ಬೆಂಗಳೂರು: ಟಿವಿ, ಫ್ರಿಡ್ಜ್, ಬೈಕ್ ಇದ್ದವರು ಬಿಪಿಎಲ್ ಕಾರ್ಡನ್ನು ರದ್ದು ಪಡಿಸಲಾಗುತ್ತದೆ ಎಂಬ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಳ್ಳಾರಿ ಬಿಜೆಪಿ ಸೋಮಶೇಖರ ರೆಡ್ಡಿ ಮನೆ ಮನೆ ಸಮೀಕ್ಷೆ ನಡೆಸಿದರೆ ನಕಲಿ ಬಿಪಿಎಲ್ ಕಾರ್ಡ್ದಾರರನ್ನು ಪತ್ತೆ ಮಾಡಬಹುದು ಎಂದರು. ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚೆಯಾಗಿರುವುದು ಗೊತ್ತಿಲ್ಲ. ಇಂತಹ ನಿಯಮಗಳ ವಿರುದ್ಧ ಹೋರಾಟ ಮಾಡುತ್ತೇವೆ. ನಾವು ಬಿಜೆಪಿಯವರಾದರೂ ಸಹ ಹೋರಾಟ ಮಾಡುತ್ತೇವೆ. ಯಾರೇ ಆಗಲಿ ಸ್ವಂತ ನಿರ್ಧಾರ ಜನರ ಮೇಲೆ ಹೇರಬಾರದು. ಸ್ವಂತ ನಿರ್ಧಾರಗಳು ತೆಗೆದುಕೊಂಡರೆ ಈ ರೀತಿಯಾಗುತ್ತದೆ. ಸಿಎಂ ಗಮನಕ್ಕೆ ತರದೆ ನಿರ್ಧಾರ ಕೈಗೊಂಡರೆ ತಪ್ಪಾಗುತ್ತದೆ. ಸಚಿವರ ನಿರ್ಧಾರ ಬಡವರ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಸಾಮಾನ್ಯವಾಗಿ ಟಿವಿ, ಫ್ರಿಡ್ಜ್ ಎಲ್ಲರ ಮನೆಯಲ್ಲೂ ಇರುತ್ತದೆ. ಸಾಲ ಮಾಡಿಯಾದರೂ ಜನ ಬೈಕ್ ತೆಗೆದುಕೊಳ್ಳುತ್ತಾರೆ. ಹೀಗಾಗಿ ಇಂತಹ ನಿಯಮಗಳನ್ನು ಮಾಡಿದರೆ ತಪ್ಪಾಗುತ್ತದೆ. ಸರ್ಕಾರದ ಯೋಜನೆ ಜನರಿಗೆ ತಲುಪುದಕ್ಕೆ ಟಿವಿ ಬೇಕು. ಟಿವಿಯೇ ಇರಬಾರದು ಎನ್ನುವುದನ್ನು ನಾವು ವಿರೋಧಿಸುತ್ತೇವೆ. ನಿಜವಾದ ಬಡವರನ್ನು ಆರ್ಥಿಕ ಮಟ್ಟದಿಂದ ಗುರುತಿಸಬೇಕೆಂದರು.
ಆನಂದ್ ಸಿಂಗ್ ವಿರುದ್ಧ ಸೋಮಶೇಖರ್ ರೆಡ್ಡಿ ಕಿಡಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಬೇಕು. ಯಾವುದೇ ಕಾರಣಕ್ಕೂ ಆನಂದ್ ಸಿಂಗ್ ಬಳ್ಳಾರಿ ಉಸ್ತುವಾರಿ ಆಗುವುದಕ್ಕೆ ನಾವು ಬಿಡಲ್ಲ. ಈಗಾಗಲೇ ಎಲ್ಲ ಶಾಸಕರು ಸಿಎಂ ಗೆ ಪತ್ರ ಬರೆಯುತ್ತಿದ್ದೇವೆ. ಈಗಾಗಲೇ ಬಳ್ಳಾರಿ ವಿಭಜನೆ ವಿರೋಧಿಸಿ ಕೆಲವರು ಕೋರ್ಟ್ಗೆ ಹೋಗಿದ್ದಾರೆ. ನಾವು ಕೂಡ ಬಳ್ಳಾರಿ ವಿಭಜನೆ ಆದೇಶ ವಾಪಸ್ಸು ಪಡೆಯುವಂತೆ ಶೀಘ್ರವೇ ಸಿಎಂ ಭೇಟಿ ಮಾಡುತ್ತೇವೆ. ಸಿಎಂ ಯಡಿಯೂರಪ್ಪ ಇದಕ್ಕೆ ಸ್ಪಂಧಿಸಿ ಬಳ್ಳಾರಿ ವಿಭಜನೆ ಆದೇಶ ವಾಪಸ್ಸು ಪಡೆಯುವ ವಿಶ್ವಾಸ ಇದೆ. ಆನಂದ್ ಸಿಂಗ್ ಬಳ್ಳಾರಿ ಉಸ್ತುವಾರಿ ಬಿಟ್ಟು, ವಿಜಯನಗರ ಉಸ್ತುವಾರಿಯಾಗಲಿ. ಜಿಲ್ಲೆ ವಿಭಜಿಸಿ ಬಳ್ಳಾರಿಯಲ್ಲಿ ಇರುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು.