ಬೆಂಗಳೂರು: ಅರಣ್ಯ ಪ್ರದೇಶಗಳಲ್ಲಿ ಹಣ್ಣಿನ ಮರಗಳನ್ನು ಬೆಳೆಸಲು ಕ್ರಮ ತೆಗೆದುಕೊಳ್ಳಿ. ಇದರಿಂದ ಪ್ರಾಣಿ-ಪಕ್ಷಿಗಳಿಗೆ ಆಹಾರವನ್ನು ಒದಗಿಸುವುದರ ಜೊತೆ ಅರಣ್ಯ ಪ್ರದೇಶದ ಹೆಚ್ಚಳ ಆಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಇಂದು ಬೆಂಗಳೂರಿನ ಅರಣ್ಯ ಭವನದಲ್ಲಿ ಎಲ್ಲಾ ವೃತ್ತಗಳ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಪ್ರಾದೇಶಿಕ ವನ್ಯಜೀವಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಯಡಿಯೂರಪ್ಪ ಮಾತನಾಡಿದರು.
ಅರಣ್ಯ ಅಭಿವೃದ್ಧಿಗೆ ಅರಣ್ಯವಾಸಿಗಳ ಮತ್ತು ರೈತರ ಸಹಕಾರ ಬಹಳ ಮುಖ್ಯ. ಅವರೊಂದಿಗೆ ಸೌಹಾರ್ದಯುತ ಸಂಬಂಧ ಬೆಳೆಸಿಕೊಳ್ಳುವುದು ಅರಣ್ಯ ಅಧಿಕಾರಿಗಳ ಕರ್ತವ್ಯ ಎಂದು ಮುಖ್ಯಮಂತ್ರಿಗಳು ಕಿವಿಮಾತು ಹೇಳಿದರು.
ರಾಜ್ಯದಲ್ಲಿ ಹಸಿರು ವಲಯ ಹೆಚ್ಚಳ ಮಾಡಬೇಕಿದೆ. ಈಗ ರಾಜ್ಯದಲ್ಲಿ ಹಸಿರುವಲಯ ಶೇ 22.8ರಷ್ಟಿದೆ. ಅದನ್ನು ಶೇ 33 ರಷ್ಟು ಹೆಚ್ಚಿಸಬೇಕು. ಅದಕ್ಕೆ ಅಗತ್ಯವಾದ ಎಲ್ಲಾ ರೀತಿಯ ನೆರವನ್ನು ಒದಗಿಸುವುದಾಗಿ ಅವರು ತಿಳಿಸಿದರು. ಬೇಸಿಗೆ ಸಮೀಪಿಸುತ್ತಿದೆ, ಕಾಡ್ಗಿಚ್ಚು ಹಬ್ಬಬಹುದು, ಅದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಿ, ಅರಣ್ಯ ಅಭಿವೃದ್ಧಿಗೆ ಬೇಕಾದ ಅನುದಾನವನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಿಲ್ಲಬೇಕು
ಕಾರ್ಯಾಗಾರದಲ್ಲಿ ಮಾತನಾಡಿದ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಕಟ್ಟುನಿಟ್ಟಾಗಿ ತಡೆಯಬೇಕು. ಅರಣ್ಯ ಪ್ರದೇಶಗಳಲ್ಲಿ ಗಣಿಗಾರಿಕೆಗೆ ಅನುಮತಿ ನೀಡಬಾರದು, ಗಣಿಗಾರಿಕೆಯಿಂದ ಪ್ರಾಣಿಗಳ ಆಹಾರ ಪದ್ಧತಿ ಬದಲಾಗಿದೆ, ಹಾಗೂ ಆ ಶಬ್ದಗಳಿಂದ ಹೆದರಿ ಅವು ಸಮೀಪ ಇರುವ ನಗರ ಪಟ್ಟಣ ಪ್ರದೇಶಗಳಿಗೆ ನುಗ್ಗುತ್ತಿದೆ ಇದರಿಂದ, ಅನೇಕ ರೀತಿಯ ಆಪತ್ತುಗಳು ಉಂಟಾಗುತ್ತಿವೆ ಎಂದು ಅವರು ಹೇಳಿದರು.
ಮಾನವ ಮತ್ತು ಪ್ರಾಣಿಗಳ ಸಂಘರ್ಷದ ಬಗ್ಗೆ ಅರಣ್ಯ ಇಲಾಖೆ ಹೆಚ್ಚು ಗಮನ ಹರಿಸಿದೆ. ಕಾಡುಪ್ರಾಣಿಗಳಿಂದ ಮನುಷ್ಯರು ಸಾವಿಗೀಡಾದಾಗ ನೀಡಲಾಗುತ್ತಿರುವ ಪರಿಹಾರವನ್ನು ಹೆಚ್ಚು ಮಾಡಬೇಕು. ದೊಡ್ಡ ಪ್ರಾಣಿಗಳು ಮತ್ತು ಸಣ್ಣ ಪ್ರಾಣಿಗಳು ಸತ್ತಾಗ ನಾವು ₹ 5, ₹ 10 ಸಾವಿರ ರೂಪಾಯಿ ಪರಿಹಾರ ನೀಡುತ್ತಿದ್ದೇವೆ. ಇದನ್ನು ಹೆಚ್ಚಿಸಬೇಕಿದೆ ಎಂದು ಹೇಳಿದರು.
ಕೆಳಹಂತದ ಅರಣ್ಯ ಇಲಾಖೆಯ ನೌಕರರು ಅರಣ್ಯ ಸಂರಕ್ಷಣೆಗೆ ವಾಹನ ಬಳಸಬೇಕಾದ್ದು ಅನಿವಾರ್ಯ. ಆದರೆ ನಾವು ಅವರಿಗೆ ವಾಹನ ಬದಗಿಸಿಲ್ಲ, ಅವರದ್ದೇ ಸ್ವಂತ ದ್ವಿಚಕ್ರ ವಾಹನ ಬಳಸುತ್ತಿದ್ದಾರೆ. ನಾವು ಕನಿಷ್ಠ ಇಂಧನ ಭತ್ಯೆಯನ್ನಾದರೂ ಕೊಡಬೇಕಿದೆ ಎಂದು ಅವರು ತಿಳಿಸಿದರು. ಕಾಡುಪ್ರಾಣಿಗಳು, ವಿಶೇಷವಾಗಿ ಕಾಡಾನೆಗಳು ನಗರಕ್ಕೆ ಬಾರದಂತೆ ಬ್ಯಾರಿಕೇಡ್ ನಿರ್ಮಿಸಲು ಅನುಮತಿ ಕೋರಿ ನಿಯೋಗದೊಂದಿಗೆ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಅಧಿಕಾರಿಗಳು, ನೌಕರರ ವಿರುದ್ಧ ಅನಾಮಧೇಯ ದೂರು.. ಮುಖ್ಯಕಾರ್ಯದರ್ಶಿಗೆ ಪತ್ರ ಬರೆದ ಸಿಎಂ
Published On - 3:40 pm, Wed, 24 February 21