
ಚಿತ್ರದುರ್ಗ: ದೆವ್ವ ಬಿಡಿಸುವುದಾಗಿ ನಂಬಿಸಿ ಪೂಜಾರಿಯೊಬ್ಬ 3 ವರ್ಷದ ಬಾಲಕಿಯನ್ನು ಕೊಲೆಗೈದಿದ್ದಾನೆ ಎಂಬ ಆರೋಪವನ್ನು ಆಕೆಯ ಪೋಷಕರು ಮಾಡಿದ್ದಾರೆ. ಅಂದ ಹಾಗೆ, ಈ ಘಟನೆ ನಡೆದಿರೋದು ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಅಜ್ಜಿ ಕ್ಯಾತನಹಳ್ಳಿಯಲ್ಲಿ. ಪ್ರವೀಣ್ ಮತ್ತು ಶ್ಯಾಮಲಾ ದಂಪತಿಯ 3 ವರ್ಷದ ಹೆಣ್ಣುಮಗು ಪೂರ್ವಿಕಾಳನ್ನ ಪೂಜಾರಿ ರಾಕೇಶ ಕೊಲೆಗೈದಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.
ಪ್ರಜ್ಞೆ ತಪ್ಪಿದ ಬಾಲಕಿಯನ್ನ ಪೂಜಾರಿ ರಾಕೇಶ ಪೋಷಕರಿಗೆ ಒಪ್ಪಿಸಿಬಿಟ್ಟಿದ್ದಾನೆ. ಪೂರ್ವಿಕಾ ಪ್ರಜ್ಞೆತಪ್ಪಿ ಬಿದ್ದ ಹಿನ್ನೆಲೆಯಲ್ಲಿ ಪ್ರವೀಣ್ ಮತ್ತು ಶ್ಯಾಮಲಾ ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ದರು. ಆದರೆ, ಆಸ್ಪತ್ರೆಗೆ ಹೋಗುವಾಗ ಪೂರ್ವಿಕಾ ಮಾರ್ಗಮಧ್ಯೆಯೇ ಅಸುನೀಗಿದ್ದಾಳೆ.
ಈ ಹಿನ್ನೆಲೆಯಲ್ಲಿ ಚಿಕ್ಕಜಾಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚೌಡಮ್ಮನ ದೇಗುಲದ ಪೂಜಾರಿ ರಾಕೇಶನನ್ನ (19) ಪೊಲೀಸರು ಬಂಧಿಸಿದ್ದಾರೆ.