ಮೈಸೂರು: ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ಮೈಸೂರಿನಲ್ಲಿ ನಟ ಅಭಿಷೇಕ್ ಅಂಬರೀಶ್ ಚಾಲನೆ ನೀಡಿದ್ದಾರೆ. ನಗರದ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಚೆಕ್ ನೀಡಿ ಅಭಿಯಾನಕ್ಕೆ ಚಾಲನೆ ನೀಡಿದ್ರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಫೆಬ್ರವರಿ 5ರವರೆಗೆ ದೇಣಿಗೆ ಸಂಗ್ರಹಿಸಲು ತೀರ್ಮಾನಿಸಲಾಗಿದೆ. ಹೀಗಾಗಿ ದೇಶದ 11 ಕೋಟಿ ಹಿಂದೂಗಳ ಮನೆಯಿಂದ ದೇಣಿಗೆ ಸಂಗ್ರಹ ಮಾಡಲಾಗುತ್ತಿದೆ. ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನಿಂದ ದೇಶದ 4 ಲಕ್ಷ ಹಳ್ಳಿಗಳಲ್ಲಿ ದೇಣಿಗೆ ಸಂಗ್ರಹಕ್ಕೆ ತೀರ್ಮಾನಿಸಲಾಗಿದೆ.
ಈ ನಿಟ್ಟಿನಲ್ಲಿ ಅರಮನೆ ನಗರಿ ಮೈಸೂರಿನಲ್ಲೂ ದೇಣಿಗೆ ಸಂಗ್ರಹಿಸಲಾಗುತ್ತಿದ್ದು ಇಂದು ನಟ ಅಭಿಷೇಕ್ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ನೀಡಿದ್ರು. ಈ ವೇಳೆ ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರು ಭಾಗಿಯಾಗಿದ್ರು.
ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು
ಕಾರ್ಯಕ್ರಮದ ವೇಳೆ ಅಭಿಷೇಕ್ ಅಂಬರೀಶ್ ಜತೆ ಸೆಲ್ಫಿ ತೆಗೆಸಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದರು. ನಿಧಿ ಅಭಿಯಾನಕ್ಕೆ ಚಾಲನೆ ನೀಡಿ ಹೊರಡುವ ವೇಳೆ ಅಭಿಷೇಕ್ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದರು. ಹಾಗೂ ನಟನನ್ನು ಮುತ್ತಿಗೆ ಹಾಕಿದ್ದರು. ಬಳಿಕ ಅಭಿಷೇಕ್ ಅಭಿಮಾನಿಗಳ ಜೊತೆ ಸಂಯಮದಿಂದ ವರ್ತಿಸಿ ಸ್ವತಃ ತಾವೇ ಅಭಿಮಾನಿಯ ಫೋನ್ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಟ್ರು. ಅಭಿಮಾನಿಗಳಿಗೆ ಸೆಲ್ಫಿ ನೀಡಿ ನಂತರ ತೆರಳಿದ್ರು.
Published On - 12:40 pm, Fri, 15 January 21