ಒಂದು ಗಂಟೆಯಲ್ಲಿ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯು ಪರೀಕ್ಷೆ ಮುಗಿಸಲು ಆರ್.ಅಶೋಕ್ ಸಲಹೆ
ಪರೀಕ್ಷೆಯ ಅವಧಿಯನ್ನು ಕಡಿತಗೊಳಿಸಿ ಮುಗಿಸಬಹುದು. ಆದರೆ ಪರೀಕ್ಷೆ ನಡೆಸದೇ ವಿದ್ಯಾರ್ಥಿಗಳನ್ನು ಪಾಸ್ ಮಾಡುವುದು ಬೇಡ. ಹೀಗೆ ಮಾಡಿದರೆ ಮುಂದಿನ ದಿನಗಳಲ್ಲಿ ಮಕ್ಕಳಿಗೆ ತೊಂದರೆಯಾಗಲಿದೆ ಎಂದು ಅಶೋಕ್ ಎಚ್ಚರಿಸಿದ್ದಾರೆ.
ಬೆಂಗಳೂರು: ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ PU ಪರೀಕ್ಷೆಗಳನ್ನು ನಡೆಸಲು ಶಿಕ್ಷಣ ಸಚಿವ ಎಸ್.ಸುರೇಶ್ಕುಮಾರ್ ಅವರಿಗೆ ಕಂದಾಯ ಸಚಿವ ಆರ್.ಅಶೋಕ್ ಸಲಹೆ ನೀಡಿದ್ದಾರೆ. ಪರೀಕ್ಷೆಯ ಅವಧಿಯನ್ನು ಕಡಿತಗೊಳಿಸಿ ಮುಗಿಸಬಹುದು. ಆದರೆ ಪರೀಕ್ಷೆ ನಡೆಸದೇ ವಿದ್ಯಾರ್ಥಿಗಳನ್ನು ಪಾಸ್ ಮಾಡುವುದು ಬೇಡ. ಹೀಗೆ ಮಾಡಿದರೆ ಮುಂದಿನ ದಿನಗಳಲ್ಲಿ ಮಕ್ಕಳಿಗೆ ತೊಂದರೆಯಾಗಲಿದೆ ಎಂದು ಅಶೋಕ್ ಎಚ್ಚರಿಸಿದ್ದಾರೆ.
ಪರೀಕ್ಷೆ ಒಂದೇ ಗಂಟೆಯಲ್ಲಿ ಮುಗಿಯುವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಶೋಕ್ ಸಲಹೆ ಮಾಡಿದ್ದಾರೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೊಂದಿಗೆ ಸಮಾಲೋಚನೆ ನಡೆಸಿದಾಗ ನನ್ನ ಅಭಿಪ್ರಾಯ ತಿಳಿಸಿದ್ದೇನೆ. ನೇರವಾಗಿ ಪಾಸ್ ಮಾಡಿದರೆ ಮಕ್ಕಳಿಗೆ ಮುಂದೆ ಕಷ್ಟವಾಗುತ್ತದೆ. ವಿಷಯಗಳನ್ನು ವಿಂಗಡಿಸಿ ಪರೀಕ್ಷೆ ನಡೆಸುವ ಬಗ್ಗೆ ಚರ್ಚೆ ನಡೆಸಲಾಯಿತು. ಬೆಂಗಳೂರಿನಲ್ಲಿ ಇನ್ನೊಂದು ತಿಂಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತದೆ. ಅದಾದ ನಂತರವೇ, ಅಂದರೆ ಮುಂದಿನ ತಿಂಗಳವರೆಗೆ ಪರೀಕ್ಷೆ ನಡೆಯುವುದಿಲ್ಲ. ಈ ಬಗ್ಗೆ ಅಂತಿಮವಾಗಿ ಶಿಕ್ಷಣ ತಜ್ಞರ ಸಲಹೆಯೊಂದಿಗೆ ಶಿಕ್ಷಣ ಸಚಿವರು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಅಶೋಕ್ ತಿಳಿಸಿದರು.
ಆರು ದಿನಗಳ ಅವಧಿಗೆ ಪರೀಕ್ಷೆ ನೆಡಸುವ ಬದಲು ಎರಡೇ ದಿನದಲ್ಲಿ ಪರೀಕ್ಷೆ ಮುಗಿಸುವ ಸಾಧ್ಯತೆಯನ್ನು ಪರಿಶೀಲಿಸಲು ಸಲಹೆ ಮಾಡಿದ್ದೇನೆ. ಒಂದು ತಿಂಗಳ ಬಳಿಕ ಬೆಂಗಳೂರಿನಲ್ಲಿ ದಿನಕ್ಕೆ ಕೇವಲ 500 ಸೋಂಕು ಪ್ರಕರಣಗಳು ವರದಿಯಾಗಬಹುದು. ಅಷ್ಟರಮಟ್ಟಿಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ಎಲ್ಲಾ ವಿಶ್ವಾಸವೂ ನಮಗಿದೆ ಎಂದು ಅವರು ನುಡಿದರು.
ಕಾಲೇಜು ಹಂತದಲ್ಲೇ ಬಹು ಆಯ್ಕೆ ಪ್ರಶ್ನೆ ನೀಡಿ ಪಿಯುಸಿ ಪರೀಕ್ಷೆ ನಡೆಸಲು ಸಲಹೆ ಕೊರೊನಾ ಎರಡನೇ ಅಲೆಯ ಉಪಟಳ ಮತ್ತು ಮೂರನೇ ಅಲೆ ಭೀತಿಯ ನಡುವೆ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ ಆಯೋಜಿಸುವ ವಿಚಾರದಲ್ಲಿ ರಾಜ್ಯ ಶಿಕ್ಷಣ ಇಲಾಖೆ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಕೇಂದ್ರ ಸರ್ಕಾರ ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ರದ್ದು ಮಾಡಿದ್ದು, ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಇದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೆಗೆದುಕೊಂಡಿರುವ ನಿರ್ಧಾರ ಎಂದು ಹೇಳಿರುವುದು ರಾಜ್ಯ ಶಿಕ್ಷಣ ಇಲಾಖೆಗೆ ಮತ್ತಷ್ಟು ಸಂಕಟ ತಂದೊಡ್ಡಿದೆ. ಈ ಆಯಾಮದಲ್ಲಿ ಯೋಚಿಸಿದಾಗ ಪರೀಕ್ಷೆ ನಡೆಸುವುದು ಬಹುತೇಕ ಅನುಮಾನವೇ ಆಗಿದೆಯಾದರೂ ಶಿಕ್ಷಣ ಸಚಿವರು ಪರೀಕ್ಷೆ ಆಯೋಜನೆಗೆ ಪೂರಕವಾಗಿ ಯೋಚಿಸುತ್ತಿರುವುದರಿಂದ ಜುಲೈ ಎರಡನೇ ವಾರದಲ್ಲಿ ಪರ್ಯಾಯ ಮಾದರಿಯಲ್ಲಿ ಪರೀಕ್ಷೆ ನಡೆಸುವ ಯೋಜನೆ ರೂಪಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಜುಲೈ ಎರಡನೇ ವಾರದಲ್ಲಿ ಪರ್ಯಾಯ ಮಾದರಿಯಲ್ಲಿ ಪರೀಕ್ಷೆ ಏರ್ಪಡಿಸುವ ಚಿಂತನೆಯಲ್ಲಿರುವ ಶಿಕ್ಷಣ ಇಲಾಖೆ ಈಗಾಗಲೇ ಅದಕ್ಕೆ ಬೇಕಾದ ಯೋಜನೆ ರೂಪಿಸುತ್ತಿದೆ. ಶಿಕ್ಷಣ ತಜ್ಞರು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯ ಮೊರೆ ಹೋಗಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಕ್ತ ರೀತಿಯಲ್ಲಿ ಪರೀಕ್ಷೆ ಆಯೋಜನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಸದ್ಯ ಶಿಕ್ಷಣ ಇಲಾಖೆಗೆ ತಜ್ಞರು ನೀಡಿರುವ ವಿಸ್ತೃತ ಮಾಹಿತಿ ಟಿವಿ9ಗೆ ಲಭ್ಯವಾಗಿದ್ದು, ಪರೀಕ್ಷೆ ನಡೆಸಲು ಪ್ರಮುಖ ಎರಡು ಮಾದರಿಯಲ್ಲಿ ಶಿಕ್ಷಣ ತಜ್ಞರು ಸಲಹೆ ನೀಡಿರುವುದು ಗೊತ್ತಾಗಿದೆ.
ಪಿಯು ವಿಭಾಗದಲ್ಲಿ ವಿದ್ಯಾರ್ಥಿ ತಗೆದುಕೊಂಡ ಪ್ರಮುಖ ಮೂರು ಐಚ್ಚಿಕ ವಿಷಯಗಳಿಗೆ ಮಾತ್ರ ಪರೀಕ್ಷೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಇಲಾಖೆ ತಜ್ಞರು ಸೂಚಿಸಿರುವ ಪ್ಲಾನ್-ಬಿ ಅಡಿಯಲ್ಲಿ, ಕಲಾ, ವಾಣಿಜ್ಯ, ವಿಜ್ಞಾನ ವಿಭಾಗಕ್ಕೆ ಪ್ರತ್ಯೇಕ ಮಾದರಿಯಲ್ಲಿ ಪರೀಕ್ಷೆ ನಡೆಸಲು ಸಲಹೆ ನೀಡಲಾಗಿದೆ.
(Limit SSLC PUC Examination Time to One Hour Suggests R Ashok)