ಬೆಂಗಳೂರು: ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ (JDS Candidates List) ಎರಡನೇ ಪಟ್ಟಿಯನ್ನು ಶುಕ್ರವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು. ಜೆಡಿಎಸ್ (JDS) ನಾಯಕರಾದ ಹೆಚ್ಡಿ ಕುಮಾರಸ್ವಾಮಿ, ಹೆಚ್ಡಿ ರೇವಣ್ಣ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿಎಂ ಇಬ್ರಾಹಿಂ ಪತ್ರಿಕಾಗೋಷ್ಠಿ ನಡೆಸಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದರು. 49 ಮಂದಿಗೆ ಟಿಕೆಟ್ ಘೋಷಿಸಲಾಗಿದೆ. ಬಹಳ ಕುತೂಹಲ ಮೂಡಿಸಿದ್ದ ಹಾಸನ ಕ್ಷೇತ್ರದ ಟಿಕೆಟ್ ಹೆಚ್.ಪಿ. ಸ್ವರೂಪ್ (HP Swaroop) ಪಾಲಾಗಿದೆ. ಭವಾನಿ ರೇವಣ್ಣಗೆ ಟಿಕೆಟ್ ಕೈತಪ್ಪಿದೆ. ಇದರ ಬೆನ್ನಲ್ಲೇ ಹಾಸನದ ಹೆಚ್.ಪಿ.ಸ್ವರೂಪ್ ನಿವಾಸದಲ್ಲಿ ಸಂಭ್ರಮದ ವಾತಾವರಣ ಮನೆಮಾಡಿದೆ. ಬೆಂಬಲಿಗರು ಸ್ವರೂಪ್ರನ್ನು ಹೆಗಲ ಮೇಲೆ ಹೊತ್ತು ಕುಣಿದು ಸಂಭ್ರಮಿಸಿದರು. ಈ ಮಧ್ಯೆ, ಚಿಕ್ಕಮಗಳೂರಿನ ಕಡೂರು ಕ್ಷೇತ್ರದ ಟಿಕೆಟ್ ವೈಎಸ್ವಿ ದತ್ತಾಗೆ ದೊರೆತಿದೆ.
ಹಾಸನ ಕ್ಷೇತ್ರದ ಟಿಕೆಟ್ ಸ್ವರೂಪ್ ಪಾಲಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಹೆಚ್ಡಿ ರೇವಣ್ಣ, ಹಾಸನ ಕ್ಷೇತ್ರದಲ್ಲಿ ಭವಾನಿಯನ್ನು ಕಣಕ್ಕಿಳಿಸಬೇಕೆಂದು ಹೇಳುತ್ತಿದ್ದೆ. ಕಳೆದ 2 ವರ್ಷಗಳಿಂದ ಭವಾನಿ ನಿಲ್ಲಿಸಬೇಕೆಂದು ಚರ್ಚೆ ನಡೆಯುತ್ತಿತ್ತು. ಪ್ರೀತಂಗೌಡ 50,000 ಮತಗಳ ಅಂತರದಿಂದ ಗೆಲ್ಲುವೆ ಅಂತಿದ್ದರು. ಅದನ್ನು ಸವಾಲಾಗಿ ಸ್ವೀಕರಿಸಿ ಭವಾನಿ ಕಣಕ್ಕಿಳಿಸಲು ನಿರ್ಧರಿಸಿದ್ದೆವು. ಆದರೆ ಹಾಸನದ ಶಾಸಕರು, ಕಾರ್ಯಕರ್ತರ ಅಭಿಪ್ರಾಯದಂತೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು. ನಮ್ಮ ಮಾವ ಮುಖ್ಯ, ನನಗೆ ಯಾವುದೇ ಶಾಸಕ ಸ್ಥಾನ ಮುಖ್ಯವಲ್ಲ ಎಂದು ಕಳೆದ ಒಂದು ತಿಂಗಳಿಂದ ಭವಾನಿ ರೇವಣ್ಣ ಹೇಳುತ್ತಲೇ ಇದ್ದಾರೆ. ದೇವೇಗೌಡರು, ಕುಮಾರಸ್ವಾಮಿ ಹೇಳಿದ್ದನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ರೇವಣ್ಣ ಹೇಳಿದರು.
ಪ್ರಾಮಾಣಿಕ ರಾಜಕಾರಣಿ ದತ್ತಾರನ್ನು ಕಾಂಗ್ರೆಸ್ನವರು ಕರೆದೊಯ್ದಿದ್ದರು. ಅರ್ಧದಾರಿಯಲ್ಲಿ ವೈಎಸ್ವಿ ದತ್ತಾರನ್ನು ಕಾಂಗ್ರೆಸ್ ನಾಯಕರು ಕೈಬಿಟ್ಟಿದ್ದರು. ಕಳೆದ ಹಲವು ವರ್ಷಗಳಿಂದ ದತ್ತಾ ನಮ್ಮ ಪಕ್ಷಕ್ಕಾಗಿ ದುಡಿದಿದ್ದಾರೆ ಎಂದು ರೇವಣ್ಣ ಮೆಚ್ಚುಗೆಯ ಮಾತುಗಳನ್ನಾಡಿದರು.
ಕಾಂಗ್ರೆಸ್ ಸೇರಿ ಮತ್ತೆ ಜೆಡಿಎಸ್ಗೆ ಮರಳಿರುವ ವೈಎಸ್ವಿ ದತ್ತಾಗೆ ಚಿಕ್ಕಮಗಳೂರಿನ ಕಡೂರು ಕ್ಷೇತ್ರದ ಟಿಕೆಟ್ ಘೋಷಿಸಲಾಗಿದೆ. ಕಡೂರು ಕ್ಷೇತ್ರದಿಂದ ಈಗಾಗಲೇ ಜೆಡಿಎಸ್ ಟಿಕೆಟ್ ಪಡೆದಿರುವ ಧನಂಜಯ್ ಅವರು ದತ್ತಾ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ವೇಳೆ ಎಲ್ಲ ಗೊಂದಲ ಬಗೆಹರಿಯಲಿದೆ ಎಂದಿದ್ದರು.
ಎಂ.ಪಿ.ಕುಮಾರಸ್ವಾಮಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಬೆಂಗಳೂರಿನ ಶೇಷಾದ್ರಿಪುರಂನ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಎಂ.ಪಿ.ಕುಮಾರಸ್ವಾಮಿ ಜೆಡಿಎಸ್ ಸೇರಿದರು.
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 6:19 pm, Fri, 14 April 23