ಮೈಸೂರು: ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಿಂದಾಗಿ ಕೇರಳ-ಮೈಸೂರು ಜಿಲ್ಲೆ ಗಡಿ ಭಾಗದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಬಾವಲಿ ಚೆಕ್ ಪೋಸ್ಟ್‌ನಲ್ಲಿ ಆರೋಗ್ಯ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕೇರಳದಿಂದ ಬರುವ ಎಲ್ಲ ಪ್ರಯಾಣಿಕರ ತಪಾಸಣೆ ಮಾಡಲಾಗುತ್ತಿದ್ದು, ಅಧಿಕಾರಿಗಳಿಂದ ಕೊವಿಡ್ ಟೆಸ್ಟ್ ವರದಿ ಪರಿಶೀಲನೆ ಮಾಡಲಾಗುತ್ತಿದೆ.
ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ಮಾಡಲಾಗುತ್ತಿದ್ದು, ಕೋವಿಡ್ ಟೆಸ್ಟ್ ಮಾಡಿಸಿರುವ ಬಗ್ಗೆಯೂ ತಪಾಸಣೆ ಮಾಡಲಾಗುತ್ತಿದೆ. ಮೈಸೂರಿಗೆ ಬಸ್ ಹಾಗೂ ವಿಮಾನದ ಮೂಲಕ ಆಗಮಿಸುವ ಪ್ರಯಾಣಿಕರನ್ನು ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದಾರೆ. ಕೇರಳದಿಂದ ಪ್ರತಿದಿನ ಒಂದು ವಿಮಾನ ಮೈಸೂರಿಗೆ ಹಾರಾಟ ನಡೆಸುತ್ತಿದೆ. ಪ್ರತಿದಿನ ಸರಾಸರಿ 55 ಪ್ರಯಾಣಿಕರು ವಿಮಾನದ ಮೂಲಕ ಆಗಮಿಸುತ್ತಿದ್ದಾರೆ. ಹೀಗಾಗಿ ಅವರುಗಳ ಮೇಲೆ ನಿಗ ಇಡಲಾಗುತ್ತಿದೆ.
ನಮ್ಮ ರಾಜ್ಯದ 10 ಬಸ್ಸುಗಳು ಕೇರಳಕ್ಕೆ ಪ್ರತಿನಿತ್ಯ ಸಂಚಾರ ನಡೆಸುತ್ತಿವೆ. ಹಾಗೆಯೇ ಕೇರಳ ರಾಜ್ಯದ 25 ರಿಂದ 30 ಬಸ್ಸುಗಳು ನಮ್ಮ ರಾಜ್ಯಕ್ಕೆ ಸಂಚಾರ ಮಾಡುತ್ತಿವೆ. ಪ್ರತಿದಿನ ಬಸ್ ಮೂಲಕ ಅಂದಾಜು 700 ರಿಂದ 800 ಜನರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳ-ಮೈಸೂರು ಜಿಲ್ಲೆ ಗಡಿ ಭಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.