ಬಾಗಲಕೋಟೆ: ನಾನು ಮತ್ತೆ ಸಿಎಂ ಆದರೆ ಬಡವರಿಗೆ 10 ಕೆಜಿ ಅಕ್ಕಿ ಕೊಡ್ತೀನಿ ಎಂದು ಕೆಂದೂರಿನಲ್ಲಿ ಜನರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಿನ್ನೆಲೆಯಲ್ಲಿ ಇಂದು ಸಿದ್ದರಾಮಯ್ಯ ಬಾಗಲಕೋಟೆ ಜಿಲ್ಲೆ ಬಾದಾಮಿ ಪ್ರವಾಸ ಕೈಗೊಂಡಿದ್ದಾರೆ. ಕೆರೂರಿನಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದು, ಜನರಿಗೆ ಭರವಸೆ ನೀಡುವ ಮೂಲಕ ಮತ್ತೊಮ್ಮೆ ಸಿಎಂ ಆಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ಜೊತೆಗೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಡವರು ಹೊಟ್ಟೆ ತುಂಬ ಊಟ ಮಾಡಬೇಕು. 7 ಕೆಜಿ ಅಕ್ಕಿ ಕೊಟ್ಟಿದ್ರೆ ಇವರಪ್ಪನ ಮನೆ ಗಂಟೇನು ಹೋಗ್ತಿತ್ತು? ನಾನು ಪುನಃ ಬಂದಿದ್ರೆ 10 ಕೆಜಿ ಅಕ್ಕಿ ಕೊಡ್ತಿದ್ದೆ ಎಂದು ಸಭೆಯಲ್ಲಿ ಹೇಳುವಾಗ ಮುಂದಿನ ಸಲ ನೀವೆ ಬರ್ತಿರಿ ಆಗ ಕೊಡುವಿರಂತೆ ಸಾಹೇಬ್ರೆ ಅಂತ ಜನ ಕೂಗಾಡಿದ್ದಾರೆ. ಖಂಡಿತವಾಗಿಯೂ ಮಾಡ್ತೀನಿ.
ಒಂದು ವೇಳೆ ಮನಮೋಹನ ಸಿಂಗ್ ಅವರ ಕಾಲದಲ್ಲಿ ಎನ್.ಆರ್.ಇ.ಜಿ. ಇಲ್ದೆ ಹೋಗಿದ್ದರೆ.. ನಾನು ಅಕ್ಕಿ ಫ್ರಿಯಾಗಿ ಕೊಡದೇ ಹೋಗಿದ್ರೆ. ಈ ಕೊರೊನಾ ಸಮಯದಲ್ಲಿ ಎಷ್ಟು ಜನರು ಕಷ್ಟದಲ್ಲಿ ಸಿಕ್ಕಾಕಿ ಕೊಳ್ತಿದ್ರು? ಈ ಎರಡು ಕಾರ್ಯಕ್ರಮಗಳಿಂದ ಇವತ್ತು ಜನರು ಬದುಕಿದ್ದಾರೆ. ಹಳ್ಳಿಗಳಲ್ಲಿ ಕೆಲಸ ಸಿಗುತ್ತೆ, ಊಟ ಸಿಗುತ್ತೆ. ಬೆಂಗಳೂರು ಬಿಟ್ಟು ಬಹಳ ಜನರು ಊರಿಗೆ ಬಂದ್ಬಿಟ್ರು ಎಂದು ತಮ್ಮನ್ನು ತಾವೇ ಹೊಗಳಿಕೊಂಡಿದ್ದಾರೆ.