ಮುಖ್ಯಮಂತ್ರಿ ಸಲಹೆಗಾರರ ಕಚೇರಿ ಸಿಬ್ಬಂದಿ ಕರ್ತವ್ಯಮುಕ್ತಗೊಳಿಸಿ ಆದೇಶ: ಯಡಿಯೂರಪ್ಪ ರಾಜೀನಾಮೆ ಹಿನ್ನೆಲೆ ಸರ್ಕಾರದ ಕ್ರಮ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 02, 2021 | 8:03 PM

ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಅವರ ಅವಧಿಯಲ್ಲಿ ಪ್ರಮುಖ ಸ್ಥಾನಗಳಿಗೆ ನೇಮಕವಾಗಿದ್ದ ವಿವಿಧ ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿ ಸಲಹೆಗಾರರ ಕಚೇರಿ ಸಿಬ್ಬಂದಿ ಕರ್ತವ್ಯಮುಕ್ತಗೊಳಿಸಿ ಆದೇಶ: ಯಡಿಯೂರಪ್ಪ ರಾಜೀನಾಮೆ ಹಿನ್ನೆಲೆ ಸರ್ಕಾರದ ಕ್ರಮ
ವಿಧಾನಸೌಧ
Follow us on

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಅವರ ಅವಧಿಯಲ್ಲಿ ಪ್ರಮುಖ ಸ್ಥಾನಗಳಿಗೆ ನೇಮಕವಾಗಿದ್ದ ವಿವಿಧ ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಕಚೇರಿಯ ನಾಲ್ವರು, ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಕಚೇರಿಯ ಎಂಟು ಮಂದಿ, ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರ ಕಚೇರಿಯ ಐವರು, ಮಾಧ್ಯಮ ಸಂಯೋಜಕರ ಕಚೇರಿಯ ಐವರು, ಕಾನೂನು ಸಲಹೆಗಾರರ ಕಚೇರಿಯ ಮೂವರು, ಸಿಎಂ ಇ-ಆಡಳಿತ ಸಲಹೆಗಾರರ ಕಚೇರಿಯ ಮೂವರು, ಸಲಹೆಗಾರರ ಕಚೇರಿಯ ಐವರು ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಲಾಗಿದೆ.

ಮುಖ್ಯಮಂತ್ರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಹಲವರನ್ನು ಕರ್ತವ್ಯಮುಕ್ತಗೊಳಿಸಿ ಭಾನುವಾರವೂ ಸರ್ಕಾರ ಆದೇಶ ಹೊರಡಿಸಿತ್ತು.

ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರದ ಮಹತ್ವದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಕಚೇರಿಯಲ್ಲಿ (ಮುಖ್ಯಮಂತ್ರಿಗಳ ಸಚಿವಾಲಯ) ನಿಯೋಜನೆ, ಒಪ್ಪಂದ ಹಾಗೂ ಗುತ್ತಿಗೆ ಆಧಾರದ ಮೆಲೆ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳನ್ನು ಕಾರ್ಯಮುಕ್ತಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಟಿ.ಮಹಂತೇಶ್​ ಆದೇಶ ಹೊರಡಿಸಿದ್ದಾರೆ.

ನಿವೃತ್ತ ಐಎಎಸ್ ಅಧಿಕಾರಿ ಎಂ.ಲಕ್ಷ್ಮೀನಾರಾಯಣ ಸೇರಿದಂತೆ ಒಟ್ಟು 19 ಅಧಿಕಾರಿಗಳನ್ನು ಕರ್ತವ್ಯಮುಕ್ತಗೊಳಿಸಲಾಗಿದೆ. ನಿಯೋಜನೆ / ಒಪ್ಪಂದದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ತಮ್ಮ ಮಾತೃ ಇಲಾಖೆಯಲ್ಲಿ ಕಾರ್ಯವರದಿ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಮುಖ್ಯಮಂತ್ರಿ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ.ಎ.ಲೋಕೇಶ್, ಎಚ್​.ಎಸ್.ಸತೀಶ್, ಟಿ.ಎಂ.ಸುರೇಶ್, ಅರುಣ್​ ಕುಮಾರ್ ಹಡಗಲಿ, ಅರುಣ್ ಪುರ್ಟಾಡೋ, ಕೆ.ಎಸ್.ಕಿರಣ್​ಕುಮಾರ್, ಕೆ.ರಾಜಪ್ಪ, ಆರ್.ಕೆ.ಮಹೇಶ್, ಎಸ್.ನಾಗರಾಜಯ್ಯ, ಎಸ್.ರಮೇಶ್, ಎಸ್.ಶಾಂತಾರಾಮ್, ಗಣೇಶ್ ಯಾಜಿ, ಎಸ್.ಎ.ಅಂಗಡಿ, ಎ.ಆರ್.ರವಿ, ಕೆ.ಗಂಗಯ್ಯ, ಜಿ.ಎಸ್.ಸುನಿಲ್. ಪ್ರೊ.ಕೆ.ಜಿ.ಲೋಕೇಶ್, ಡಾ.ಆರ್.ಎಂ.ರಂಗನಾಥ್ ಅವರನ್ನು ಕಾರ್ಯಮುಕ್ತಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

(Karnataka Government Releases Some more Staff Appointed during BS Yediyurappa tenure)

ಇದನ್ನೂ ಓದಿ: ಇನ್ನೂ ಮುಗಿಯದ ಸಂಪುಟ ರಚನೆ ಕಸರತ್ತು, ಬಿ.ಎಸ್. ಯಡಿಯೂರಪ್ಪ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಚರ್ಚೆ

ಇದನ್ನೂ ಓದಿ: ಬಿಎಸ್‌ ಯಡಿಯೂರಪ್ಪ, ಕುಟುಂಬದವರ ವಿರುದ್ಧ ಭ್ರಷ್ಟಾಚಾರ ಆರೋಪ: ಪಿಐಎಲ್ ಆಗಿ ಪರಿಗಣಿಸಲು ಸಾಧ್ಯವಿಲ್ಲವೆಂದ ಹೈಕೋರ್ಟ್

Published On - 8:02 pm, Mon, 2 August 21