- TV9 Kannada Kannada News Photos Cricket Photos WTC Final: Aiden Markram Create History For South Africa
ಭರ್ಜರಿ ಸೆಂಚುರಿಯೊಂದಿಗೆ ಹೊಸ ಇತಿಹಾಸ ರಚಿಸಿದ ಐಡೆನ್ ಮಾರ್ಕ್ರಾಮ್
Aiden Markram Record: ಲಾರ್ಡ್ಸ್ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡದ ಆರಂಭಿಕ ದಾಂಡಿಗ ಐಡೆನ್ ಮಾರ್ಕ್ರಾಮ್ 158 ಎಸೆತಗಳಲ್ಲಿ ಅಜೇಯ 102 ರನ್ ಬಾರಿಸಿದ್ದಾರೆ. ಈ ಭರ್ಜರಿ ಸೆಂಚುರಿಯೊಂದಿಗೆ ಮಾರ್ಕ್ರಾಮ್ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
Updated on: Jun 14, 2025 | 8:04 AM

ಸೌತ್ ಆಫ್ರಿಕಾ ತಂಡವು ಐಸಿಸಿ ಟೂರ್ನಿಯಲ್ಲಿ ಫೈನಲ್ ಆಡಿರುವುದು ಕೇವಲ ಮೂರು ಬಾರಿ. ಕಳೆದ ಎರಡು ಬಾರಿಯ ಫೈನಲ್ ಫೈಟ್ನಲ್ಲಿ ಸಾಧ್ಯವಾಗದ ಸಾಧನೆಯನ್ನು ಈ ಬಾರಿ ಐಡೆನ್ ಮಾರ್ಕ್ರಾಮ್ ಮಾಡಿದ್ದಾರೆ. ಆದು ಕೂಡ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ ಎಂಬುದು ವಿಶೇಷ.

ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಐಡೆನ್ ಮಾರ್ಕ್ರಾಮ್ ಆಕರ್ಷಕ ಶತಕ ಸಿಡಿಸಿದ್ದಾರೆ. ಈ ಶತಕದೊಂದಿಗೆ ಐಸಿಸಿ ಟೂರ್ನಿಯ ಫೈನಲ್ನಲ್ಲಿ ಸೆಂಚುರಿ ಸಿಡಿಸಿದ ಸೌತ್ ಆಫ್ರಿಕಾದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ 1998 ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸೌತ್ ಆಫ್ರಿಕಾದ ಮಾಜಿ ನಾಯಕ ಹ್ಯಾನ್ಸಿ ಕ್ರೋನಿಯೆ ಅಜೇಯ 61 ರನ್ ಬಾರಿಸಿದ್ದು ಶ್ರೇಷ್ಠ ಸಾಧನೆಯಾಗಿತ್ತು. ಇದಾದ ಬಳಿಕ 2024ರ ಟಿ20 ವಿಶ್ವಕಪ್ ಫೈನಲ್ನಲ್ಲಿ ಹೆನ್ರಿಕ್ ಕ್ಲಾಸೆನ್ 52 ರನ್ ಬಾರಿಸಿದ್ದರು.

ಇದೀಗ ಐಸಿಸಿ ಫೈನಲ್ ಪಂದ್ಯದಲ್ಲಿ ಮೂರಂಕಿ ಮೊತ್ತ ಕಲೆಹಾಕುವ ಮೂಲಕ ಐಡೆನ್ ಮಾರ್ಕ್ರಾಮ್ ಹೊಸ ಇತಿಹಾಸ ರಚಿಸಿದ್ದಾರೆ. ಅಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ನಾಲ್ಕನೇ ಇನಿಂಗ್ಸ್ನಲ್ಲಿ ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ಸಹ ಮಾರ್ಕ್ರಾಮ್ ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್ನಲ್ಲಿ 212 ರನ್ ಕಲೆಹಾಕಿದರೆ, ಸೌತ್ ಆಫ್ರಿಕಾ ತಂಡವು 138 ರನ್ಗಳಿಸಿ ಆಲೌಟ್ ಆಗಿತ್ತು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡವು 207 ರನ್ಗಳಿಸಿ ಆಲೌಟ್ ಆಗಿದೆ. ಅತ್ತ ಮೊದಲ ಇನಿಂಗ್ಸ್ನಲ್ಲಿನ 74 ರನ್ಗಳ ಹಿನ್ನಡೆಯೊಂದಿಗೆ ಸೌತ್ ಆಫ್ರಿಕಾ ತಂಡವು ಕೊನೆಯ ಇನಿಂಗ್ಸ್ನಲ್ಲಿ 282 ರನ್ ಗುರಿ ಪಡೆದಿದ್ದು, ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 213 ರನ್ ಕಲೆಹಾಕಿದೆ. ಇನ್ನು 69 ರನ್ಗಳಿಸಿ ಸೌತ್ ಆಫ್ರಿಕಾ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಲಿದೆ.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More



