WTC 2025 final: ಗೆಲುವಿನ ಶತಕ ಸಿಡಿಸಿ ಆಸೀಸ್ ಬೌಲರ್ಗಳ ಅಹಂ ಮುರಿದ ಐಡೆನ್ ಮಾರ್ಕ್ರಾಮ್
Aiden Markram Century: ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ, ಆಸ್ಟ್ರೇಲಿಯಾ ನಿಗದಿಪಡಿಸಿದ 282 ರನ್‌ಗಳ ಗುರಿಯನ್ನು ಬೆನ್ನಟ್ಟುತ್ತಿರುವ ದಕ್ಷಿಣ ಆಫ್ರಿಕಾ ತಂಡದ ಪರ ಆರಂಭಿಕ ಐಡೆನ್ ಮಾರ್ಕ್ರಾಮ್ ಗೆಲುವಿನ ಶತಕ ಸಿಡಿಸಿ ಮಿಂಚಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಸೊನ್ನೆಗೆ ಔಟ್ ಆಗಿದ್ದ ಮಾರ್ಕ್ರಾಮ್, ಎರಡನೇ ಇನ್ನಿಂಗ್ಸ್‌ನಲ್ಲಿ 156 ಎಸೆತಗಳಲ್ಲಿ ಶತಕ ಸಿಡಿಸಿ ತಮ್ಮ ತಂಡವನ್ನು ಗೆಲುವಿನ ಹಾದಿಗೆ ಕೊಂಡೊಯ್ದಿದ್ದಾರೆ.

ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ (South Africa vs Australia) ನಡುವೆ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (WTC Final 2025) ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿರುವ 282 ರನ್‌ಗಳ ಗುರಿ ಬೆನ್ನಟ್ಟಿರುವ ದಕ್ಷಿಣ ಆಫ್ರಿಕಾ ಪರ ಆರಂಭಿಕ ಆಟಗಾರ ಐಡೆನ್ ಮಾರ್ಕ್ರಾಮ್ (Aiden Markram) ಅಮೋಘ ಶತಕ ಸಿಡಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗದೆ ಇನ್ನಿಂಗ್ಸ್ನ ಮೊದಲ ಓವರ್ನಲ್ಲೇ ಸೊನ್ನೆಗೆ ಔಟಾಗಿದ್ದ ಮಾರ್ಕ್ರಾಮ್, ಎರಡನೇ ಇನ್ನಿಂಗ್ಸ್‌ನಲ್ಲಿ ಜವಾಬ್ದಾರಿಯುವ ಬ್ಯಾಟಿಂಗ್ ಮಾಡಿ ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಮಾರ್ಕ್ರಾಮ್ ಅವರ ಈ ಶತಕದ ಇನ್ನಿಂಗ್ಸ್ನಿಂದಾಗಿ 200 ರನ್‌ಗಳ ಗಡಿ ದಾಟಿರುವ ಆಫ್ರಿಕಾ ಚಾಂಪಿಯನ್ ಪಟ್ಟಕ್ಕೇರುವ ಸಮೀಪದಲ್ಲಿದೆ.
8 ನೇ ಶತಕ ಬಾರಿಸಿದ ಮಾರ್ಕ್ರಾಮ್
ತಮ್ಮ ವೃತ್ತಿಜೀವನದ 8 ನೇ ಶತಕ ಬಾರಿಸಿದ ಮಾರ್ಕ್ರಾಮ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಇತಿಹಾಸದಲ್ಲಿ ಶತಕ ಗಳಿಸಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು, ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ಈ ಸಾಧನೆ ಮಾಡಿದ್ದರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು 2023 ರ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಭಾರತದ ವಿರುದ್ಧ ಶತಕ ಬಾರಿಸಿದ್ದರು.
ಮಾರ್ಕ್ರಾಮ್, ಬವುಮಾ ಶತಕದ ಜೊತೆಯಾಟ
ಆಸ್ಟ್ರೇಲಿಯಾ ನೀಡಿದ 282 ರನ್‌ಗಳ ಗುರಿ ಬೆನ್ನಟ್ಟಿದ ಆಫ್ರಿಕಾಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ರಯಾನ್ ರಿಕಲ್ಟನ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲ್ಲು ಸಾಧ್ಯವಾಗದೆ ಕೇವಲ ಮೂರನೇ ಓವರ್‌ನಲ್ಲಿ ಪೆವಿಲಿಯನ್ ಸೇರಿಕೊಂಡರು. ಇದಾದ ನಂತರ ಜೊತೆಯಾದ ಮಾರ್ಕ್ರಾಮ್ ಹಾಗೂ ವಿಯಾನ್ ಮುಲ್ಡರ್ ಅರ್ಧಶತಕದ ಜೊತೆಯಾಟವನ್ನಾಡಿ ತಂಡವನ್ನು ಸಂಕಷ್ಟದಿಂದ ಹೊರತಂದರು. ವಿಯಾನ್ ಮುಲ್ಡರ್ ಅವರ ಇನ್ನಿಂಗ್ಸ್ 27 ರನ್ ಗಳಿಗೆ ಅಂತ್ಯವಾಯಿತು. ಆ ಬಳಿಕ ಜತೆಯಾದ ಐಡೆನ್ ಮಾರ್ಕ್ರಾಮ್ ಹಾಗೂ ಟೆಂಬಾ ಬವುಮಾ ಶತಕದ ಪಾಲುದಾರಿಕೆಯನ್ನು ಮಾಡಿ ತಂಡವನ್ನು 200 ರನ್‌ಗಳ ಗಡಿ ದಾಟಿಸಿದರು.
WTC 2025 final: 6 ವರ್ಷಗಳ ನಂತರ ಆಗಸ ನೋಡಿದ ಮಿಚೆಲ್ ಸ್ಟಾರ್ಕ್ ಬ್ಯಾಟ್
ಗೆಲುವಿಗೆ 69 ರನ್ ಬೇಕು
ವಾಸ್ತವವಾಗಿ ಡಬ್ಲ್ಯುಟಿಸಿ ಫೈನಲ್‌ನ ಮೊದಲ ಮತ್ತು ಎರಡನೇ ದಿನದಂದು ರನ್ಗಾಗಿ ಬ್ಯಾಟ್ಸ್‌ಮನ್‌ಗಳು ಪರದಾಡಿದರೆ, ಮೂರನೇ ದಿನದಂದು ಬೌಲರ್‌ಗಳು ವಿಕೆಟ್ಗಾಗಿ ಕಷ್ಟಪಡಬೇಕಾಯಿತು. ಇದರ ಲಾಭ ಪಡೆದ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ನೀಡಿರುವ 282 ರನ್‌ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟುವ ಸೂಚನೆ ನೀಡಿದೆ. ಐಡೆನ್ ಮಾರ್ಕ್ರಾಮ್ ಅವರ ಶತಕ ಮತ್ತು ಟೆಂಬಾ ಬವುಮಾ ಅವರ ಅರ್ಧಶತಕದ ಆಧಾರದ ಮೇಲೆ, ದಕ್ಷಿಣ ಆಫ್ರಿಕಾ ಮೂರನೇ ದಿನದಾಟದಲ್ಲಿ ಎರಡು ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿದೆ. ದಿನದಾಟದಂತ್ಯಕ್ಕೆ ಮಾರ್ಕ್ರಾಮ್ 102 ಮತ್ತು ಬವುಮಾ 65 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದಾರೆ. ಈಗ ಆಫ್ರಿಕಾ ತಂಡಕ್ಕೆ ಗೆಲ್ಲಲು ಕೇವಲ 69 ರನ್‌ಗಳ ಅಗತ್ಯವಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:32 pm, Fri, 13 June 25
