇ ಸಂಕುಚಿತಗೊಂಡಿರುವಾಗ ಎರಡಂಕಿ ಜಿಡಿಪಿ ಸಾಧಿಸಲಿರುವ ಏಕೈಕ ದೇಶ ಭಾರತ ಎಂದು ಆರ್ಥಿಕ ಸಮೀಕ್ಷೆ ವಿವರಿಸುತ್ತದೆ.
ಸ್ಥೂಲ ಆರ್ಥಿಕತೆಯ ಮೂಲಕ ದೇಶದ ಆರ್ಥಿಕ ಚೇತರಿಕೆ ಕಾಣಲಿದೆ. ಅಲ್ಲದೇ, ಭದ್ರವಾಗಿ ನೆಲೆನಿಂತಿರುವ ರೂಪಾಯಿಯ ಹಿತಕರ ಮೌಲ್ಯ, ಚಾಲ್ತಿಖಾತೆಗಳು, ಬೆಳೆಯುತ್ತಿರುವ ವಿದೇಶೀ ಮಿನಿಮಯ ಮೀಸಲು ಮುಂತಾದ ಅಂಶಗಳು ಆರ್ಥಿಕವಾಗಿ ಬಲಗೊಳ್ಳಲು ಸಹಕಾರಿಯಾಗಲಿದೆ ಎಂದು ಆರ್ಥಿಕ ಸಮೀಕ್ಷೆ 2021ರಲ್ಲಿ ಅಂದಾಜಿಸಲಾಗಿದೆ.
ಆರ್ಥಿಕ ಸಮಿಕ್ಷೆಯ ಪೂರ್ಣಪಠ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ
Published On - 3:17 pm, Fri, 29 January 21