Karnataka PUC Exam 2023: 1 ಅಂಕ ವ್ಯತ್ಯಾಸ ಬಂದರೂ ಮಾನ್ಯವಾಗಲಿದೆ ಮರು ಮೌಲ್ಯಮಾಪನ
ಕರ್ನಾಟಕ ಸರ್ಕಾರವು 2023 ರ 2 ನೇ ಪಿಯುಸಿ ಪರೀಕ್ಷೆಗಳಿಗೆ ಹೊಸ ಮರುಮೌಲ್ಯಮಾಪನ ಮಾನದಂಡವನ್ನು ಪರಿಚಯಿಸಿದೆ. ರಾಜ್ಯ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಮಾಡಿದ ಪ್ರಕಟಣೆಯ ಪ್ರಕಾರ, ವಿದ್ಯಾರ್ಥಿಗಳು ಇದೀಗ 2 ನೇ ಪಿಯುಸಿ ಫಲಿತಾಂಶಗಳ ಬಳಿಕ ಅದು ಕೇವಲ ಒಂದು ಅಂಕ ಹೆಚ್ಚು ಗಳಿಸ ಬೇಕೆಂದರೂ ಸಹ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು.
ಕರ್ನಾಟಕದ ಪಿಯು ವಿದ್ಯಾರ್ಥಿಗಳಿಗೆ ಇದೀಗ ಒಂದು ಸಂತೋಷದ ಸುದ್ದಿ. ಇನ್ನು ಮುಂದೆ ಮರುಮೌಲ್ಯಮಾಪನದ ನಂತರ ಫಲಿತಾಂಶದಲ್ಲಿ 1 ಅಂಕ ವ್ಯತ್ಯಾಸವಿದ್ದರೂ ಅದನ್ನು ಪರಿಗಣಿಸಲಾಗುವುದು. ಶಿಕ್ಷಣ ಸಚಿವರಾದ ಬಿ. ಸಿ ನಾಗೇಶ್ ಗುರುವಾರ (ಫೆಬ್ರವರಿ 9) ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. “ದ್ವಿತೀಯ ಪಿಯು ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆ ಮರುಮೌಲ್ಯಮಾಪನ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗಿದ್ದು, ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ‘ಒಂದು ಅಂಕ’ ಹೆಚ್ಚು ಬಂದರೂ ಪರಿಗಣಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. 2023ರ ಮಾರ್ಚ್‌ನಲ್ಲಿ ನಡೆಯುವ ‘ವಾರ್ಷಿಕ ಪರೀಕ್ಷೆ‘ಯಿಂದ ಈ ಹೊಸ ನಿಯಮ ಅನ್ವಯವಾಗಲಿದೆ.” ಎಂದು ಬಿ. ಸಿ ನಾಗೇಶ್ ತಿಳಿಸಿದ್ದಾರೆ.
“ಹಾಲಿ ನಿಯಮದ ಪ್ರಕಾರ, ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗೆ ಪತ್ರಿಕೆಯ ಒಟ್ಟು ಅಂಕದ ಶೇ.6ರಷ್ಟು ಅಂಕ ಅಥವಾ ಅದಕ್ಕಿಂತ ಹೆಚ್ಚು ಅಂಕಗಳ ವ್ಯತ್ಯಾಸ ಬಂದಲ್ಲಿ ಮಾತ್ರ ಪರಿಗಣಿಸಲಾಗುತ್ತಿತ್ತು. ಶೇ.6ಕ್ಕಿಂತ ಕಡಿಮೆ ಅಂಕಗಳು ಬಂದಲ್ಲಿ ಪರಿಗಣಿಸುತ್ತಿರಲಿಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ಅಂಕವು ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ‘ಒಂದು ಅಂಕ’ವನ್ನೂ ಪರಿಗಣಿಸುವ ‘ವಿದ್ಯಾರ್ಥಿ ಸ್ನೇಹಿ’ ಕ್ರಮವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಈ ಸಂಬಂಧ ಶೀಘ್ರದಲ್ಲೇ ‘ಕರ್ನಾಟಕ ಪದವಿಪೂರ್ವ ಶಿಕ್ಷಣ ರಾಜ್ಯ ಮಟ್ಟದ ಪಬ್ಲಿಕ್ ಪರೀಕ್ಷೆ ನಿಯಮಗಳು-1997’ಕ್ಕೆ ತಿದ್ದುಪಡಿ ತರಲಾಗುತ್ತದೆ” ಎಂದು ಸಚಿವರು ಪಿಯು ವಿದ್ಯಾರ್ಥಿಗಳಿಗೆ ಸಂತೋಷದ ಸುದ್ದಿಯೊಂದನ್ನು ನೀಡಿದರು.
ಇದನ್ನೂ ಓದಿ: ಪಿಯುಸಿ ನಂತರ ವಿಜ್ಞಾನಕ್ಕೆ ಸಂಬಂಧ ಪಟ್ಟ ಯಾವ ಕೋರ್ಸ್ ಮಾಡಿದರೆ ಅತೀ ಹೆಚ್ಚು ಸಂಬಳ ಪಡೆಯಬಹುದು?
ಈ ಹಿಂದೆ ಮರುಮೌಲ್ಯಮಾಪನದ ನಂತರ ಸುಮಾರು 6 ಅಂಕಗಳು ವ್ಯತ್ಯಾಸವಾಗಿದ್ದರೆ ಮಾತ್ರ ಅದನ್ನು ಪರಿಗಣಿಸಲಾಗುತ್ತಿತ್ತು. ಇದರಿಂದ ಅದೆಷ್ಟೋ ವಿದ್ಯಾರ್ಥಿಗಳು ಒಂದೆರಡು ಅಂಕಗಳ ವ್ಯತ್ಯಾಸದಿಂದ ಡಿಸ್ಟಿಂಕ್ಷನ್ (85% ಗಿಂತ ಮೇಲೆ) ಕಳೆದುಗೊಂಡಿದ್ದರು. ಆದರೆ ಈ ವರ್ಷದಿಂದ ಪಿಯು ವಿದ್ಯಾರ್ಥಿಗಳು 1 ಅಂಕ ಪಡೆಯಬೇಕಾದರೂ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಅವಕಾಶವಿದೆ.
ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:48 pm, Sat, 11 February 23