ತುಮಕೂರು: ಕಳೆದ ನಾಲ್ಕೂವರೆ ತಿಂಗಳಿನಿಂದ ಕೊರೊನಾ ಜನರನ್ನು ಕಾಡುತ್ತಿದೆ. ಕೊರೊನಾದಿಂದ ಎಲ್ಲವೂ ಬಹಳಷ್ಟು ಬದಲಾಗಿದೆ. ಸೋಂಕಿನ ಜೊತೆಗೆ ಜೀವನ ನಡೆಸುವ ಪಾಠವನ್ನು ಜನ ಕಲಿತಿದ್ದಾರೆ. ಆದರೆ ಇದರ ನಡುವೆ ಆರೋಗ್ಯ ಇಲಾಖೆ ಒಂದು ಸ್ಫೋಟಕ ಮಾಹಿತಿಯನ್ನು ಹೊರ ಹಾಕಿದೆ. ಕೊರೊನಾದಿಂದ ಮೃತಪಟ್ಟವರ ದೇಹವನ್ನು ಪಡೆಯಲು ಸಂಬಂಧಿಕರು ನಿರಾಕರಿಸುತ್ತಿದ್ದಾರಂತೆ.
ತುಮಕೂರಿನ ಜನ ಮಾನವೀಯತೆ ಮರೆತರಾ?
ಕಲ್ಪತರು ನಾಡು ತುಮಕೂರಿನಲ್ಲಿ ಕೊರೊನಾದಿಂದ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕಿತ ಮೃತರ ದೇಹ ಪಡೆಯಲು ಸಂಬಂಧಿಕರು ಹಿಂದೇಟು ಹಾಕುತ್ತಿದ್ದಾರೆ. ದೇಹದ ಅಂತ್ಯಸಂಸ್ಕಾರ ಮಾಡುವುದರಿಂದ ನಮಗೂ ಸೋಂಕು ಬರಬಹುದು ಎಂದು ದೇಹವನ್ನು ಆಸ್ಪತ್ರೆಗಳಲ್ಲೇ ಬಿಡುತ್ತಿದ್ದಾರೆ. ಸಂಬಂಧಿಕರಿದ್ದರೂ ಸುಮಾರು 20 ಶವಗಳು ಅನಾಥವಾಗಿವೆ. ತುಮಕೂರಿನ ಜನ ಮಾನವೀಯತೆ ಮರೆತರಾ ಎಂಬಂತಾಗಿದೆ.
ಸೋಂಕು ಬರೋಲ್ಲಾ. ಜನರಲ್ಲಿ ಜಾಗೃತಿ ಬೇಕಿದೆ
ಸರಕಾರದ ನಿಯಮದಂತೆ ಮೃತ ದೇಹ ಹಸ್ತಾಂತರ ಮಾಡಲು ಮುಂದಾದರೂ, ದೇಹ ಕೊಡ್ತೀವಿ ಅಂದ್ರೂ ಸಂಬಂಧಿಕರು ಒಲ್ಲೆ ಅಂತಿದ್ದಾರೆ. ಆರಂಭದಲ್ಲಿ ಮೃತ ದೇಹ ಹಸ್ತಾಂತರಿಸಲು ಸರಕಾರ ಹಿಂದೇಟು ಹಾಕಿತ್ತು. ಆಸ್ಪತ್ರೆ ಸಿಬ್ಬಂದಿಯೇ ಶವದ ಅಂತ್ಯಕ್ರಿಯೆ ಮಾಡುವಂತೆ ಹೇಳಿತ್ತು. ಆದರೆ ಈಗ ಸರಕಾರದ ನಿಯಮ ಬದಲಾಗಿದೆ. ಸರಕಾರದ ನಿಯಮ ಪಾಲಿಸಿದರೆ ಸೋಂಕು ಬರೋಲ್ಲಾ. ಜನರಲ್ಲಿ ಜಾಗೃತಿ ಬೇಕಿದೆ ಎಂದು ಡಿಎಚ್ ಓ ನಾಗೇಂದ್ರಪ್ಪ ಮನವಿ ಮಾಡಿಕೊಂಡಿದ್ದಾರೆ.