ತೀರ್ಥಯಾತ್ರೆಗೆ ಹೋಗುವ ಮುನ್ನ ಶ್ರೀಕೃಷ್ಣ ಪಾಂಡವರಿಗೆ ಹೇಳಿದ ಈ ವಿಚಾರವನ್ನು ತಪ್ಪದೇ ಓದಿ

ತೀರ್ಥಯಾತ್ರೆಗೆ ಹೋಗುವ ಮುನ್ನ ಶ್ರೀಕೃಷ್ಣ ಪಾಂಡವರಿಗೆ ಹೇಳಿದ ಈ ವಿಚಾರವನ್ನು ತಪ್ಪದೇ ಓದಿ
ಸಂಗ್ರಹ ಚಿತ್ರ

Krishna Sandesha: ಹೌದೇ? ಈ ಸೋರೆಕಾಯಿ ಇನ್ನೂ ಕಹಿಯಾಗಿಯೇ ಉಳಿದಿದೆಯೇ? ತೀರ್ಥಯಾತ್ರೆಗೆ ನಿಮ್ಮೊಂದಿಗೆ ಕಳುಹಿಸಿದ ನಂತರ ಎಲ್ಲಾ ತೀರ್ಥಕ್ಷೇತ್ರಗಳಿಗೂ ತೆರಳಿದರೂ ಇದು ಸಿಹಿಯಾಗಿಲ್ಲ ಎಂದಾದರೆ ಏನು ಉಪಯೋಗ? ಎಂದು ಶ್ರೀಕೃಷ್ಣ ಮುಗುಳ್ನಗುತ್ತಾನೆ.

Skanda

| Edited By: Rashmi Kallakatta

Feb 24, 2021 | 4:01 PM

ಭಾರತದಲ್ಲಿ ತೀರ್ಥಯಾತ್ರೆಗೆ ವಿಶೇಷ ಮಹತ್ವವಿದೆ. ಬದುಕಿನಲ್ಲಿ ಏನೇ ಸಾಧಿಸಿದರೂ, ಎಷ್ಟೇ ಉತ್ತುಂಗಕ್ಕೆ ಹೋದರೂ ಕೊನೆಗೆ ಆ ಜೀವನಕ್ಕೆ ಸಾರ್ಥಕತೆ ಸಿಗುವುದು ಪರಮಾತ್ಮನ ಚರಣಗಳಲ್ಲಿ ಎನ್ನುವ ನಂಬಿಕೆ ಭಾರತೀಯ ಪರಂಪರೆಯ ಜೊತೆಗೆ ತಳುಕು ಹಾಕಿಕೊಂಡು, ಶತಮಾನಗಳ ಬದಲಾವಣೆಗಳನ್ನೂ ದಾಟಿ ಸಾಗುತ್ತಲೇ ಬಂದಿದೆ. ಬಹುತೇಕ ಭಾರತೀಯರು ಇಂದಿಗೂ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡುವುದನ್ನು, ತೀರ್ಥಯಾತ್ರೆ ಮಾಡುವುದನ್ನು ಪುಣ್ಯ ಕಾರ್ಯದ ಭಾಗವಾಗಿಯೇ ಪರಿಗಣಿಸಿಕೊಂಡು ಬಂದಿದ್ದಾರೆ. ಭಾರತದ ಕನ್ಯಾಕುಮಾರಿಯಿಂದ ಕಾಶಿಯ ತನಕ ಹಾಗೂ ಅದರಾಚೆಗೂ ಇರುವ ಅಸಂಖ್ಯಾತ ಕ್ಷೇತ್ರಗಳಿಗೆ ಭೇಟಿ ನೀಡಿ ಪಾವನಾರಾದ ಭಾವ ಅನುಭವಿಸುತ್ತಾರೆ. ನಮ್ಮಲ್ಲಿ ಗಂಗಾ ಸ್ನಾನ, ತುಂಗಾ ಪಾನ ಎಂಬ ಮಾತಿದೆ. ಅಂದರೆ ಮನುಷ್ಯ ಎಂತಹದ್ದೇ ಪಾಪ ಮಾಡಿದ್ದರೂ ಅದನ್ನು ಗಂಗೆಯಲ್ಲಿ ಮಿಂದೇಳುವುದರಿಂದ ಹಾಗೂ ತುಂಗೆಯ ನೀರನ್ನು ಸೇವಿಸುವುದರಿಂದ ಕಳೆದುಕೊಳ್ಳಬಹುದು ಎಂದು ನಂಬಲಾಗಿದೆ. ಆದರೆ, ಈ ವಿಚಾರಗಳನ್ನು ಮೇಲ್ನೋಟಕ್ಕೆ ಅರಿತಿದ್ದರೂ ತೀರ್ಥಯಾತ್ರೆಯ ಬಹುಮುಖ್ಯ ಉದ್ದೇಶ ಅನೇಕರಿಗೆ ತಿಳಿದಿರುವುದಿಲ್ಲ.

ಈ ತೀರ್ಥಯಾತ್ರೆಗೆ ಸಂಬಂಧಿಸಿದಂತೆ ಪರಮಾತ್ಮ ಶ್ರೀಕೃಷ್ಣ ಪಾಂಡವರಿಗೆ ಒಂದಷ್ಟು ಮುಖ್ಯ ಸಂದೇಶಗಳನ್ನು ನೀಡಿದ್ದ ಎಂಬ ಪ್ರತೀತಿ ಇದೆ. ಈ ಸಂದೇಶಗಳ ಮೂಲಾರ್ಥವನ್ನು ಅರಿತು ತೀರ್ಥಯಾತ್ರೆ ಕೈಗೊಂಡರೆ ಅದರ ಉದ್ದೇಶ ಫಲಿಸುತ್ತದೆ ಎನ್ನುವುದು ಹಿರಿಯರ ಅಭಿಪ್ರಾಯ. ಹಾಗಾದರೆ ಶ್ರೀಕೃಷ್ಣ ಪಾಂಡವರಿಗೆ ನೀಡಿದ ಸಂದೇಶಗಳೇನು? ಅದರಲ್ಲಿ ಯಾವ ಯಾವ ಅಂಶಗಳನ್ನು ಪ್ರಸ್ತಾಪಿಸಲಾಗಿದೆ? ಇಂದಿಗೂ ಅದು ಮಹತ್ವ ಪಡೆದುಕೊಂಡಿರಲು ಕಾರಣವೇನು? ಎಂಬಿತ್ಯಾದಿ ವಿಚಾರಗಳನ್ನು ಇಲ್ಲಿ ನೀಡಲಾಗಿದೆ.

ಒಮ್ಮೆ ಪಾಂಡವೆರಲ್ಲರೂ ಒಟ್ಟಾಗಿ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡಲು ನಿಶ್ಚಯಿಸಿದರು. ತೀರ್ಥಯಾತ್ರೆ ಮಾಡಬೇಕು ಎಂಬ ಬಯಕೆ ಹುಟ್ಟಿದ ನಂತರ ತಮ್ಮ ಇಚ್ಛೆಯನ್ನು ಪರಮಾತ್ಮ ಶ್ರೀಕೃಷ್ಣನಲ್ಲಿ ನಿವೇದಿಸಿಕೊಂಡರು. ಅಲ್ಲದೇ, ಶ್ರೀಕೃಷ್ಣನಿಗೂ ತಮ್ಮೊಟ್ಟಿಗೆ ತೀರ್ಥಯಾತ್ರೆಗೆ ಬರುವಂತೆ ಕರೆ ನೀಡಿ, ಒತ್ತಾಯಿಸಿದರು. ಆಗ ಶ್ರೀಕೃಷ್ಣ ತನಗೆ ಅಗಾಧ ಕೆಲಸ ಕಾರ್ಯಗಳಿರುವುದಾಗಿಯೂ, ಅವುಗಳ ಒತ್ತಡದ ಕಾರಣವಾಗಿ ತೀರ್ಥಯಾತ್ರೆಗೆ ತೆರಳಲು ಸಮಯ ಇಲ್ಲವೆಂದೂ ತಿಳಿಸಿದನಂತೆ. ಆದರೆ, ತನ್ನ ಬದಲಾಗಿ ಸೋರೆಕಾಯಿಯೊಂದನ್ನು ನೀಡಿ ಎಲ್ಲಾ ತೀರ್ಥ ಕ್ಷೇತ್ರಗಳಿಗೂ ಅದನ್ನು ಕೊಂಡೊಯ್ಯುವಂತೆ ತಿಳಿಸಿದನು. ಶ್ರೀಕೃಷ್ಣನ ಅಣತಿಯನ್ನು ಸ್ವೀಕರಿಸಿದ ಪಾಂಡವರು ಸಂತೋಷದಿಂದ ಸೋರೆಕಾಯಿಯನ್ನು ಪಡೆದು ತೀರ್ಥಯಾತ್ರೆಗೆ ತೆರಳಿದರು.

ತೀರ್ಥಯಾತ್ರೆಯ ಭಾಗವಾಗಿ ಗಂಗೆ ಸೇರಿದಂತೆ ಎಲ್ಲಾ ಪವಿತ್ರ ನದಿಗಳಲ್ಲಿ ಹಾಗೂ ಸಾಗರಗಳಲ್ಲಿ ಮಿಂದೆದ್ದು, ಪುಣ್ಯಕ್ಷೇತ್ರಗಳಿಗೆ ತೆರಳಿ ದರ್ಶನ ಪಡೆದು, ಯಾತ್ರೆ ಪೂರೈಸಿ ಹಸ್ತಿನಾಪುರಕ್ಕೆ ಹಿಂದಿರುಗಿದರು. ಮರಳಿ ಬರುತ್ತಿದ್ದಂತೆಯೇ ಪರಮಾತ್ಮ ಶ್ರೀಕೃಷ್ಣನ ಪಾದಾರವಿಂದಗಳಿಗೆ ಭಕ್ತಿಯಿಂದ ನಮಸ್ಕರಿಸಿದ ಪಾಂಡವರು, ಸೋರೆಕಾಯಿಯನ್ನು ಕೃಷ್ಣನಿಗೆ ಹಿಂದಿರುಗಿಸಿದರು. ತೀರ್ಥಯಾತ್ರೆ ಮುಗಿಸಿಬಂದ ಪಾಂಡವರಿಗಾಗಿ ಶ್ರೀ ಕೃಷ್ಣ ಅಂದು ಮಧ್ಯಾಹ್ನವೇ ವಿಶೇಷ ಭೋಜನ ವ್ಯವಸ್ಥೆ ಆಯೋಜಿಸಿದ್ದ.

ಆ ಭೋಜನದಲ್ಲಿ ಪಾಂಡವರು ತೀರ್ಥಯಾತ್ರೆಗೆ ಕೊಂಡೊಯ್ದಿದ್ದ ಸೋರೆಕಾಯಿಯನ್ನು ಬಳಸಿ ಒಂದು ಖಾದ್ಯವನ್ನು ತಯಾರಿಸಲಾಗಿತ್ತು. ಅದನ್ನು ಪಾಂಡವರೆಲ್ಲರಿಗೂ ಬಡಿಸಲಾಯಿತು. ಆದರೆ, ಆ ಪದಾರ್ಥವನ್ನು ತಿನ್ನುವಾಗ ಪಾಂಡವರಿಗೆ ಕಹಿ ಎನಿಸಿದ ಕಾರಣ, ಇದೇನು ಶ್ರೀಕೃಷ್ಣ.. ಸೋರೆಕಾಯಿ ಕಹಿಯಾಗಿದೆಯಲ್ಲಾ ಎಂದು ಕೇಳಿದರು. ಪಾಂಡವರ ಈ ಪ್ರಶ್ನೆಗೆ ಪ್ರತ್ಯುತ್ತರಿಸಿದ ಶ್ರೀಕೃಷ್ಣ, ಹೌದೇ? ಈ ಸೋರೆಕಾಯಿ ಇನ್ನೂ ಕಹಿಯಾಗಿಯೇ ಉಳಿದಿದೆಯೇ? ತೀರ್ಥಯಾತ್ರೆಗೆ ನಿಮ್ಮೊಂದಿಗೆ ಕಳುಹಿಸಿದ ನಂತರ ಎಲ್ಲಾ ತೀರ್ಥಕ್ಷೇತ್ರಗಳಿಗೂ ತೆರಳಿದರೂ ಇದು ಸಿಹಿಯಾಗಿಲ್ಲ ಎಂದಾದರೆ ಏನು ಉಪಯೋಗ? ಎಂದು ಮುಗುಳ್ನಗುತ್ತಾನೆ. ಆಗ, ಶ್ರೀಕೃಷ್ಣನ ಮಾತಿನ ಅರ್ಥ ಪಾಂಡವರ ಮನಸ್ಸಿಗೆ ನಾಟುತ್ತದೆ. ಹೌದಲ್ಲವೇ.. ಎಷ್ಟು ತೀರ್ಥಯಾತ್ರೆಗೆ ಹೋಗಿ ಬಂದರೂ ಮನಸ್ಸಿನ ಕಲ್ಮಶ ತೊಳೆದು ಹೋಗಿಲ್ಲವೆಂದರೆ ಈ ಕಹಿ ಸೋರೆಕಾಯಿಗೂ ನಮಗೂ ಏನು ವ್ಯತ್ಯಾಸ? ಎಂದು ಜ್ಞಾನೋದಯವಾಗುತ್ತದೆ.

ಈ ಕಾರಣಕ್ಕಾಗಿಯೇ ನಮ್ಮ ಗುರು ಹಿರಿಯರು ದೇವರನ್ನು ಪ್ರಾರ್ಥಿಸುವಾಗ ಅರಿಷಡ್ವರ್ಗಗಳನ್ನು ತ್ಯಜಿಸಿ ಪ್ರಾರ್ಥನೆ ಮಾಡಿ ಎಂದು ಹೇಳುವುದು. ನಮ್ಮ ಮನಸ್ಸು ಅಶುದ್ಧವಾಗಿದ್ದರೆ ಎಷ್ಟೇ ದೇವರನ್ನು ನೆನೆದರೂ, ಎಷ್ಟೇ ದೇಗುಲಗಳನ್ನು ಸುತ್ತಿ ಬಂದರೂ ಅದರ ಫಲಿತಾಂಶವಾಗಲೀ, ಪರಿಣಾಮವಾಗಲೀ ನಮಗೆ ದಕ್ಕುವುದಿಲ್ಲ.

ಇದನ್ನೂ ಓದಿ: ವಿಷ್ಣುವನ್ನು ಹರಿ ಎಂದು ಏಕೆ ಕರೆಯುತ್ತಾರೆ? ಗುರುವಾರ ಪೂಜಿಸಲು ಇಲ್ಲಿವೆ ಕಾರಣಗಳು

Follow us on

Most Read Stories

Click on your DTH Provider to Add TV9 Kannada