ಬಾಗಲಕೋಟೆ: ತಾವು ಪ್ರತಿನಿಧಿಸುವ ಬಾದಾಮಿ ವಿಧಾನಸಭಾ ಕ್ಷೇತ್ರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ಕೊಟ್ಟ ವೇಳೆ ಅವರ ಎದುರು ಪ್ರವಾಹ ಸಂತ್ರಸ್ತೆಯೊಬ್ಬರು ತಮ್ಮ ಅಳಲು ತೋಡಿಕೊಳ್ಳಲು ಮುಂದಾದರು. ತಮಗೊಂದು ಸೂರಿಗಾಗಿ ಸಿದ್ದರಾಮಯ್ಯ ಕಚೇರಿಗೆ ಅರ್ಜಿ ಸಲ್ಲಿಸಲು ಬಾದಾಮಿ ತಾಲೂಕಿನ ನೆಲವಿಗಿ ಗ್ರಾಮದ ಯಲ್ಲವ್ವ ಹನಮಂತಪ್ಪ ಗಾರವಾಡ ಬಂದಿದ್ದರು. ಆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಸರಿಯಾಗಿ ಸ್ಪಂದಿಸಲಿಲ್ಲ ಎಂದು ಅವರು ತಮ್ಮ ಆಕ್ರೋಶ ಹೊರಹಾಕಿದರು.
ಒಂದು ವರ್ಷದಿಂದ ದೇವಸ್ಥಾನದಲ್ಲಿ ಇದ್ದೇನೆ. ಸಾಹೇಬ್ರು ಮನೆ ಹಾಕಿಕೊಡ್ತೀನಿ ಅಂತಾ ಹೇಳಿ ಹೋದ್ರು. ಆದರೆ, ದಾದ್ ಮಾಡಿಲ್ಲ ಅವರು ಎಂದು ತಮ್ಮ ನೋವು ತೋಡಿಕೊಂಡರು. ಯಾಕ್ರೀ ನಮ್ಮ ಜಾತಿ (ಸಿದ್ದರಾಮಯ್ಯ), ನಾವ್ ಆರಿಸಿ ತಂದು, ನಮ್ಮನ್ನ ಕೇಳಲ್ಲ ಅಂದ್ರ ನೀವ್ಯಾಕ? ಎಂದು ಯಲ್ಲವ್ವ ಹನಮಂತಪ್ಪ ಗಾರವಾಡ ಸಿದ್ದರಾಮಯ್ಯಗೆ ಖಾರವಾಗಿ ಪ್ರಶ್ನಿಸಿದ್ದಾರೆ.
ಜೊತೆಗೆ, ನಿಮ್ಮಂಥ ಲೀಡರು ಎಣ್ಣಿ ಹಾಕಿ ಸಾಯಿ ಹೊಡೀರಿ ನಮ್ಮಂಥವರನ್ನ ಎಂದು ಸ್ಥಳೀಯ ನಾಯಕರ ವಿರುದ್ಧವೂ ನೆರೆ ಸಂತ್ರಸ್ತೆ ಆಕ್ರೋಶ ಹೊರಹಾಕಿದಳು. ಜೊತೆಗೆ, ಶಂಕ್ರಮ್ಮನ ಮೇಲೆ ಆಣೆ ಮಾಡಿ ಹೇಳ್ತೇನಿ. ನನಗಾ ಮನೆ ಇಲ್ಲ. ಗುಡ್ಯಾಗ ಅದೇನಿ ಎಂಬ ತಮ್ಮ ಅಸಹಾಯಕತೆ ಹಂಚಿಕೊಂಡರು.