ಭಾರತದಂಥ ಬೌಲಿಂಗ್ ಆಕ್ರಮಣ ನನ್ನ ಕ್ರಿಕೆಟ್ ಬದುಕಿನಲ್ಲಿ ನೋಡಿಲ್ಲ: ಟ್ರಾವಿಸ್ ಹೆಡ್
ಆಸ್ಟ್ರೇಲಿಯ ‘ಎ’ ಟೀಮಿನ ನಾಯಕರಾಗಿರುವ ಟ್ರಾವಿಸ್ ಹೆಡ್, ಭಾರತದ ಬೌಲಿಂಗ್ ಆಕ್ರಮಣ ಅದರಲ್ಲೂ ವಿಶೇಷವಾಗಿ ಮೊಹಮ್ಮದ್ ಶಮಿಯ ಬೌಲಿಂಗನ್ನು ಮನಸಾರೆ ಕೊಂಡಾಡಿದ್ದಾರೆ. ಭಾರತ ‘ಎ’ ಮತ್ತು ಆಸ್ಟ್ರೇಲಿಯ ‘ಎ’ ಟೀಮುಗಳ ನಡುವೆ ಮೊದಲ 3-ದಿನದ ಪಂದ್ಯ ನಾಳೆಯಿಂದ ಶುರುವಾಗಲಿದೆ.
ಟೂರ್ ಗೇಮ್ಗಳು ಅಪರೂಪವಾಗುತ್ತಿರುವ ಈಗಿನ ಅತ್ಯಂತ ಬ್ಯೂಸಿ ಕ್ರಿಕೆಟ್ ಶೆಡ್ಯೂಲ್ನಲ್ಲಿ ಆಸ್ಟ್ರೇಲಿಯ ಪ್ರವಾಸದಲ್ಲಿರುವ ಭಾರತದ ಕ್ರಿಕೆಟ್ ತಂಡಕ್ಕೆ ಈ ಸಲದ ಟೆಸ್ಟ್ ಸರಣಿ ಶುರುವಾಗುವ ಮೊದಲು ಎರಡು ಮೂರು-ದಿನದ ಪಂದ್ಯಗಳನ್ನು ಆಡುವ ಅವಕಾಶ ದೊರೆತಿದೆ. ಆಸ್ಟ್ರೇಲಿಯ ‘ಎ’ ತಂಡ ಭಾರತದ ಕೆಲವು ಟೆಸ್ಟ್ ಆಟಗಾರರನ್ನು ಹೊಂದಿರುವ ಭಾರತದ ‘ಎ’ ಟೀಮಿನೊಂದಿಗೆ ಭಾನುವಾರದಿಂದ ಶುರವಾಗುವ ಒಂದು ಪಂದ್ಯ ಮತ್ತು ಡಿಸೆಂಬರ್ 11ರಿಂದ 13ರವರೆಗೆ ಎರಡನೆ ಪಂದ್ಯದಲ್ಲಿ ಸೆಣಸಲಿದೆ.
ಆಸ್ಟ್ರೇಲಿಯ ಎ ತಂಡದ ನಾಯಕನಾಗಿರುವ ಮತ್ತು ಆ ದೇಶದ ಟೆಸ್ಟ್ ಪರಿಣಿತರಲ್ಲಿ ಒಬ್ಬರೆನಿಸಿಕೊಂಡಿರುವ ಟ್ರಾವಿಸ್ ಹೆಡ್, ಸೋನಿ ನೆಟ್ವರ್ಕ್ಸ್ ಆಯೋಜಿಸಿದ ವರ್ಚ್ಯುಯಲ್ ಸುದ್ದಿಗೋಷ್ಠಿಯೊಂದರಲ್ಲಿ ಮಾತಾಡಿ, ಭಾರತದ ಬೌಲಿಂಗ್ ಆಕ್ರಮಣದ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿ, ತಮ್ಮ ಟೀಮ್ ಈ ಎರಡು ಪಂದ್ಯಗಳ ಬಗ್ಗೆ ಬಹಳ ಉತ್ಸುಕವಾಗಿದೆ ಎಂದು ಹೇಳಿದ್ದಾರೆ.
‘‘ಭಾರತದ ನಂಬಲಸದಳ ಬೌಲಿಂಗ್ ಆಕ್ರಮಣದ ಕೌಶಲ್ಯಗಳನ್ನು ಅರ್ಥ ಮಾಡಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ. ಮೊಹಮ್ಮದ್ ಶಮಿ, ಬ್ಯಾಟ್ಸ್ಮನ್ಗೆ ಸತತವಾಗಿ ಸಂಕಷ್ಟದಲ್ಲಿ ಸಿಲುಕಿಸುವಷ್ಟು ನಿಖರತೆಯೊಂದಿಗೆ ಬೌಲ್ ಮಾಡುತ್ತಾರೆ. ಅವರು ಬೌಲ್ ಮಾಡುತ್ತಿದ್ದರೆ ಬ್ಯಾಟ್ಸ್ಮನ್ಗೆ ಬಿಡುವೆನ್ನುವುದೇ ಇರೋದಿಲ್ಲ. ಬೇರೆಯೇನಾದರೂ ಯೋಚಿಸುವ ಅವಕಾಶವನ್ನೇ ಅವರು ಬ್ಯಾಟ್ಸ್ಮನ್ಗೆ ನೀಡುವುದಿಲ್ಲ. ಹಾಗೆ ನೋಡಿದರೆ, ಶಮಿಯೊಬ್ಬರೇ ಅಂತಲ್ಲ ಟೀಮ್ ಇಂಡಿಯಾದ ಒಟ್ಟಾರೆ ಬೌಲಿಂಗ್ ಆಕ್ರಮಣ ಅದ್ಭುತವಾಗಿದೆ. ನಿಜ ಹೇಳಬೇಕೆಂದರೆ ಇಂಥ ಕ್ವಾಲಿಟಿ ಬೌಲಿಂಗ್ ಆಕ್ರಮಣವನ್ನು ನನ್ನ ಕ್ರಿಕೆಟ್ ಬದುಕಿನಲ್ಲಿ ನಾನು ಮೊದಲಬಾರಿಗೆ ನೋಡಿದ್ದು,’’ ಎಂದು ಹೆಡ್ ಹೇಳಿದರು.
ಎರಡು ‘ಎ’ ತಂಡಗಳ ನಡುವೆ ನಡುವೆ ಮೊದಲ ಪಂದ್ಯ ಕೆಂಪು ಬಣ್ಣದ ಚೆಂಡಿನೊಂದಿಗೆ ಆಡಲಾಗುತ್ತದೆ ಮತ್ತು ಡಿಸೆಂಬರ್ 17 ಶುರುವಾಗುವ ಮೊದಲ ಹೊನಲು-ಬೆಳಕಿನ ಟೆಸ್ಟ್ ಪಂದ್ಯಕ್ಕೆ ಮೊದಲು ನಡೆಯುವ ಎರಡನೆ ಮೂರು- ದಿನಗಳ ಪಂದ್ಯ ಪಿಂಕ್ ಬಣ್ಣದ ಚೆಂಡಿನಿಂದ ಆಡಲಾಗುತ್ತದೆ. ಭಾರತದ ವಿರುಧ್ಧ ಅಭ್ಯಾಸ ಪಂದ್ಯಗಳನ್ನಾಡಲು ತನ್ನ ಟೀಮಿನ ಆಟಗಾರರು ಎದುರು ನೋಡುತ್ತಿದ್ದಾರೆ ಎಂದು ಹೆಡ್ ಹೇಳಿದರು.
‘‘ಈ ಎರಡು ಮ್ಯಾಚ್ಗಳು ನಮಗೆ ಬಹಳ ಮಹತ್ವದ್ದಾಗಿವೆ ಮತ್ತು ನಮ್ಮ ಹುಡುಗರು ಆಡಲು ಉತ್ಸುಕರಾಗಿದ್ದಾರೆ. ಈ ಪಂದ್ಯಗಳಲ್ಲಿ ಉತ್ತಮವಾಗಿ ಆಡಿ ಅವರನ್ನು ಒತ್ತಡಕ್ಕೆ ಸಿಲುಕಿಸುವ ಪ್ರಯತ್ನ ನಾವು ಮಾಡುತ್ತೇವೆ. ವೈಯಕ್ತಿಕವಾಗಿ ಹೇಳುವುದಾದರೆ, ನಾನು ನಾಯಕತ್ವದ ಗುಣಗಳನ್ನು ಉತ್ತಮಪಡಿಸಿಕೊಳ್ಳಲು ಯತ್ನಿಸುತ್ತಿದ್ದೇನೆ ಮತ್ತು ನನ್ನ ಆಟವೂ ಸುಧಾರಿಸುತ್ತಿದೆ. 2018ರಲ್ಲಿ ನಾನು ಭಾರತದ ವಿರುದ್ಧ ತೋರಿದ ಪ್ರದರ್ಶನಕ್ಕೆ ಹೋಲಿಸಿದರೆ ಈಗ ನನ್ನ ಬ್ಯಾಟಿಂಗ್ ಉತ್ತಮಗೊಂಡಿದೆ. ನೆಟ್ಸ್ನಲ್ಲಿ ಬಾಲನ್ನು ಚೆನ್ನಾಗಿ ಕನೆಕ್ಟ್ ಮಾಡುತ್ತಿದ್ದೇನೆ. ನಿಜ ಹೇಳಬೇಕೆಂದರೆ, ಈ ಪಂದ್ಯಗಳು ಶುರುವಾಗುವುದನ್ನು ನಾನು ಕಾತುರದಿಂದ ಎದುರು ನೋಡುತ್ತಿದ್ದೆ,’’ ಎಂದು ಹೆಡ್ ಹೇಳಿದರು.
2018-19 ರಲ್ಲಿ ಭಾರತ ಆಸ್ಟ್ರೇಲಿಯಾವನ್ನು ಅದರ ನೆಲದಲ್ಲೇ ಮಣಿಸಿ ಟೆಸ್ಟ್ ಪಂದ್ಯಗಳ ಸರಣಿಯನ್ನು 2-1 ಅಂತರದರಿಂದ ಗೆದ್ದಾಗ ಟ್ರಾವಿಸ್ ಹೆಡ್ ಆಸ್ಸೀಸ್ ಟೀಮಿನ ಭಾಗವಾಗಿದ್ದರು. ಆ ಸರಣಿಯಲ್ಲಿ ಅವರು ಎರಡು ಅರ್ಧ ಶತಕಗಳೊಂದಿಗೆ 237 ರನ್ ಗಳಿಸಿದ್ದರು.