ರಾಜ್ಯಸಭಾ ಚುನಾವಣೆ: ನನ್ನ ಗುರಿ ಏನಿದ್ದರೂ ಮುಂದಿನ ವಿಧಾನ ಸಭಾ ಚುನಾವಣೆ ಗೆಲ್ಲೋದು ಅಂದರು ಕುಮಾರಸ್ವಾಮಿ

ದೇವೇಗೌಡರ ಪಕ್ಷದಲ್ಲಿ 32 ವೋಟುಗಳಿವೆ. ಕಾಂಗ್ರೆಸ್ ಬಳಿ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಸೇರಿದಂತೆ 25 ವೋಟು ಉಳಿದಿವೆ. ಅಂದರೆ ಅದಕ್ಕೆ ಇನ್ನೂ 20 ವೋಟುಗಳು ಬೇಕು. ಆದರೆ ಜೆಡಿ(ಎಸ್) ಅಭ್ಯರ್ಥಿಗೆ ಕಾಂಗ್ರೆಸ್ ನ 13 ವೋಟು ಸಿಕ್ಕರೆ ಸಾಕು.

TV9kannada Web Team

| Edited By: Arun Belly

Jun 04, 2022 | 5:30 PM

ಬೆಂಗಳೂರು: ರಾಜ್ಯದಿಂದ ರಾಜ್ಯಸಭೆಗೆ (Rajya Sabha) ಆಯ್ಕೆಯಾಗುವ ನಾಲ್ಕನೇ ಅಭ್ಯರ್ಥಿ ಯಾರು ಅನ್ನೋದು ಗೊಂದಲದ ಗೂಡಾಗಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿ(ಎಸ್)-ಮೂರೂ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದು ಎಲ್ಲರೂ ಗೆಲ್ಲುವ ಬಗ್ಗೆ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ ಆದರೆ ತಮ್ಮೊಳಗಿನ ಸಂದೇಹಗಳನ್ನು ಮಾತ್ರ ಹೊರಹಾಕುತ್ತಿಲ್ಲ. ಬಿಜೆಪಿ ಈಗಾಗಲೇ ಇಬ್ಬರನ್ನು-ನಿರ್ಮಲಾ ಸೀತಾರಾಮನ್ (Nirmala Sitharaman) ಮತ್ತು ಚಿತ್ರನಟ ಜಗ್ಗೇಶ್ (Jaggesh) ಅವರನ್ನು ಆರಿಸಿ ಮೂರನೇ ಅಭ್ಯರ್ಥಿಯಾಗಿ ಲೆಹರ್ ಸಿಂಗ್ ಅವರಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ ಜೈರಾಮ್ ರಮೇಶ್ ಅವರನ್ನು ಆಯ್ಕೆ ಮಾಡಿಸಿ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಅಲಿ ಖಾನ್ ಅವರನ್ನು ಕಣಕ್ಕಿಳಿಸಿದೆ. ಜೆಡಿ(ಎಸ್) ಕುಪೇಂದ್ರ ರೆಡ್ಡಿಯವರನ್ನು ಮತ್ತೊಮ್ಮೆ ಆರಿಸಿ ಕಳಿಸುವ ಪ್ರಯತ್ನ ಮಾಡುತ್ತಿದೆ.

ಆದರೆ ಯಾವ ಪಾರ್ಟಿಗೂ ಸ್ವಂತ ಸಾಮರ್ಥ್ಯದಲ್ಲಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವಷ್ಟು ವೋಟುಗಳಿಲ್ಲ. ಶುಕ್ರವಾರ ಬೆಂಗಳೂರಲ್ಲಿ ಮಾತಾಡಿದ ಸಿದ್ದರಾಮಯ್ಯನವರು ಮನ್ಸೂರ್ ಗೆಲ್ಲುವ ಬಗ್ಗೆ ಅತೀವ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಜೆಡಿ(ಎಸ್)ನ ಕೆಲ ಶಾಸಕರೊಂದಿಗೆ ಅವರು ಮಾತಾಡಿದಂತಿದೆ. ದೇವೇಗೌಡರ ಪಕ್ಷದಲ್ಲಿ 32 ವೋಟುಗಳಿವೆ. ಕಾಂಗ್ರೆಸ್ ಬಳಿ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಸೇರಿದಂತೆ 25 ವೋಟು ಉಳಿದಿವೆ. ಅಂದರೆ ಅದಕ್ಕೆ ಇನ್ನೂ 20 ವೋಟುಗಳು ಬೇಕು. ಆದರೆ ಜೆಡಿ(ಎಸ್) ಅಭ್ಯರ್ಥಿಗೆ ಕಾಂಗ್ರೆಸ್ ನ 13 ವೋಟು ಸಿಕ್ಕರೆ ಸಾಕು.

ಅತ್ತ ಬಿಜೆಪಿ 29 ವೋಟುಗಳನ್ನು ಹೊಂದಿದ್ದು ಮೂರನೇ ಸೀಟು ಗೆಲ್ಲಲು ಅದಕ್ಕೆ 16 ವೋಟು ಬೇಕು. ಈ ಹಿನ್ನೆಲೆಯಲ್ಲಿ ಕ್ರಾಸ್ ವೋಟಿಂಗ್ ನಡೆಯುವ ಸಾಧ್ಯತೆ ಇದೆ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಅಂತ ಕಾಂಗ್ರೆಸ್ ಮತ್ತು ಜೆಡಿ(ಎಸ್) ಪರಸ್ಪರ ಮನವಿ ಮಾಡಿಕೊಳ್ಳುತ್ತಿವೆ, ಅದರೆ ಯಾರೂ ತಮ್ಮ ಪಕ್ಷದ ಅಭ್ಯರ್ಥಿಯ ನಾಮಪತ್ರ ಹಿಂಪಡೆಯಲಿಲ್ಲ.

ಈ ವಿಡಿಯೋನಲ್ಲಿ ಕುಮಾರಸ್ವಾಮಿಯವರು ಮಾತಾಡುತ್ತಿರೋದು ಕೇಳುತ್ತಿದ್ದರೆ ಅವರಿಗೆ ತಮ್ಮ ಅಭ್ಯರ್ಥಿ ಗೆಲ್ಲುವ ಬಗ್ಗೆ ವಿಶ್ವಾಸವಿಲ್ಲ ಅನ್ನೋದು ಸಷ್ಟವಾಗುತ್ತದೆ. ನನ್ನ ಗುರಿ ಏನಿದ್ದರೂ 2023 ರ ವಿಧಾನ ಸಭಾ ಚುನಾವಣೆಯಲ್ಲಿ 123 ಗೆಲ್ಲುವುದು ಅಂತ ಅವರು ಹೇಳುತ್ತಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow us on

Click on your DTH Provider to Add TV9 Kannada