ಬೆಂಗಳೂರು: ಬೆಂಗಳೂರಿನ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಟಿವಿ9 ಜೊತೆ ಮಾತನಾಡಿರುವ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ, ನಮ್ಮ ಮನೆಯಲ್ಲಿದ್ದ ಹಲವು ವಸ್ತುಗಳನ್ನು ದೋಚಿದ್ದಾರೆ. ಕೆಲವು ವಸ್ತುಗಳಿಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದಾರೆ. ಪೆಟ್ರೋಲ್ ಬಾಂಬ್, ಲಾಂಗು, ಮಚ್ಚು ತಂದು ದಾಳಿ ಮಾಡಿದ್ದಾರೆ ಎಂದು ಪುಲಿಕೇಶಿನಗರ ಶಾಸಕ ತಮ್ಮ ನೋವು ತೋಡಿಕೊಂಡಿದ್ದಾರೆ.
ಕಳೆದ 50 ವರ್ಷಗಳಿಂದ ನಾವು ಆ ಮನೆಯಲ್ಲಿ ಇದ್ದೆವು. 50 ವರ್ಷದ ಇತಿಹಾಸದ ಮನೆಯಲ್ಲಿ ನಡೆದ ಈ ಘಟನೆಯಿಂದ ನನಗೆ ಭಾರೀ ದುಃಖವಾಗಿದೆ. ಕಳೆದ10 ವರ್ಷಗಳಿಂದ ನವೀನ್ಗೂ ನಮಗೂ ಸಂಬಂಧವಿಲ್ಲ. 10 ವರ್ಷಗಳಿಂದ ನವೀನ್ನನ್ನು ನಾವು ಹತ್ತಿರಕ್ಕೆ ಸೇರಿಸುತ್ತಿರಲಿಲ್ಲ ಎಂದು ಆರೋಪಿ ನವೀನ್ ಬಗ್ಗೆ ಅಖಂಡ ಅಸಮಾಧಾನ ಹೊರಹಾಕಿದ್ದಾರೆ.
ಪ್ರಮುಖ ಆರೋಪಿ ಮುಜಾಮಿಲ್ನನ್ನು ನಾನು ನೋಡಿಲ್ಲ. ಘಟನೆಯಿಂದ ನಾನು ನೊಂದಿದ್ದೇನೆ. ನಮಗೂ ಮತ್ತು ನಮ್ಮ ಕುಟುಂಬಕ್ಕೆ ರಕ್ಷಣೆ ಕೊಡಬೇಕು. ಈ ಸಂಬಂಧ ನಾನು ಸಿಎಂ ಯಡಿಯೂರಪ್ಪಗೆ ಮನವಿ ಮಾಡಿದ್ದೇನೆ. ನನಗೆ ಆಗಿರುವಂತೆ ಬೇರೆ ಯಾವ ಶಾಸಕರಿಗೂ ಆಗಬಾರದು. ರಾಜ್ಯದ ಎಲ್ಲ ಶಾಸಕರಿಗೂ ರಕ್ಷಣೆ ಕೊಡಲು ಮನವಿ ಮಾಡುತ್ತೇನೆ ಎಂದು ಶ್ರೀನಿವಾಸ ಮೂರ್ತಿ ಹೇಳಿದ್ದಾರೆ.
ಈ ಗಲಾಟೆ ತಣ್ಣಗಾದ ಬಳಿಕ ಎಲ್ಲ ಧರ್ಮಗಳು ಪ್ರಮುಖ ಗುರುಗಳನ್ನು ಕರೆಸಿ ಶಾಂತಿ ಸಭೆ ಮಾಡುತ್ತೇವೆ. ಸಮಾಜದಲ್ಲಿ ಶಾಂತಿ ನೆಲೆಸಬೇಕು. ಈ ರೀತಿಯ ಘಟನೆಗಳು ನಡೆಯಬಾರದು. ಇದರಿಂದ ಸಮಾಜನದ ಸ್ವಾಸ್ಥ್ಯ ಕೆಡುತ್ತದೆ ಎಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ತಿಳಿಸಿದ್ದಾರೆ.
Published On - 6:20 pm, Wed, 12 August 20