ರಾಜ್ಯ ಸರ್ಕಾರಗಳ ಅಧೀನದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಚುನಾವಣಾ ಆಯೋಗದ ಹೊಣೆಗಾರಿಕೆ ವಹಿಸಿಕೊಳ್ಳುವಂತಿಲ್ಲ: ಸುಪ್ರೀಂ ಕೋರ್ಟ್

| Updated By: Skanda

Updated on: Mar 13, 2021 | 7:51 AM

ಚುನಾವಣಾ ಆಯೋಗದ ಸ್ವಾತಂತ್ರ್ಯವು ಸಂವಿಧಾನದಡಿ ಪವಿತ್ರವಾಗಿದ್ದು ಯಾವುದೇ ಸರ್ಕಾರವು ತನ್ನ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಬ್ಬ ಅಧಿಕಾರಿಗೆ ಚುನಾವಣಾ ಅಯೋಗದ ಹೆಚ್ಚುವರಿ ಹೊಣೆಗಾರಿಕೆಯನ್ನು ನೀಡಬಾರದೆಂದು ಸುಪ್ರೀಂ ಕೋರ್ಟ್ ಹೇಳಿದೆ.

ರಾಜ್ಯ ಸರ್ಕಾರಗಳ ಅಧೀನದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಚುನಾವಣಾ ಆಯೋಗದ ಹೊಣೆಗಾರಿಕೆ ವಹಿಸಿಕೊಳ್ಳುವಂತಿಲ್ಲ: ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್​
Follow us on

ನವದೆಹಲಿ: ವಿಧಾನಸಭೆ ಚುನಾವಣೆಗೆ ಅಣಿಯಾಗಿರುವ ಪಶ್ಚಿಮ ಬಂಗಾಳದಲ್ಲಿ ಅಡಳಿತಾರೂಢ ಟಿಎಮ್​ಸಿ ಸರ್ಕಾರವು ರಾಜ್ಯ ಚುನಾವಣಾ ಆಯೋಗವನ್ನು ಪಕ್ಷಪಾತಿ ಎಂದು ಆರೋಪ ಹೊರಿಸಿರುವ ಬೆನ್ನಲ್ಲೇ ಭಾರತದ ಸರ್ವೋಚ್ಛ ನ್ಯಾಯಾಲಯದ ಪೀಠವೊಂದು, ಚುನಾವಣಾ ಆಯೋಗದ ಸ್ವಾತಂತ್ರ್ಯವು ಸಂವಿಧಾನದಡಿ ಪವಿತ್ರವಾಗಿದ್ದು ಯಾವುದೇ ಸರ್ಕಾರವು ತನ್ನ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಬ್ಬ ಅಧಿಕಾರಿಗೆ ಚುನಾವಣಾ ಅಯೋಗದ ಹೆಚ್ಚುವರಿ ಹೊಣೆಗಾರಿಕೆಯನ್ನು ನೀಡಬಾರದೆಂದು ಹೇಳಿದೆ.

ಗೋವಾ ಸರ್ಕಾರವು ತಮ್ಮ ಕಾನೂನು ಕಾರ್ರದರ್ಶಿಗೆ ರಾಜ್ಯ ಚುನಾವಣಾ ಆಯೋಗದ ಹೆಚ್ಚುವರಿ ಹೊಣೆಗಾರಿಕೆ ನೀಡಿರುವದನ್ನು ತರಾಟೆಗೆ ತೆಗದುಕೊಂಡ ನ್ಯಾಯಮೂರ್ತಿ ಆರ್ ಎಫ್ ನಾರಿಮನ್ ಅವರು, ಇನ್ನು ಮುಂದೆ ರಾಜ್ಯ ಚುನಾವಣಾ ಆಯೋಗಗಳನ್ನು ರಾಜ್ಯ ಸರ್ಕಾರಗಳ ಅಧೀನದಲ್ಲಿರದ ಸ್ವತಂತ್ರ ವ್ಯಕ್ತಿಗಳು ಮುನ್ನಡೆಸುವರು ಎಂದು ಹೇಳಿದರು. ಒಂದು ವೇಳೆ ಅಂಥ ವ್ಯಕ್ತಿಯೇನಾದರೂ ಸರ್ಕಾರಿ ಹುದ್ದೆಯಲ್ಲಿದ್ದರೆ, ಚುನಾವಣಾ ಆಯೋಗದ ಹುದ್ದೆಯನ್ನು ವಹಿಸಿಕೊಳ್ಳುವ ಮೊದಲು ಸರ್ಕಾರಿ ಹುದ್ದೆಗೆ ರಾಜಿನಾಮೆ ಸಲ್ಲಿಸಬೇಕು ಅಂತ ನ್ಯಾಯಮೂರ್ತಿಗಳು ಹೇಳಿದರು. ಇದೇ ಸಮಯದಲ್ಲಿ ಅವರು ಚುನಾವಣೆಗಳಲ್ಲಿ ಮಹಿಳೆಯರು, ಎಸ್​ಸಿ ಮತ್ತು ಒಬಿಸಿ ಮೀಸಲಾತಿ ವಿಷಯದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶವೊಂದನ್ನು ಅತಿಕ್ರಮಿಸಲು ಪ್ರಯತ್ನಿಸಿದ ಗೋವಾ ಚುನಾವಣಾ ಅಯೋಗದ ಕ್ರಮವನ್ನು ಸಹ ಜರಿದರು.

ಸರ್ಕಾರದ ಕಾನೂನು ಕಾರ್ಯದರ್ಶಿಯು ಚುನಾವಣಾ ಆಯೋಗದ ಹೊಣೆಗಾರಿಕೆ ವಹಿಸಿಕೊಂಡಿದ್ದು ಹೇವರಿಕೆ ಹುಟ್ಟಿಸುವ ಸಂಗತಿಯೆಂದ ಪೀಠವು, ಜಿಲ್ಲಾ ಪಂಚಾಯತ್ ಚುನಾವಣೆಗಳ ಮೀಸಲಾತಿಗೆ ಸಂಬಂಧಿಸಿದಂತೆ ತಾನೇ ವಿಚಾರಣೆಗಳನ್ನು ನಡೆಸಲು ಮುಂದಾಗಿದ್ದು ಚುನಾವಣಾ ಅಯೋಗದ ಸ್ವಾತಂತ್ರ್ಯ ಮತ್ತು ಸಂವಿಧಾನದ ಆಶಯವನ್ನು ಗೇಲಿ ಮಾಡಿದಂತಿದೆ ಎಂದು ಹೇಳಿತು.

ಗೋವಾ ಜಿಲ್ಲಾ ಪಂಚಾಯತ್ ಚುನಾವಣೆಗಳು ಫೆಬ್ರವರಿ ತಿಂಗಳಿನ ಕೊನೆ ವಾರದಲ್ಲಿ ನಡೆಯಬೇಕಿದ್ದವು. ಆದರೆ ಈಗ ಪ್ರಕರಣವು ಹೈಕೋರ್ಟ್​ನಿಂದ ಸುಪ್ರೀಂ​ ಕೋರ್ಟಿಗೆ ಹೋಗಿರುವುದರಿಂದ ಸದರಿ ಚುನಾವಣೆಗಳನ್ನು ಏಪ್ರಿಲ್ 30 ಕ್ಕಿಂತ ಮೊದಲು ನಡೆಸಲು ಪೀಠ ಆದೇಶಿಸಿತು.

ಹೈಕೋರ್ಟ್​ ವ್ಯಾಪ್ತಿಯನ್ನು ಅತಿಕ್ರಮಿಸಲು ಕಾನೂನು ಕಾರ್ಯದರ್ಶಿ ಮಾಡಿದ ಪ್ರಯತ್ನವನ್ನು ಪ್ರಕರಣದ ಅತಿ ಬೇಸರಿಕೆ ಮೂಡಿಸುವ ಅಂಶವೆಂದು ಅಭಿಪ್ರಾಯಪಟ್ಟಿರುವ ಪೀಠವು ಅವರಿಗೆ ಕೂಡಲೇ ಒಂದು ಅಧಿಸೂಚನೆಯನ್ನು ಜಾರಿ ಮಾಡಿದೆ. ಇದು ಸರ್ವೋಚ್ಛ ನ್ಯಾಯಾಲಯಕ್ಕೆ ಸಂವಿಧಾನದ 142ನೇ ನಿಯಮದಡಿ, ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳನ್ನು ರಾಜ್ಯ ಚುನಾವಣಾ ಅಯೋಗಗಳಿಗೆ ನಿಯುಕ್ತಿ ಮಾಡುವ ಇಲ್ಲವೇ ಹೆಚ್ಚುವರಿ ಹೊಣೆಗಾರಿಕೆಯನ್ನು ವಹಿಸಿಕೊಡುವ ಕ್ರಮವನ್ನು ನಿರ್ಬಂಧಿಸಲು ಭಾರತದ ಎಲ್ಲ ರಾಜ್ಯ ಸರ್ಕಾರಗಳಿಗೆ ಮತ್ತು ಸಂಬಂದಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡುವ ಅಧಿಕಾರ ಒದಗಿಸಿದೆ.

ಇದನ್ನೂ ಓದಿ:
ನನ್ನನ್ನು ಹೊರಗಿನವಳು ಎನ್ನಲು ನೀವು ಯಾರು: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮಮತಾ ಬ್ಯಾನರ್ಜಿ ಸವಾಲ್