- Kannada News Photo gallery Cricket photos WTC 2025 final Mitchell Starc smashes half century after 6 years
WTC 2025 final: 6 ವರ್ಷಗಳ ನಂತರ ಆಗಸ ನೋಡಿದ ಮಿಚೆಲ್ ಸ್ಟಾರ್ಕ್ ಬ್ಯಾಟ್
WTC 2025 final: ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ 282 ರನ್‌ಗಳ ಗುರಿಯನ್ನು ದಕ್ಷಿಣ ಆಫ್ರಿಕಾಕ್ಕೆ ನೀಡಿದೆ. ಮಿಚೆಲ್ ಸ್ಟಾರ್ಕ್ ಅವರ ಅದ್ಭುತ ಅರ್ಧಶತಕದಿಂದ ಆಸ್ಟ್ರೇಲಿಯಾ ಉತ್ತಮ ಮೊತ್ತಕ್ಕೆ ತಲುಪಿತು. ಕಡಿಮೆ ಸ್ಕೋರ್‌ನಲ್ಲಿ ಸಿಲುಕಿದ್ದ ಆಸ್ಟ್ರೇಲಿಯಾದ ಇನ್ನಿಂಗ್ಸ್ಗೆ ಸ್ಟಾರ್ಕ್ ಜೀವ ತುಂಬಿದರು. ಸ್ಟಾರ್ಕ್ 6 ವರ್ಷಗಳ ನಂತರ ಅರ್ಧಶತಕ ಸಿಡಿಸಿದ್ದು ವಿಶೇಷ.
Updated on: Jun 13, 2025 | 9:32 PM

ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮುಗಿಯುವ ಹಂತಕ್ಕೆ ಬಂದಿದೆ. ಆಸ್ಟ್ರೇಲಿಯಾ ನೀಡಿರುವ 282 ರನ್‌ಗಳ ಗುರಿ ಬೆನ್ನಟ್ಟಿರುವ ದಕ್ಷಿಣ ಆಫ್ರಿಕಾ ಪ್ರಸ್ತುತ ಗೆಲುವಿನ ಫೇವರೇಟ್ ಅನಿಸಿಕೊಂಡಿದೆ. ವಾಸ್ತವವಾಗಿ ಆಸ್ಟ್ರೇಲಿಯಾ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಹೇಳಿಕೊಳ್ಳುವಂತಹ ಬ್ಯಾಟಿಂಗ್ ಮಾಡಲಿಲ್ಲ. ಹೀಗಾಗಿಯೇ ತಂಡ ಅಲ್ಪ ರನ್‌ಗಳಿಗೆ ಆಲೌಟ್ ಆಗಬೇಕಾಯಿತು.

ಒಂದು ಹಂತದಲ್ಲಿ ಆಸ್ಟ್ರೇಲಿಯಾ ಎರಡಂಕಿಗೆ ಎರಡನೇ ಇನ್ನಿಂಗ್ಸ್ ಮುಗಿಸುವ ಲಕ್ಷಣಗಳಿದ್ದವು. ಆದರೆ ಕೆಳಕ್ರಮಾಂಕದಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ ಮಿಚೆಲ್ ಸ್ಟಾರ್ಕ್ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು 280 ರನ್‌ಗಳ ಗಡಿ ದಾಟಿಸಿದರು. ಒಂದು ವೇಳೆ ಸ್ಟಾರ್ಕ್ ಕೂಡ ಬೇಗ ಔಟಾಗಿದ್ದರೆ, ಆಸ್ಟ್ರೇಲಿಯಾ ಅಲ್ಪ ಮೊತ್ತಕ್ಕೆ ಆಲೌಟ್ ಆಗುತ್ತಿತ್ತು.

ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ತಮ್ಮ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಸ್ಟಾರ್ಕ್, ಎರಡನೇ ಇನ್ನಿಂಗ್ಸ್‌ನಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಕಮಾಲ್ ಮಾಡಿದರು. ಹಾಗೆಯೇ ಬಾಲಂಗೋಚಿಗಳೊಂದಿಗೆ ಒಳ್ಳೆಯ ಜೊತೆಯಾಟವನ್ನಾಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಕೇವಲ 73 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡಿದ್ದಾಗ, 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಸ್ಟಾರ್ಕ್ 136 ಎಸೆತಗಳಲ್ಲಿ 58 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಸ್ಟಾರ್ಕ್ ಅರ್ಧಶತಕದ ಆಧಾರದ ಮೇಲೆ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 207 ರನ್ ಬಾರಿಸಿ ದಕ್ಷಿಣ ಆಫ್ರಿಕಾಕ್ಕೆ 282 ರನ್‌ಗಳ ಕಠಿಣ ಗುರಿ ನೀಡಿತು.

ವಿಶೇಷವೆಂದರೆ ಸ್ಟಾರ್ಕ್ 6 ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಅರ್ಧಶತಕ ಬಾರಿಸಿದರು. ಇದಕ್ಕೂ ಮೊದಲು, ಅವರು 2019 ರಲ್ಲಿ ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಅರ್ಧಶತಕ ಸಿಡಿಸಿದ್ದರು. ಈ ರೀತಿಯಾಗಿ, 45 ಟೆಸ್ಟ್‌ಗಳಲ್ಲಿ 61 ಇನ್ನಿಂಗ್ಸ್‌ಗಳ ನಂತರ ಸ್ಟಾರ್ಕ್ ತಮ್ಮ ವೃತ್ತಿಜೀವನದ 11 ನೇ ಅರ್ಧಶತಕ ಪೂರ್ಣಗೊಳಿಸಿದರು.

ಈ ಇನ್ನಿಂಗ್ಸ್ ಸ್ಟಾರ್ಕ್‌ಗೆ ಇನ್ನಷ್ಟು ವಿಶೇಷವಾಗಿತ್ತು ಏಕೆಂದರೆ ಅವರು ತಮ್ಮ ಪತ್ನಿ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡದ ನಾಯಕಿ ಅಲಿಸಾ ಹೀಲಿ ಅವರ ಸಮ್ಮುಖದಲ್ಲಿ ಈ ಅರ್ಧಶತಕ ದಾಖಲಿಸಿದರು. ಸ್ಟಾರ್ಕ್ ಬಾರಿಸಿದ 58 ರನ್‌ಗಳು ಆಸ್ಟ್ರೇಲಿಯಾ ಪರ ದಾಖಲಾದ ಅತ್ಯಧಿಕ ಸ್ಕೋರ್ ಆಗಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಟಾರ್ಕ್ ಹೊರತುಪಡಿಸಿ, ಅಲೆಕ್ಸ್ ಕ್ಯಾರಿ 44 ರನ್‌ಗಳ ಕಾಣಿಕೆ ನೀಡಿದರು.









