Udupi Ramachandra Rao: ಭಾರತದ ಹಿರಿಯ ವಿಜ್ಞಾನಿ ಯುಆರ್ ರಾವ್​ಗೆ ವಿಶೇಷ ಡೂಡಲ್​ ಮೂಲಕ ಗೌರವ ಸಮರ್ಪಿಸಿದ ಗೂಗಲ್​

| Updated By: ganapathi bhat

Updated on: Mar 10, 2021 | 11:31 AM

Today's Google Doodle: ಗೂಗಲ್​ ಸಿದ್ಧಪಡಿಸಿರುವ ಡೂಡಲ್‌ನಲ್ಲಿ ಪ್ರೊಫೆಸರ್ ರಾವ್ ಅವರ ರೇಖಾಚಿತ್ರವು ಭೂಮಿಯ ಹಿನ್ನೆಲೆ ಹೊಂದಿದ್ದು ನಕ್ಷತ್ರಗಳಿಂದ ಕಂಗೊಳಿಸುತ್ತಿದೆ. ಅಲ್ಲದೇ ಯು.ಆರ್.ರಾವ್ ಒಂದು ಕೈಯಲ್ಲಿ ಉಪಗ್ರಹವನ್ನು ಎತ್ತಿ ಹಿಡಿದಿರುವ ಮಾದರಿಯನ್ನು ಗೂಗಲ್ ರಚಿಸಿದೆ.

Udupi Ramachandra Rao: ಭಾರತದ ಹಿರಿಯ ವಿಜ್ಞಾನಿ ಯುಆರ್ ರಾವ್​ಗೆ ವಿಶೇಷ ಡೂಡಲ್​ ಮೂಲಕ ಗೌರವ ಸಮರ್ಪಿಸಿದ ಗೂಗಲ್​
ಗೂಗಲ್​ ತಯಾರಿಸಿದ ಡೂಡಲ್​
Follow us on

ಬೆಂಗಳೂರು: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮಹತ್ವದ ಹೆಜ್ಜೆಯೂರಲು ಸಹಕರಿಸಿದ ಕನ್ನಡಿಗ, ಪ್ರಾಧ್ಯಾಪಕ ಮತ್ತು ಹಿರಿಯ ವಿಜ್ಞಾನಿ ಯು.ಆರ್.ರಾವ್ ಅವರ 89ನೇ ಜನ್ಮದಿನಾಚರಣೆ ಪ್ರಯುಕ್ತ ಗೂಗಲ್​ ವಿಶೇಷ ಡೂಡಲ್ ರಚಿಸಿ ಗೌರವ ಸಮರ್ಪಿಸಿದೆ. ಭಾರತದ ಸ್ಯಾಟಲೈಟ್ ಮ್ಯಾನ್ ಎಂದೇ ಚಿರಪರಿಚಿತರಾದ ಉಡುಪಿ ರಾಮಚಂದ್ರ ರಾವ್​ ಭಾರತೀಯ ಬಾಹ್ಯಾಕಾಶ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. 1975ರ ಸಂದರ್ಭದಲ್ಲಿ ಭಾರತದ ಮೊದಲ ಉಪಗ್ರಹವಾದ ಆರ್ಯಭಟ ಉಡಾವಣೆಯ ಮೇಲ್ವಿಚಾರಣೆಯನ್ನೂ ಹೊತ್ತಿದ್ದರು.

ಗೂಗಲ್​ ಸಿದ್ಧಪಡಿಸಿರುವ ಡೂಡಲ್‌ನಲ್ಲಿ ಪ್ರೊಫೆಸರ್ ರಾವ್ ಅವರ ರೇಖಾಚಿತ್ರವು ಭೂಮಿಯ ಹಿನ್ನೆಲೆ ಹೊಂದಿದ್ದು ನಕ್ಷತ್ರಗಳಿಂದ ಕಂಗೊಳಿಸುತ್ತಿದೆ. ಅಲ್ಲದೇ ಯು.ಆರ್.ರಾವ್ ಒಂದು ಕೈಯಲ್ಲಿ ಉಪಗ್ರಹವನ್ನು ಎತ್ತಿ ಹಿಡಿದಿರುವ ಮಾದರಿಯನ್ನು ಗೂಗಲ್ ರಚಿಸಿದೆ. 1932 ರ ಮಾರ್ಚ್​ 10ರಂದು ಕರ್ನಾಟಕದ ಉಡುಪಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಜನಿಸಿದ ಪ್ರೊಫೆಸರ್ ರಾವ್ ಕಾಸ್ಮಿಕ್-ರೇ ಭೌತಶಾಸ್ತ್ರಜ್ಞರಾಗಿ ಹಾಗೂ ಡಾ. ವಿಕ್ರಮ್ ಸಾರಾಭಾಯ್ ಅವರ ಸಹಾಯಕರಾಗಿ ವೃತ್ತಿಜೀವನ ಪ್ರಾರಂಭಿಸಿದರು. ಡಾಕ್ಟರೇಟ್ ಮುಗಿಸಿದ ನಂತರ, ಯುಎಸ್​ಗೆ ತೆರಳಿ ಅಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು.

 

1966 ರಲ್ಲಿ ಭಾರತಕ್ಕೆ ಮರಳಿದ ಪ್ರೊ.ರಾವ್ 1972 ರಲ್ಲಿ ದೇಶದ ಉಪಗ್ರಹ ಕಾರ್ಯಕ್ರಮವನ್ನು ಕೈಗೊಳ್ಳುವ ಮೊದಲು ಬಾಹ್ಯಾಕಾಶ ವಿಜ್ಞಾನಕ್ಕಾಗಿ ಭಾರತದ ಪ್ರಮುಖ ಸಂಸ್ಥೆಯಾದ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿಯಲ್ಲಿ ಉನ್ನತ ಶಕ್ತಿಯ ಖಗೋಳವಿಜ್ಞಾನ ಕಾರ್ಯಕ್ರಮವನ್ನು ಪ್ರಾರಂಭಿಸಿದರು. 1984 ರಿಂದ 1994 ರವರೆಗೆ ಪ್ರೊ.ರಾವ್ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪ್ರೊ.ರಾವ್ 2013 ರಲ್ಲಿ ಸ್ಯಾಟಲೈಟ್ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಯಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ, ಯು.ಆರ್.ರಾವ್ 2017 ರಲ್ಲಿ ನಿಧನರಾದರು.

ಗೂಗಲ್​​ ರಚಿಸಿರುವ ವಿಶೇಷ ಡೂಡಲ್​ಗೆ ಅಪಾರ ಮೆಚ್ಚುಗೆಯಾಗಿದ್ದು, ಅನೇಕರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಹಂಚಿಕೊಂಡಿದ್ದಾರೆ. ಜೊತೆಗೆ, ಉಡುಪಿ ಮೂಲದವರಾದ ಪ್ರೊ.ರಾವ್​ ಅವರ ಜನ್ಮದಿನಾಚರಣೆಯನ್ನು ಗೂಗಲ್​ನಂತಹ ದೈತ್ಯ ಸಂಸ್ಥೆ ಸ್ಮರಿಸಿಕೊಂಡಿರುವುದು ಸಹಜವಾಗಿಯೇ ಕನ್ನಡಿಗರಿಗೆ ಖುಷಿ ತರಿಸಿದೆ.

ಇದನ್ನೂ ಓದಿ:
ಇಂಧನ ಬೆಲೆ ಏರಿಕೆ ಬಗ್ಗೆ ಅಮೂಲ್ ಡೂಡಲ್, ನೆಟ್ಟಿಗರ ಶ್ಲಾಘನೆ

ಮಾಧ್ಯಮ ಸಂಸ್ಥೆಗಳು ಮತ್ತು ಡಿಜಿಟಲ್​ ವೇದಿಕೆಗಳು ಪ್ರಕಟಿಸುವ ಸುದ್ದಿಗೆ ಗೂಗಲ್​ ಹಾಗೂ ಫೇಸ್​ಬುಕ್​ ಹಣ ಪಾವತಿಸಬೇಕು!