ಬಂಗಾರದ ಬೆಲೆ ಈಚಿನ ದಿನಗಳಲ್ಲಿ ಇಳಿಯುತ್ತಿದೆ. ಮುಂದಿನ ದಿನಗಳಲ್ಲಿ ಬಂಗಾರದ ಬೆಲೆ ಇನ್ನೂ ಇಳಿಯುತ್ತಾ? ಏರುತ್ತಾ? ಚಿನ್ನ ಖರೀದಿಗೆ ಇದು ಸಕಾಲವೇ? ಇನ್ನೂ ಕಾಯಬೇಕೆ? ಮಹಾರಾಷ್ಟ್ರದಲ್ಲಿ ಕೊರೊನಾ ಎರಡನೇ ಅಲೆ ಕಂಡುಬಂದಿದೆ. ಇದು ದೇಶದಲ್ಲಿ ವೇಗವಾಗಿ ವ್ಯಾಪಿಸುತ್ತಾ? ಇದರಿಂದ ಚಿನ್ನದ ಮಾರುಕಟ್ಟೆಯಲ್ಲಿ ಏನಾದರೂ ಬದಲಾವಣೆ ಆಗಬಹುದುದಾ ಎಂಬ ಗೊಂದಲಕ್ಕೆ ಸಂಬಂಧಿಸಿದಂತೆ ಟಿವಿ9 ಕನ್ನಡ ಡಿಜಿಟಲ್ ಲೈವ್ನಲ್ಲಿ (Tv9 Kannada Digital Live) ಸಂವಾದ ನಡೆಯಿತು. ನಿರೂಪಕ ಮಾಲ್ತೇಶ್, ಹೂಡಿಕೆ ತಜ್ಞ ರುದ್ರಮೂರ್ತಿ, ತೆರಿಗೆ ಸಲಹೆಗಾರ ಸಿ.ಎಸ್.ಸುಧೀರ್ ಹಾಗೂ ಕರ್ನಾಟಕ ಜ್ಯುವೆಲರಿ ಅಸೋಸಿಯೇಶನ್ ಅಧ್ಯಕ್ಷ ಟಿ.ಎ.ಶರವಣ ಪಾಲ್ಗೊಂಡಿದ್ದರು.
ಸಂವಾದದ ಆರಂಭದಲ್ಲಿ ಮಾತನಾಡಿದ ತೆರಿಗೆ ಸಲಹೆಗಾರ ಸಿ.ಎಸ್.ಸುಧೀರ್, ಕೊರೊನಾದಿಂದಾಗಿ ಚಿನ್ನದ ದರದಲ್ಲಿ ಏರಿಳಿತ ಕಾಣಬಹುದು ಎನ್ನಲು ಆಗದು. ಷೇರು ಮಾರುಕಟ್ಟೆಯಲ್ಲಿ ಕುಸಿತ ಮುಂದುವರೆದರೆ ಚಿನ್ನ ಖರೀದಿಸಲು ಜನರು ಮುಂದಾಗುತ್ತಾರೆ. ಕೊವಿಡ್ ಸಮಸ್ಯೆಗೆ ಲಸಿಕೆ ಬಂದಿದೆ. ಪ್ರಸ್ತುತ ₹ 43 ಸಾವಿರದ ಆಸುಪಾಸಿನಲ್ಲಿರುವ ಚಿನ್ನದ ದರ ಮುಂದೆಯೂ ಅದೇ ನೆಲೆ ಕಾಪಾಡಿಕೊಳ್ಳಬಹುದು. ಚಿನ್ನ ಖರೀದಿಸಲು ಇದು ಸೂಕ್ತ ಸಮಯ. ಚಿನ್ನ ಖರೀದಿಸಬೇಕೆಂದು ಅಂದುಕೊಂಡವರು, ನೀವು ಅಂದುಕೊಂಡ ಒಟ್ಟು ಪ್ರಮಾಣದಲ್ಲಿ ಅರ್ಧದಷ್ಟನ್ನು ಖರೀದಿಸಿಬಿಡಿ. ಅವಕಾಶ ಕೈ ಮೀರಿ ಹೋದಾಗ ಚಿಂತಿಸಿ ಪ್ರಯೋಜನವಿಲ್ಲ ಎಂದು ಹೇಳಿದರು.
ಜ್ಯುವೆಲ್ಲರಿ ಅಸೋಸಿಯೇಷನ್ ಅಧ್ಯಕ್ಷ ಟಿ.ಎ.ಶರವಣ ಮಾತನಾಡಿ, ಕೊರೊನಾಕ್ಕೆ ಲಸಿಕೆ ಬಂದಿರುವುದರಿಂದ ಚಿನ್ನದ ಬೆಲೆಯ ವಿಚಾರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಷೇರು ಮಾರುಕಟ್ಟೆ ಏರುತ್ತಿದೆ. ಚಿನ್ನದ ಬೆಲೆ ಕುಸಿಯುತ್ತಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಬದಲಾವಣೆ ಕಂಡರೆ ಚಿನ್ನದ ದರದಲ್ಲಿ ವ್ಯತ್ಯಾಸ ಕಾಣುತ್ತದೆ. ಮದುವೆ ಸಮಾರಂಭಕ್ಕೆಂದು ಅಥವಾ ಮನೆಯಲ್ಲಿ ವಿಶೇಷ ಕಾರ್ಯಕ್ರಮಗಳಿದ್ದ ಸಂದರ್ಭದಲ್ಲಿ ಚಿನ್ನ ಕೊಳ್ಳಲು ಬಯಸುತ್ತಿರುವವರು ಅಂಗಡಿಗೆ ಬಂದು ಚಿನ್ನ ಖರೀದಿ ಮಾಡುತ್ತಿದ್ದಾರೆ. ಅಂಗಡಿಗೆ ಬರುತ್ತಿರುವ ಜನ ಸಂಖ್ಯೆ ಹೆಚ್ಚಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಚಿನ್ನ ದರ ಕಡಿಮೆ ಇದೆ. 10 ಗ್ರಾಂಗೆ ಆಭರಣ ಚಿನ್ನ ₹ 43,800 ಹಾಗೂ ಶುದ್ಧ ಚಿನ್ನ ₹ 48,800 ಇದೆ. ಅಮೆರಿಕ ದೇಶದಲ್ಲಿ ಆರ್ಥಿಕ ಪರಿಸ್ಥಿತಿಯಲ್ಲಿ ಬದಲಾವಣೆ ಆದರೆ, ನಮ್ಮ ದೇಶದಲ್ಲಿ ಏರಿಳಿತ ಕಾಣಬಹುದು. ಚಿನ್ನ ಖರೀದಿಸಲು ಇದು ಸೂಕ್ತ ಸಮಯ. ಆಭರಣ ಚಿನ್ನ ಇದೇ ಬೆಲೆಯನ್ನು ಕಾಪಾಡಿಕೊಳ್ಳುತ್ತದೆ. ಚಿನ್ನದ ಧಾರಣೆಯಲ್ಲಿ ತೀವ್ರ ಕುಸಿತ ಕಂಡುಬರುವುದಿಲ್ಲ. ಇಂದೇ ಚಿನ್ನ ಖರೀದಿಸಿ ಎಂದು ಸಲಹೆ ಮಾಡಿದರು.
ಹೂಡಿಕೆ ತಜ್ಞ ರುದ್ರಮೂರ್ತಿ ಮಾತನಾಡಿ, ಚಿನ್ನ ಮತ್ತು ಬೆಳ್ಳಿ ದರದಲ್ಲಿ ನಾವೂ ಇನ್ನೂ ಏರಿಕೆ ಕಾಣುತ್ತೇವೆ. ಎರಡನೇ ಹಂತದ ಕೊರೊನಾ ಬಂದರೆ, ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿದ್ದೇ ಆದರೆ ಚಿನ್ನ ದರ ಏರಿಕೆಯಾಗುತ್ತದೆ. ನೀವು ಕೊಳ್ಳಬೇಕು ಎಂದುಕೊಂಡಿರುವ ಒಟ್ಟು ಚಿನ್ನದ ಪ್ರಮಾಣದಲ್ಲಿ ಅರ್ಧದಷ್ಟನ್ನಾದರೂ ಖರೀದಿಸಿ ಎಂದು ಸಲಹೆ ಮಾಡಿದರು.
ನಮ್ಮ ದೇಶದಲ್ಲಿ ಷೇರು ಮಾರುಕಟ್ಟೆ ಇಳಿದರೆ ಚಿನ್ನದ ಮೌಲ್ಯ ಏರುತ್ತದೆ. ಈಗ ಷೇರು ಮಾರುಕಟ್ಟೆ ಏರುಗತಿಯಲ್ಲಿದೆ.22 ಕ್ಯಾರೆಟ್ ಚಿನ್ನ ದರ 1 ಗ್ರಾಂಗೆ ₹ 4000ಕ್ಕಿಂತ ಕಡಿಮೆಯಾಗಲು ಸಾಧ್ಯವಿಲ್ಲ. 1 ಗ್ರಾಂ ಚಿನ್ನದ ದರದಲ್ಲಿ ₹ 600ರಿಂದ ₹ 650 ಅಂದರೆ ಶೇ 10-15ರಷ್ಟು ಏರಿಕೆಯನ್ನು ಕಾಣಬಹುದು. ನಿನ್ನೆಗೆ ಹೋಲಿಸಿದರೆ ಇಂದೂ ಕೂಡಾ ಬೆಲೆ ಏರಿಕೆ ಕಂಡಿದೆ ಎಂದರು.
ಷೇರು ಮಾರುಕಟ್ಟೆಯಲ್ಲಿ ಸ್ಥಿತಿವಂತರು ವಹಿವಾಟು ನಡೆಸುತ್ತಿದ್ದಾರೆ. ಸಾಮಾನ್ಯ ಜನರು ಸಹ ಸಾಲ ಮಾಡಿ ಚಿನ್ನ ಕೊಂಡುಕೊಳ್ಳುವುದು ಬಿಟ್ಟು, ಷೇರು ಮಾಡುಕಟ್ಟೆ ಹೂಡಿಕೆಯತ್ತ ಮುಖ ಮಾಡುತ್ತಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದ ಕುಸಿತ ಉಂಟಾಗುತ್ತದೆ ಎಂಬುದನ್ನು ಹೇಳಲು ಕಷ್ಟ ಸಾಧ್ಯ. ನೀವು ಏಕೆ ಚಿನ್ನ ಖರೀದಿಸುತ್ತಿದ್ದೀರಿ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಹೂಡಿಕೆ ದೃಷ್ಟಿಯಿಂದ ಚಿನ್ನ ಖರೀದಿ ಮಾಡುವವರು ಚಿನ್ನದ ಬಾಂಡ್ಗಳನ್ನು ಖರೀದಿಸುವುದು ಒಳಿತು ಎಂದು ತಿಳಿಸಿದರು.
ಇನ್ನಷ್ಟು…