ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ (SC And ST Reservation) ಹೆಚ್ಚಳ ಕುರಿತು ಸಿಎಂ ಬಸವರಾಜ ಸರ್ಕಾರ ಬೊಮ್ಮಾಯಿ ಹೊರಡಿಸಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದಾರೆ. ಈ ಮೂಲಕ ಎರಡು ಸಮುದಾಯದ ಬಹು ವರ್ಷಗಳ ಬೇಡಿಕೆ ಈಡೇರಿದೆ.
ಸುಗ್ರೀವಾಜ್ಞೆಗೆ ರಾಜ್ಯಪಾಲ ಗೆಹ್ಲೋಟ್‌ರಿಂದ ಅಂತಿಮ ಮುದ್ರೆ ಬಿದ್ದಿದ್ದು, ನಾಳೆಯಿಂದಲೇ(ಅಕ್ಟೋಬರ್ 24) ಎಸ್ಸಿ, ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಳವಾಗಲಿದೆ. ಮೀಸಲಾತಿ ಹೆಚ್ಚಳ ಸಂಬಂಧ ಗೆಜೆಟ್ ನೋಟಿಫಿಕೇಶನ್ ಪ್ರಕಟವಾಗಿದೆ. ಇದರೊಂದಿಗೆ ಎಸ್ಸಿ ಸಮುದಾಯದ ಮೀಸಲಾತಿ ಶೇ.15ರಿಂದ ಶೇ.17ಕ್ಕೆ ಹೆಚ್ಚಳವಾಗಲಿದ್ದು, ಎಸ್ಟಿ ಸಮುದಾಯದ ಮೀಸಲಾತಿ ಶೇ.3ರಿಂದ ಶೇ.7ಕ್ಕೆ ಹೆಚ್ಚಳವಾಗಲಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಎಸ್ಸಿ, ಎಸ್ಟಿಗೆ ಹೆಚ್ಚುವರಿ ಮೀಸಲಾತಿ ದೊರೆಯಲಿದೆ.
ಎಸ್‌ಸಿ ವರ್ಗಕ್ಕೆ ಶೇ.15ರಷ್ಟಿದ್ದ ಮೀಸಲಾತಿಯನ್ನು ಶೇ.17ಕ್ಕೆ ಮತ್ತು ಎಸ್‌ಟಿ ವರ್ಗಕ್ಕೆ ಶೇ.3ರಷ್ಟಿದ್ದ ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸಲಾಗಿದೆ. ಇತ್ತೀಚೆಗೆ ಮೀಸಲಾತಿ ಪ್ರಮಾಣ ಹೆಚ್ಚಳ ಸಂಬಂಧ ಕೈಗೊಂಡಿರುವ ನಿರ್ಧಾರವನ್ನು ಅನುಷ್ಠಾನಗೊಳಿಸಲು ಸುಗ್ರೀವಾಜ್ಞೆ ಹೊರಡಿಸುವುದಕ್ಕೆ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿತ್ತು. ಇದೀಗ ಸುಗ್ರೀವಾಜ್ಞೆಗೆ ರಾಜ್ಯಪಾಲರ ಮುದ್ರೆ ಬಿದ್ದಿದೆ.
ಎಕ್ಸಿಕ್ಯೂಟಿವ್ ಆರ್ಡರ್ ತೀರ್ಮಾನವೇ ಸಾಕು ಎಂದು ಭಾವಿಸಲಾಗಿತ್ತು. ಆದರೆ ಯಾರಾದರೂ ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಸಮಸ್ಯೆಯಾಗಬಹುದು ಎನ್ನುವ ದೂರದೃಷ್ಟಿಯಿಂದ ಬೊಮ್ಮಾಯಿ ಸರ್ಕಾರ ಸಚಿವ ಸಂಪುಟದಲ್ಲಿ ಎಸ್ಸಿ ಹಾಗೂ ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ ಸಂಬಂಧ ಸುಗ್ರೀವಾಜ್ಞೆ ಹೊರಡಿಸಿತ್ತು.
ಸಿಎಂ ಮಾಧ್ಯಮ ಪ್ರಕಟಣೆ
ರಾಜ್ಯಪಾಲರ ಅಂಕಿತ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಸುಗ್ರಾವಾಜ್ಞೆಗೆ ಅಂಕಿತ ಹಾಕಿರುವ ರಾಜ್ಯಪಾಲರಿಗೆ ನನ್ನ ಕೃತಜ್ಞತೆಗಳು ಎಂದಿದ್ದಾರೆ.
ವಿಧಾನಮಂಡಲದ ಎರಡೂ ಸದನಗಳಲ್ಲೂ ವಿಧೇಯಕ ಮಂಡನೆ ಮಾಡಿ ಮೀಸಲಾತಿ ವಿಧೇಯಕಕ್ಕೆ ಸದನಗಳ ಒಪ್ಪಿಗೆ ಪಡೆಯಲಾಗುವುದು. ನಮ್ಮ ಸರ್ಕಾರ ಮೀಸಲಾತಿ ಪ್ರಮಾಣ ಹೆಚ್ಚಿಸಿ ಬದ್ಧತೆಯಿಂದ ನಡೆದಿದೆ. ಇನ್ನು ಮುಂದೆ SCಗೆ ಶೇ.17 ಹಾಗೂ STಗೆ ಶೇ.7ರಷ್ಟು ಮೀಸಲಾತಿ ಜಾರಿಯಾಗಲಿದ್ದು,- ಮೀಸಲಾತಿ ಸುಗ್ರೀವಾಜ್ಞೆಗೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದು ಸಂತಸದ ಸಂಗತಿಯಾಗಿದೆ ಎಂದು ಸಿಎಂ ಮಾಧ್ಯಮ ಪ್ರಕಟಣೆ ಮೂಲಕ ರಾಜ್ಯಪಾಲರಿಗೆ ಕೃತಜ್ಞತೆ ತಿಳಿಸಿದ್ದಾರೆ.
Published On - 10:54 pm, Sun, 23 October 22