
ಬಾಗಲಕೋಟೆ: ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಜಿಲ್ಲೆಯ ಬಾದಾಮಿ ತಾಲ್ಲೂಕಿನ ಚಿಕ್ಕನಸಬಿ ಗ್ರಾಮ ಬಳಿ ಮಲಪ್ರಭಾ ನದಿ ನೀರಲ್ಲಿ ಇದೀಗ ಹತ್ತಾರು ಮಂಗಗಳು ಸಿಲುಕಿ ನರಳಾಡುತ್ತಿವೆ.
ಮಲಪ್ರಭಾ ನದಿಯ ಹಿನ್ನೀರಿನ ನಡುಗಡ್ಡೆಯ ಕಂಟಿಯಲ್ಲಿ ಕುಳಿತಿರುವ 15ಕ್ಕೂ ಹೆಚ್ಚು ಮಂಗಗಳ ಗುಂಪು ಪರದಾಡತೊಡಗಿವೆ. ಎರಡು ದಿನದಿಂದ ಆಹಾರವಿಲ್ಲದೇ ಪರದಾಡುತ್ತಿರುವ ಮಂಗಗಳಿಗೆ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿರುವ ನೀರಿನ ಮಟ್ಟ ಮತ್ತಷ್ಟು ಸಂಕಷ್ಟ ತಂದೊಡ್ದಿದೆ.
ಇದೀಗ, ನಡುಗಡ್ಡೆ ಮುಳುಗುವ ಹಂತ ತಲುಪಿದ್ದು ಕಂಟಿ ಯಾವುದೇ ಕ್ಷಣದಲ್ಲಿ ಜಲಾವೃತಗೊಳ್ಳುವ ಸಾಧ್ಯತೆಯಿದೆ. ಒಂದು ವೇಳೆ ನಡುಗಡ್ಡೆ ಸಂಪೂರ್ಣವಾಗಿ ಮುಳುಗಿದರೆ ಹದಿನೈದಕ್ಕೂ ಹೆಚ್ಚು ಮಂಗಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಸಾಧ್ಯತೆಯಿದೆ.
ಅರಣ್ಯಾಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲ..
ಹೀಗಾಗಿ, ಸ್ಥಳೀಯ ಯುವಕರು ಮಂಗಗಳ ರಕ್ಷಣೆ ಮಾಡಲು ಪ್ರಯತ್ನಿಸ್ತಿದಾರೆ. ಆದರೆ, ನೀರಿನ ಹರಿವು ಹೆಚ್ಚಾಗಿರುವುದರಿಂದ ಅದೂ ಸಾಧ್ಯವಾಗುತ್ತಿಲ್ಲ. ಈ ಕುರಿತು, ಅರಣ್ಯಾಧಿಕಾರಿಗಳಿಗೆ ತಿಳಿಸಿದರೂ ಅವರು ಕ್ಯಾರೇ ಅನ್ನುತ್ತಿಲ್ಲ. ಸ್ಥಳಕ್ಕೆ ಬರೋದಾಗಿ ಹೇಳಿದರೂ ಇತ್ತ ತಿರುಗಿ ನೋಡಿಲ್ಲ ಎಂದು ಯುವಕರು ಆಕ್ರೋಶ ಹೊರಹಾಕಿದ್ದಾರೆ. ಒಟ್ನಲ್ಲಿ, ಮಾಜಿ ಸಿಎಂ ಸಿದ್ದರಾಮಯ್ಯರ ಕ್ಷೇತ್ರದಲ್ಲಿ ಮಂಗಗಳ ಆರ್ತನಾದ ಕೇಳೋರಿಲ್ಲದಂತಾಗಿದೆ.