ಗಡಿ ಜಿಲ್ಲೆ ಬೀದರ್​ ಮತ್ತೊಂದು ಬಳ್ಳಾರಿಯಾಗುವತ್ತ ಸಾಗುತಿದೆ, ಇಲ್ಲಿ ಜೋರಾಗಿ ನಡೆಯುತ್ತಿದೆ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ

| Updated By: ಸಾಧು ಶ್ರೀನಾಥ್​

Updated on: Nov 30, 2022 | 2:29 PM

ಮಹಾರಾಷ್ಟ್ರ-ತೆಲಂಗಾಣ ಜೊತೆ ಗಡಿ ಹಂಚಿಕೊಂಡಿರುವ ಬೀದರ್ ಜಿಲ್ಲೆಯಲ್ಲಿ ನಡೆಯುವ ಕೆಂಪು ಕಲ್ಲು ಅಕ್ರಮ ಗಣಿಗಾರಿಕೆಗೆ ಪೊಲೀಸ್ ಇಲಾಖೆ, ಗಣಿ ಮತ್ತು ಭೂ ವಿಜ್ಜಾನ ಇಲಾಖೆಗಳು ಪುಡಿ ರಾಜಕಾರಣಿಗಳಿಗೆ ಸಾಥ್ ಕೊಟ್ಟಿದ್ದು ಭೂಮಿಯ ಒಡಲನ್ನ ಹಾಡಹಗಲೇ ಬಗೆಯಲಾಗುತ್ತಿದೆ.

ಗಡಿ ಜಿಲ್ಲೆ ಬೀದರ್​ ಮತ್ತೊಂದು ಬಳ್ಳಾರಿಯಾಗುವತ್ತ ಸಾಗುತಿದೆ, ಇಲ್ಲಿ ಜೋರಾಗಿ ನಡೆಯುತ್ತಿದೆ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ
ಗಡಿ ಜಿಲ್ಲೆ ಬೀದರ್​ ಮತ್ತೊಂದು ಬಳ್ಳಾರಿಯಾಗುವತ್ತ ಸಾಗುತಿದೆ, ಇಲ್ಲಿ ಜೋರಾಗಿ ನಡೆಯುತ್ತಿದೆ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ
Follow us on

ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ ಆ ಜಿಲ್ಲೆಯಲ್ಲಿ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಜೋರಾಗಿ ನಡೆಯುತ್ತಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನೀತಿನಿಯಮಗಳನ್ನ ಗಾಳಿಗೆ ತೂರಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಇಲ್ಲಿ ನಡೆಯುವ ಈ ಅಕ್ರಮ ಗಣಿಗಾರಿಕೆಗೆ ಪೊಲೀಸ್ ಇಲಾಖೆ, ಗಣಿ ಮತ್ತು ಭೂ ವಿಜ್ಜಾನ ಇಲಾಖೆಗಳು ಪುಡಿ ರಾಜಕಾರಣಿಗಳಿಗೆ ಸಾಥ್ ಕೊಟ್ಟಿದ್ದು ಭೂಮಿಯ ಒಡಲನ್ನ ಹಾಡಹಗಲೇ ಬಗೆಯಲಾಗುತ್ತಿದೆ.

ಹಾಡಹಗಲೇ ಭೂಮಿಯ ಒಡಲನ್ನ ಬಗೆದು ಗಣಿಗಾರಿಕೆ ಮಾಡಲಾಗುತ್ತಿದೆ… ಅಕ್ರಮದ ಈ ಗಣಿಗಾರಿಕೆಗೆ ಸಾಥ್ ಕೊಟ್ಟಿದ್ದಾರೆ ಪೊಲೀಸ್ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು.. ಗಣಿಗಾರಿಕೆ ನಡೆಯುವ ಸ್ಥಳಕ್ಕೆ ಹೋದರೆ ಕಂಡು ಬರುತ್ತದೆ ಭಯಾನಕ ದೃಶ್ಯ, ಕಣ್ಣು ಹಾಯಿಸಿದಷ್ಟೂ ಭೂಮಿಯ ಒಡಲು ಬರಿದು… ಹೌದು ಮಹಾರಾಷ್ಟ್ರ ತೆಲಂಗಾಣ ರಾಜ್ಯಗಳ ಜೊತೆ ಗಡಿ ಹಂಚಿಕೊಂಡಿರುವ ಬೀದರ್ ಜಿಲ್ಲೆಯಲ್ಲಿ (Bidar) ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ (Illegal mining) ಜೋರಾಗಿ ನಡೆಯುತ್ತಿದೆ. ಇಲ್ಲಿ ನಡೆಯುವ ಅಕ್ರಮ ಕಲ್ಲು ಕೊರೆಯುವ ದಂಧೆಗೆ ಶ್ರೀರಕ್ಷಕರಾಗಿ ಪೊಲೀಸ್ ಇಲಾಕೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ನಿಂತುಕೊಂಡಿದ್ದು ಪುಡಿ ರಾಜಕಾರಣಿಗಳು ಕೂಡಾ ಈ ಅಕ್ರಮಕ್ಕೆ ಸಾಥ್ ಕೊಟ್ಟಿದ್ದಾರೆ.

ಹೀಗಾಗಿ ಕಳೆದೊಂದು ದಶಕದಿಂದ ಅವ್ಯಾಹತವಾಗಿ ಕೆಂಪು ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರೂ ಇದಕ್ಕೆ ಬ್ರೇಕ್ ಹಾಕುವ ಕೆಲಸಕ್ಕೆ ಯಾರೊಬ್ಬರೂ ಕೈ ಹಾಕಿಲ್ಲ. ಬೀದರ್ ದಕ್ಷಿಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅತಿ ಹೆಚ್ಚಾಗಿ ಎಗ್ಗಿಲ್ಲದೇ ಅಕ್ರಮವಾಗಿ ಕಲ್ಲು ಕ್ವಾರಿ ಕೆಲಸ ನಡೆಯುತ್ತಿದೆ. ಬೀದರ್ ತಾಲೂಕಿನ ಮನ್ನಳ್ಳಿ, ಹೊನ್ನಡ್ಡಿ, ಚಟ್ನಳ್ಳಿ ಸಂಗೊಳಗಿ ತಾಂಡಾ ಸುತ್ತಮುತ್ತ ಹಾಗೂ ಭಾಲ್ಕಿ ತಾಲೂಕಿನ ಖಾನಾಪುರ ಸುತ್ತಮುತ್ತ ಸರಕಾರದ ನಿಯಮಗಳನ್ನ ಗಾಳಿಗೆ ತೂರಿ ಜಿಲ್ಲೆಯಲ್ಲಿ ಅಕ್ರಮವಾಗಿ ಇಟ್ಟಂಗಿ ಹಾಗೂ ಕಲ್ಲು ಕೊರೆಯುವ ದಂಧೆಯನ್ನ ಯಾರದೂ ಅಂಜಿಕೆ ಅಳುಕ್ಕಿಲ್ಲದೇ ನಡೆಸಲಾಗುತ್ತಿದೆ. ಅದೂ ಕೂಡ ಗ್ರಾಮಗಳ ಅಕ್ಕಪಕ್ಕದಲ್ಲಿ ಫಲವತ್ತಾದ ಜಮೀನಿನಿನಲ್ಲಿ ಅಕ್ರಮ ದಂಧೆ ನಡೆಯುತ್ತಿದ್ದೂ ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಾತ್ರ ಸುಮ್ಮನೆ ಕುಳಿತಿದ್ದು ಇದರಿಂದ ರೈತರು ಮತ್ತು ಇತರೆ ಜನರಿಗೆ ತೊಂದರೆಯಾಗುತ್ತಿದೆ. ಜೊತೆಗೆ ಪರಿಸರ ಕೂಡಾ ಮಲೀನವಾಗುತ್ತಿದೆ ಎಂದು ಇಲ್ಲಿನ ರೈತ ಮುಂಖಡರಾದ ಚಂದ್ರಶೇಖರ್ ಪಾಟೀಲ್ ಹೇಳುತ್ತಾರೆ.

ಇನ್ನೊಂದು ಮುಖ್ಯ ವಿಷಯವೆಂದರೆ ಬೀದರ್ ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಕಲ್ಲು ಕೊರೆಯುವ ದಂಧೆಯನ್ನ ಪ್ರಭಾವಿ ವ್ಯಕ್ತಿಗಳು ನಡೆಸುತ್ತಿರುವುದರಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯವರು ಕೈಲಾಗದವರಂತೆ ಇದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ದೊಡ್ಡ ದೊಡ್ಡ ಗಾತ್ರದ ಮಶೀನ್ ಗಳನ್ನ ಬಳಸಿ ಕಲ್ಲು ಕೊರೆಯುವುದರಿಂದ ಅದರ ಧೂಳು ಗಿಡಗಳ ಮೇಲೆ ಬಿದ್ದು ಪರಿಸರ ಸಹ ಮಲಿನವಾಗುತ್ತಿದೆ.

ಈ ವಿಚಾರವನ್ನ ಜನಪ್ರತಿನಿಧಿಗಳು ಅಧಿಕಾರಿಗಳ ಗಮನಕ್ಕೆ ತಂದರೂ ಕೂಡಾ ಅವರು ಜನರ ಸಮಸ್ಯೆಗೆ ಸೊಪ್ಪು ಹಾಕಿಲ್ಲ. ಇದು ಜನರನ್ನ ಅಸಹಾಯಕರನ್ನಾಗಿ ಮಾಡುತ್ತಿದೆ. ಇನ್ನೂ ಇಂತಹ ದಂಧೆ ಮಾಡುವ ಕಂಪನಿಗಳು ಪರಿಸರ ಉಳಿವಿಗಾಗಿ ಗಿಡಗಳನ್ನ ನೆಡಬೇಕೆಂಬ ಕಾನೂನು ಸಹ ಇದೆ. ಆದ್ರೆ ನಿಯಮಗಳನ್ನ ರಾಜಕಾರಣಿಗಳೇ ಉಲ್ಲಂಘಿಸಿ ಈ ದಂಧೆ ಮಾಡುತ್ತಿದ್ದಾರೆಂದು ಜನರ ಆರೋಪಿಸುತ್ತಿದ್ದಾರೆ.

ಎಗ್ಗಿಲ್ಲದ ರಾಜಾರೋಷವಾಗಿ ಅಕ್ರಮ ಇಟ್ಟಂಗಿ ಗಣಿಕಾರಿಕೆ ಜಿಲ್ಲೆಯಲ್ಲಿ ನಡೆಯುತ್ತಿದ್ದರು ಅಕ್ರಮ ಎಸಗುವವರಿಗೆ ದಂಡ ಕಟ್ಟಿ, ಮತ್ತೆ ಗಣಿಗಳು ಆರಂಭವಾಗುವಂತೆ ಗಣಿ ಮತ್ತು ಭೂ ವಿಜ್ಜಾನ ಇಲಾಖೆಯ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆಯೇ ಹೊರತು ಅಕ್ರಮ ಗಣಿಗಳನ್ನ ಬಂದ್ ಮಾಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ಇದರ ಜೊತೆಗೆ ಈ ಅಕ್ರಮ ಕಲ್ಲು ಕೊರೆಯುವ ದಂಧೆಗೆ ಅಪ್ರಾಪ್ತ ಬಾಲಕರನ್ನ ಬಳಸಿಕೊಳ್ಳಲಾಗುತ್ತಿದೆ.

ಇವರು ದೊಡ್ಡ ದೊಡ್ಡ ಮಶೀನ್ ಗಳನ್ನ ತಂದು ಕಲ್ಲು ಕೊರೆಯುವ ಕೆಲಸ ಮಾಡುತ್ತಿದ್ದಾರೆ. ಇನ್ನೂ ಇಲ್ಲಿ ನಡೆಯುವ ಕಲ್ಲು ಗಣೀಗಾರಿಕೆ ಬಗ್ಗೆ ಗಣಿ ಮತ್ತು ಭೂ ವಿಜ್ಜಾನ ಇಲಾಕೆಯನ ಅಧಿಕಾರಿಗಳನ್ನ ಕೇಳಿದರೆ ಜಿಲ್ಲೆಯಲ್ಲಿ ಅಲ್ಲಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತದೆಂದು ನಮ್ಮ ಗಮನಕ್ಕೆ ಜನರು ತಂದಿದ್ದಾರೆ, ಅಕ್ರಮವಾಗಿ ನಡೆಯುತ್ತಿದ್ದರೆ ಅದನ್ನ ಸಕ್ರಮಗೊಳಿಸಿ ಕಲ್ಲು ಗಣಿಗಾರಿಕೆ ನಡೆಸಲು ಅವಕಾಶ ಕಲ್ಪಿಸಿಕೊಡಲಾಗುತ್ತದೆಂದು ಹೇಳುತ್ತಾರೆ ವಿಶ್ವನಾಥ್ ಗಣಿ ಮತ್ತು ಭೂ ವಿಜ್ಜಾನ ಇಲಾಕೆಯ ಅಧಿಕಾರಿ.

ಬೀದರ್ ಜಿಲ್ಲೆ ಗಡಿನಾಡು ಆಗಿದ್ದರಿಂದ ಅಧಿಕಾರಿಗಳು ಇತ್ತಕಡೆ ಗಮನ ಹರಿಸುತ್ತಿಲ್ಲ. ಆದ್ದರಿಂದಲೇ ಇಂತಹ ಅಕ್ರಮ ದಂಧೆಗಳು ಬೀದರ್ ಜಿಲ್ಲೆಯಲ್ಲಿ ಯಥೇಚ್ಛವಾಗಿ ನಡೆಯುತ್ತಿವೆ. ದಿನದಿಂದ ದಿನಕ್ಕೆ ಬೀದರ್ ಜಿಲ್ಲೆ ಧೂಳಿನ ಕಣವಾಗಿ ಪರಿಣಮಿಸುತ್ತಿದೆ. ಈಗಲೇ ಸರಕಾರ ಎಚ್ಚೆತ್ತು ಕ್ರಮ ಕೈಗೊಳ್ಳದಿದ್ದರೆ ಬಳ್ಳಾರಿ ಜಿಲ್ಲೆಗಾದ ಪರಿಸ್ಥಿತಿ ಬೀದರ್ ಜಿಲ್ಲೆಗೆ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. (ವರದಿ: ಸುರೇಶ್ ನಾಯಕ್, ಟಿವಿ 9, ಬೀದರ್)