ಕೋಲಾರ: ಜೆಡಿಎಸ್ ರೈತರಿಗೆ ಯಾವುದೇ ಕಾರಣಕ್ಕೂ ದ್ರೋಹ ಮಾಡುವುದಿಲ್ಲ. ನಮ್ಮ ಪಕ್ಷ, ನಾನು ಮುಖ್ಯಮಂತ್ರಿ ಆಗಿದ್ದಾಗ 25 ಸಾವಿರ ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಲಾಗಿದೆ. ಆಗ ಯಾವ ರೈತ ಮುಖಂಡರೂ ಕುಮಾರಸ್ವಾಮಿಯಿಂದ ಅನುಕೂಲ ಆಗಿದೆ ಅಂತಾ ಹೇಳಿಲ್ಲ ಎಂದು ಕೋಲಾರದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಕೋಲಾರದಲ್ಲಿ, ಜೆಡಿಎಸ್ ಪಕ್ಷದ ಕಛೇರಿಯ ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಸಿದ ಬಳಿಕ ಕುಮಾರಸ್ವಾಮಿ ಮಾತನಾಡಿದ್ದಾರೆ. ಅವರಿಗೆ ನಿಖಿಲ್ ಕುಮಾರಸ್ವಾಮಿ, ಶಾಸಕ ಶ್ರೀನಿವಾಸಗೌಡ, ಸ್ಥಳೀಯ ಮುಖಂಡರು ಸಾತ್ ನೀಡಿದ್ದಾರೆ.
ಬದಲಾದ ಕುಮಾರಸ್ವಾಮಿ ನಿಲುವು, ಯಾಕೆ?
ಜೆಡಿಎಸ್ ಬೆಂಬಲದಿಂದ ವಿವಾದಿತ ಭೂಸುಧಾರಣಾ ತಿದ್ದುಪಡಿ ವಿಧೇಯಕ ವಿಧಾನಪರಿಷತ್ನಲ್ಲಿ ನಿನ್ನೆ ಅಂಗೀಕಾರವಾಗಿತ್ತು. ಭೂಸುಧಾರಣಾ ತಿದ್ದುಪಡಿ ವಿಧೇಯಕಕ್ಕೆ ಜೆಡಿಎಸ್ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಹಲವರು ಪಕ್ಷವನ್ನು ರೈತ ವಿರೋಧಿ ಎಂದು ಕರೆದಿದ್ದರು. ಕಾಂಗ್ರೆಸ್ ಕೂಡ ಜೆಡಿಎಸ್ ನಡೆಯನ್ನು ಆಕ್ಷೇಪಿಸಿತ್ತು.
ಈ ಹಿಂದೆ ಭೂಸುಧಾರಣಾ ತಿದ್ದುಪಡಿ ವಿಧೇಯಕವನ್ನು ವಿರೋಧಿಸಿದ್ದ ಜೆಡಿಎಸ್ ಈಗ ಬೆಂಬಲ ಸೂಚಿಸಿರುವುದು ಪಕ್ಷದ ಟೀಕೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ, ಜೆಡಿಎಸ್ ಪಕ್ಷ ರೈತರಿಗೆ ಯಾವುದೇ ಕಾರಣಕ್ಕೂ ದ್ರೋಹ ಮಾಡುವುದಿಲ್ಲ ಎಂದು ಕುಮಾರಸ್ವಾಮಿ ಇಂದು ಹೇಳಿದ್ದಾರೆ.
‘ಯಡಿಯೂರಪ್ಪ ಕೆಲ ತಿದ್ದುಪಡಿ ಕೈಬಿಟ್ಟಿದ್ದಾರೆ, ಮೊದಲು ಅದನ್ನು ತಿಳಿದುಕೊಳ್ಳಿ’
ರೈತ ಮುಖಂಡರು ಭೂಸುಧಾರಣಾ ತಿದ್ದುಪಡಿ ಕಾಯ್ದೆ ಬಗ್ಗೆ ಮೊದಲು ತಿಳಿದುಕೊಳ್ಳಬೇಕು ಎಂದಿರುವ ಕುಮಾರಸ್ವಾಮಿ, ಮೊದಲು ಭೂಸುಧಾರಣಾ ತಿದ್ದುಪಡಿ ವಿಧೇಯಕಕ್ಕೆ ನಾವು ಕೂಡ ವಿರೋಧ ಮಾಡಿದ್ದೆವು. ಅದರಲ್ಲಿನ ಮಾರಕ ಅಂಶಗಳ ಬಗ್ಗೆ ಗಮನ ಸೆಳೆದಿದ್ದೆವು. ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೆಲ ತಿದ್ದುಪಡಿಗಳನ್ನು ಕೈಬಿಟ್ಟಿದ್ದಾರೆ ಎಂದು ಹೆಚ್.ಡಿ.ಕೆ. ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಚಿಹ್ನೆಗೆ ವ್ಯಾಲ್ಯೂ ಇಲ್ಲ
ಕಾಂಗ್ರೆಸ್ ಪಕ್ಷದ ಚಿಹ್ನೆಗೆ ವ್ಯಾಲ್ಯೂ ಇಲ್ಲದಂತಾಗಿದೆ. ಹೀಗಾಗಿ ಹಸಿರು ಟವಲ್ ಹಾಕಿಕೊಂಡು ಬೀದಿಗೆ ಬಂದಿದೆ. ನಾನು ಬಿಜೆಪಿ ಬಗ್ಗೆ ಮೃದು ಧೋರಣೆ ತೋರುವುದಿಲ್ಲಎಂದು ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಾರೆ. ನಾವು ಕಾಂಗ್ರೆಸ್‌ನಂತೆ ಡಬಲ್ ಗೇಮ್ ರಾಜಕೀಯ ಮಾಡುವುದಿಲ್ಲ. ಕೇವಲ ಹೋರಾಟ ಮಾಡುವುದರಿಂದ ಎಲ್ಲಾ ಸಮಸ್ಯೆ ಬಗೆಹರಿಯುವುದಿಲ್ಲ. ರೈತರ ಸಮಸ್ಯೆಗಳ ಆಲಿಕೆಗೆ ಪ್ರತಿ ತಿಂಗಳು ಸಭೆ ಮಾಡಿದ್ದೇನೆ. ಸಭೆ ಮಾಡಿರುವ ಬಗ್ಗೆ ವಿಧಾನಸೌಧದಲ್ಲಿ ದಾಖಲೆಗಳಿವೆ. ನಾನು ಕಾಂಗ್ರೆಸ್ ಬೆಂಬಲವಿಲ್ಲದೆ ಅನೇಕ ಕೆಲಸ ಮಾಡಿದ್ದೇನೆ ಎಂದು ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಗುಡುಗಿದ ಕುಮಾರಸ್ವಾಮಿ
ಸಿದ್ದರಾಮಯ್ಯರ ಬಗ್ಗೆ ಕಟುವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಾನು ಧೈರ್ಯವಾಗಿ ಹಗಲಿನಲ್ಲೇ ಸಿಎಂ ಭೇಟಿ ಮಾಡಿದ್ದೇನೆ. ಸಿದ್ದರಾಮಯ್ಯರಂತೆ ಮಧ್ಯರಾತ್ರಿ ಹೋಗಿ ಯಡಿಯೂರಪ್ಪರನ್ನು ಭೇಟಿ ಮಾಡಿಲ್ಲ ಎಂದಿದ್ದಾರೆ. ಸಿದ್ದರಾಮಯ್ಯ ಶಿಷ್ಯರನ್ನು ಬಿಜೆಪಿಗೆ ಕಳಿಸಿದ್ದಾರೆಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಸಿಎಂ ಬದಲಾವಣೆ ಬಗ್ಗೆ ಸಿದ್ದರಾಮಯ್ಯಗೆ ಗೊತ್ತಿರಬೇಕು. ಹೀಗಾಗಿ ಅವರ ಶಿಷ್ಯರನ್ನು ಬಿಜೆಪಿಗೆ ಕಳಿಸಿರಬೇಕು ಎಂದು ಹೇಳಿದ್ದಾರೆ.
ಭೂ ಸುಧಾರಣಾ ತಿದ್ದುಪಡಿ ವಿಧೇಯಕ ವಿಧಾನ ಪರಿಷತ್ನಲ್ಲಿ ಅಂಗೀಕಾರ; JDS ಬೆಂಬಲ
Published On - 11:47 am, Wed, 9 December 20