ಮಾಧ್ಯಮ ಸಂಸ್ಥೆಗಳು ಮತ್ತು ಡಿಜಿಟಲ್ ವೇದಿಕೆಗಳು ಪ್ರಕಟಿಸುವ ಸುದ್ದಿಗೆ ಗೂಗಲ್ ಹಾಗೂ ಫೇಸ್ಬುಕ್ ಹಣ ಪಾವತಿಸಬೇಕು!
Australia Passes Law on Google and Facebook: ಈ ನಿಯಮದ ಮೂಲಕ ಮಾಧ್ಯಮಗಳು ನೀಡುವ ಸುದ್ದಿಗೆ ಫೇಸ್ಬುಕ್ ಮತ್ತು ಗೂಗಲ್ನಿಂದ ಸೂಕ್ತ ಮೊತ್ತದ ಗೌರವ ಧನ ಸಂದಾಯವಾಗಲಿದೆ. ಇದರಿಂದಾಗಿ ಮಾಧ್ಯಮಗಳಿಗೆ ಜನಪರ ಪತ್ರಿಕೋದ್ಯಮ ನಡೆಸಲು, ಜನರ ಹಿತಾಸಕ್ತಿಯನ್ನು ಕಾಪಾಡಲು ಬಲ ಸಿಗಲಿದೆ.
ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳೊಂದಿಗೆ ಜಿದ್ದಾಜಿದ್ದಿಗೆ ಬಿದ್ದಿರುವ ಆಸ್ಟ್ರೇಲಿಯಾ ಸರ್ಕಾರ ಇಂದು ಹೊಸ ನಿಯಮಕ್ಕೆ ಅಧಿಕೃತವಾಗಿ ಅನುಮೋದನೆ ನೀಡಿದೆ. ಈ ನಿಯಮಾವಳಿಯ ಪ್ರಕಾರ ಗೂಗಲ್ (Alphabet Inc’s Google) ಮತ್ತು ಫೇಸ್ಬುಕ್ (Facebook Inc) ಸಂಸ್ಥೆಗಳು ತಮ್ಮ ಮೂಲಕ ಜನರಿಗೆ ಸುದ್ದಿ ತಲುಪಿಸುವ ಮಾಧ್ಯಮ ಸಂಸ್ಥೆಗಳು ಮತ್ತು ಡಿಜಿಟಲ್ ವೇದಿಕೆಗಳಿಗೆ ನಿರ್ದಿಷ್ಟ ಮೊತ್ತದ ಹಣ ಪಾವತಿಸಬೇಕಾಗಿದೆ. ಈ ನಿಯಮವನ್ನು ಜಾರಿಗೊಳಿಸಿದ ಒಂದು ವರ್ಷದಲ್ಲಿ ಮರುಪರಿಶೀಲನೆಗೆ ಒಳಪಡಿಸಲಾಗುವುದು ಎಂದು ಆಸ್ಟ್ರೇಲಿಯಾದ ಹಣಕಾಸು ಸಚಿವ ಜೋಶ್ ಫ್ರೈಡನ್ಬರ್ಗ್ ಮತ್ತು ಸಂವಹನ ಸಚಿವ ಪಾಲ್ ಫ್ಲೆಚ್ಚರ್ ಜಂಟಿ ಹೇಳಿಕೆ ನೀಡಿದ್ದಾರೆ.
ಈ ನಿಯಮದ ಮೂಲಕ ಮಾಧ್ಯಮಗಳು ನೀಡುವ ಸುದ್ದಿಗೆ ಸೂಕ್ತ ಮೊತ್ತದ ಗೌರವ ಧನ ಸಂದಾಯವಾಗಲಿದೆ. ಇದರಿಂದಾಗಿ ಮಾಧ್ಯಮಗಳಿಗೆ ಜನಪರ ಪತ್ರಿಕೋದ್ಯಮ ನಡೆಸಲು, ಜನರ ಹಿತಾಸಕ್ತಿಯನ್ನು ಕಾಪಾಡಲು ಬಲ ಸಿಗಲಿದೆ ಎಂದು ತಿಳಿಸಿದ್ದಾರೆ. ಈ ನಿಯಮಾವಳಿಯನ್ನು ರೂಪಿಸಲು ಆಸ್ಟ್ರೇಲಿಯಾ ಸರ್ಕಾರದ Anti Trust Regulator ಕಳೆದ ಮೂರು ವರ್ಷಗಳಿಂದ ಸುದೀರ್ಘ ಚಿಂತನೆ ನಡೆಸಿತ್ತಲ್ಲದೇ ಸಾರ್ವಜನಿಕರ ಅಭಿಪ್ರಾಯವನ್ನೂ ಸಂಗ್ರಹಿಸುತ್ತಾ ಬಂದಿತ್ತು. ಪರಿಣಾಮವಾಗಿ ಈಗ ನಿಯಮಾವಳಿ ರೂಪುಗೊಂಡಿದ್ದು, ಇದು ಬ್ರಿಟನ್ ಮತ್ತು ಕೆನಡಾ ದೇಶಗಳಿಗೆ ಇದೇ ತೆರನಾದ ಕಾನೂನು ರೂಪಿಸಲು ಪ್ರೋತ್ಸಾಹ ನೀಡಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಕೆಲ ದೇಶಗಳು ರೂಪಿಸಿರುವ ಕಾನೂನು ಮಾಧ್ಯಮ ಸಂಸ್ಥೆಗಳಿಗೆ ಹೆಚ್ಚಿನ ಜನರು ಬರಲು ನೆರವಾಗುವಂತಹ ಲಿಂಕ್ ಪ್ರಕಟಿಸಲು ಪಡೆಯುವ ಪರವಾನಗಿ ಶುಲ್ಕ, ಜಾಹೀರಾತು ಮೊತ್ತ ಹಾಗೂ ಮತ್ತಿತರ ರೀತಿಯ ಆದಾಯ ಸಂಗ್ರಹಣೆಗೆ ಸಹಾಯವಾಗುವ ವಿಚಾರದಲ್ಲಿ ಗೂಗಲ್, ಫೇಸ್ಬುಕ್ನಂತಹ ಸಂಸ್ಥೆಗಳೇ ಮಾಧ್ಯಮಗಳೊಂದಿಗೆ ಮಾತುಕತೆಗೆ ಇಳಿಯಲು ಪ್ರೇರೇಪಿಸುತ್ತಿವೆ. ಸದ್ಯ ತಂತ್ರಜ್ಞಾನ ಸಂಸ್ಥೆಗಳು ಮಾಧ್ಯಮಗಳೊಂದಿಗಿನ ಮಾತುಕತೆಯಲ್ಲಿ ವಿಫಲವಾದರೆ ಅನಿವಾರ್ಯವಾಗಿ ಹಣ ಪಾವತಿಸಲೇಬೇಕಾದ ರೀತಿಯ ಕಾನೂನು ಜಾರಿಗೊಳಿಸಿರುವ ವಿಚಾರದಲ್ಲಿ ಆಸ್ಟ್ರೇಲಿಯಾ ದೇಶವೇ ಮೊದಲಾಗಿದೆ.
ಈ ಬಗ್ಗೆ ಮಾತನಾಡಿರುವ ಆಸ್ಟ್ರೇಲಿಯಾದ ಹಣಕಾಸು ಸಚಿವ ಜೋಶ್ ಫ್ರೈಡನ್ಬರ್ಗ್ ಮತ್ತು ಸಂವಹನ ಸಚಿವ ಪಾಲ್ ಫ್ಲೆಚ್ಚರ್ ಪ್ರಸ್ತುತ ಬೆಳವಣಿಗೆಯಲ್ಲಿ ಗೂಗಲ್ ಹಾಗೂ ಫೇಸ್ಬುಕ್ ಮಾಧ್ಯಮ ಸಂಸ್ಥೆಗಳೊಂದಿಗೆ ಮಾತುಕತೆಗೆ ಈಗಾಗಲೇ ಇಳಿದಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಬಣ್ಣಿಸಿದ್ದಾರೆ. ಕಳೆದ ವಾರ ಆಸ್ಟ್ರೇಲಿಯಾ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದ ಫೇಸ್ಬುಕ್ ಸರ್ಕಾರದ ಅಕೌಂಟ್ಗಳಿಗೇ ತಡೆ ನೀಡಿದ್ದ ಬೆನ್ನಲ್ಲೇ ಈ ಬೆಳವಣಿಗೆಗಳು ನಡೆದಿವೆ.
ಇದನ್ನೂ ಓದಿ: ಭಾರತಕ್ಕೂ ಕಾಲಿಡಲಿದೆಯಾ ಆಸ್ಟ್ರೇಲಿಯಾದಲ್ಲಿ ಶುರುವಾದ ಸರ್ಕಾರ-ಫೇಸ್ಬುಕ್ ಆದಾಯ ಹಂಚಿಕೆ ವಿವಾದ?