ಬಯಸಿದ್ದನ್ನು ಪಡೆಯುವಲ್ಲಿ ನಾವು ಬಹಳಷ್ಟು ಬಾರಿ ವಿಫಲರಾಗುತ್ತೇವೆ. ಯಾಕೆ ಹಾಗಾಗುತ್ತದೆ ಎಂದು ತಿಳಿಯಲು ನಾವು ಸೋಲುತ್ತೇವೆ. ಆದರೆ, ನಿಜವಾಗಿಯೂ ಹಾಗಾಗುವುದಕ್ಕೆ ನಮ್ಮೊಳಗಿನ ಭಯವೇ ಕಾರಣ. ಭಯ ಅಂದರೆ ಸೋಲಿನ ಭಯ. ತಿರಸ್ಕಾರದ ಭಯ. ಕೆಟ್ಟವರು ಅನಿಸಿಕೊಂಡರೆ ಎಂಬ ಭಯ. ಇಂತಹಾ ನಮ್ಮೊಳಗಿನ ಭಯಗಳಿಂದ ಬೇಕಾದ್ದನ್ನು ಪಡೆಯಲು ನಾವು ಮತ್ತೆ ಮತ್ತೆ ಸೋಲುತ್ತೇವೆ.
ಈ ಬಗ್ಗೆ ಜೆನ್ನಿಫರ್ ಕೊಹೆನ್ ಎಂಬವರು TEDx ಟಾಕ್ನಲ್ಲಿ ಮಾತನಾಡಿದ್ದಾರೆ. ಈ ಎಲ್ಲಾ ಭಯವನ್ನು ನಮಗೆ ನಾವೇ ಕಡಿಮೆ ಮಾಡಿಕೊಳ್ಳಬಹುದು ಎಂದೂ ಅವರು ವಿವರಿಸಿದ್ದಾರೆ.
ಈ ಎಲ್ಲಾ ಭಯಗಳು ಹುಟ್ಟಿಕೊಳ್ಳುವುದು ನಮ್ಮೊಳಗಿನಿಂದ. ನಮ್ಮ ಬಗ್ಗೆ ನಮಗಿರುವ ಸ್ವಯಂ ಅನುಮಾನದಿಂದ. ಈ ಕಾರಣದಿಂದ ನಾವು ನಮಗೆ ಬೇಕಾದ್ದನ್ನು ಸಾಧಿಸಲು ಕಾರ್ಯಪ್ರವೃತ್ತರಾಗುವುದಿಲ್ಲ. ಹಿಂಜರಿಕೆ ಪಟ್ಟುಕೊಳ್ಳುತ್ತೇವೆ. ನನ್ನಿಂದ ಸಾಧ್ಯವಿಲ್ಲ ಅಂದುಕೊಳ್ಳುತ್ತೇವೆ. ಹಾಗಾಗಿ, ನಾವು ಬುದ್ದಿವಂತರು, ಗೆಲ್ಲಲು ಯೋಗ್ಯರೇ ಆದರೂ ಗೆಲುವು ಕಾಣಲು ವಿಫಲರಾಗುತ್ತೇವೆ. ನಾವು ಬುದ್ಧಿವಂತರಾಗಿ, ನಮ್ಮನ್ನು ತಿಳಿಯುತ್ತಾ ಹೋದಷ್ಟು ನಮ್ಮ ಋಣಾತ್ಮಕ ಅಂಶಗಳ ಬಗ್ಗೆ ಚಿಂತಿಸುತ್ತೇವೆ. ಏನೋ ಮಾಡಲು ಸಾಧ್ಯ ಎಂದು ಮುನ್ನುಗ್ಗಲು ಹಿಂಜರಿಯುತ್ತೇವೆ.
ಇದನ್ನು ಮೀರಲು ನಾವು ದಿಟ್ಟರೂ, ಧೈರ್ಯಶಾಲಿಗಳೂ ಆಗಿರಬೇಕು. ಹಾಗಾದಾಗ ಗೆಲುವು ಸಾಧ್ಯ.ನಾವು ಧೈರ್ಯಶಾಲಿಗಳಾಗಿ ನಮಗೆ ನಿಜವಾಗಿ ಏನು ಬೇಕು ಎಂದು ಅರ್ಥ ಮಾಡಿಕೊಳ್ಳಬೇಕು. ಹೆಚ್ಚು ಹೆಚ್ಚು ಚಿಂತಿಸುವುದು, ಯೋಜನೆ ಹಾಕಿಕೊಳ್ಳುವುದು, ಪದೇ ಪದೇ ಯೋಚಿಸುವುದನ್ನೂ ಕಡಿಮೆ ಮಾಡಬೇಕು. ಮತ್ತು ಮೊದಲು ಆಗಬೇಕು ಅನಿಸಿರುವ ಕೆಲಸ ಮಾಡಬೇಕು. ಕಾರ್ಯರೂಪಕ್ಕೆ ತೊಡಗಿಕೊಳ್ಳಬೇಕು.
ನಾವು ಯಾವುದೇ ಕೆಲಸ ಮಾಡಲು ಮುಂದಾಗದೆ ಕುಳಿತರೆ ಏನೂ ಕೈಸೇರುವುದಿಲ್ಲ. ಹಾಗಾಗಿ ಅನಿಸಿದ್ದನ್ನು ಮಾಡುವ ಧೈರ್ಯವೇ ಅತಿಮುಖ್ಯ. ಯಾವುದು ಸುಲಭವೋ ಅದನ್ನು ಮಾಡಲು ನಾವು ಮುಂದುವರಿಯುತ್ತೇವೆ. ಅದನ್ನು ಕೂಡ ಮೀರಬೇಕು. ಇವೆಲ್ಲವನ್ನೂ ಮೀರಲು ದಿಟ್ಟತನವೇ ಔಷಧ. ಧೈರ್ಯ, ಮನೋಬಲವೇ ಮದ್ದು.
ಬೇಸಿಗೆಯಲ್ಲಿ ಬೆವರುವ ಮುನ್ನ ಈ ಅಂಶಗಳು ನೆನಪಿರಲಿ.. ನಿಮ್ಮ ಆಹಾರ ಪದ್ಧತಿ ಕೊಂಚ ಬದಲಾಗಲಿ
ಕೊವಿಡ್ನಿಂದ ‘ವರ್ಕ್ ಫ್ರಮ್ ಹೋಮ್’ ಮಾತ್ರವಲ್ಲ.. ಹೆಚ್ಚಿದೆ ‘ಹೋಮ್ ಹೆಲ್ತ್ ಕೇರ್’ ಸೇವೆ
Published On - 10:10 pm, Mon, 1 February 21