ಶಿವಮೊಗ್ಗ: ಸಾವಿರ ಕಷ್ಟಗಳೇ ಎದುರಾಗಲಿ, ದಾರಿಯೇ ಕಾಣದಾಗಲಿ. ತಾಯಿಗೆ ಮಕ್ಕಳೆಂದರೆ ಅಚ್ಚುಮೆಚ್ಚು. ಆ ಮಕ್ಕಳ ಆರೈಕೆಗೆ ತಾಯಿ ತನ್ನಿಡೀ ಜೀವನವನ್ನೇ ಮುಡಿಪಾಗಿ ಇಡ್ತಾಳೆ. ಹೀಗೆ ಇಲ್ಲೊಂದು ಕರುಳ ಬಳ್ಳಿ ನೂರಾರು ಸಂಕಷ್ಟಗಳ ನಡುವೆ ಹಬ್ಬಿದೆ, ಆದ್ರೆ ದಿನದಿಂದ ದಿನಕ್ಕೆ ಸಂಕಷ್ಟಕ್ಕೆ ತಳ್ಳುತ್ತಿರುವ ಪರಿಸ್ಥಿತಿ ಆ ತಾಯಿ ನೆಮ್ಮದಿಗೆ ಕೊಳ್ಳಿ ಇಟ್ಟಿದೆ.
ಶಿವಮೊಗ್ಗ ನಗರದ ಪುರಲೆ ಬಡಾವಣೆಯಲ್ಲಿ ಮನಕಲಕುವ ದೃಶ್ಯ ಕಂಡು ಬಂದಿದೆ. ಕಂಬಿಗಳ ಹಿಂದೆ, ಗೃಹಬಂಧನದಲ್ಲಿ ಅರುಣ್ ಕುಮಾರ್ ಹೆಸರಿನ ಯುವಕ ನರಳುತ್ತಿದ್ದಾನೆ. ಇನ್ನು ತಾಯಿ ಸರೋಜಮ್ಮ ತನ್ನ ಮಗನನ್ನೇ ಗೃಹಬಂಧನದಲ್ಲಿ ಇಟ್ಟಿದ್ದಾರೆ. ಅಷ್ಟಕ್ಕೂ ಈ ತಾಯಿಗೆ ಹೀಗೆ ತನ್ನ ಕರುಳ ಕುಡಿಯನ್ನೇ ಗೃಹಬಂಧನದಲ್ಲಿ ಇರಿಸಲು ಬಲವಾದ ಕಾರಣ ಇದೆ. ಸರೋಜಮ್ಮ ಅವರಿಗೆ ಗಂಡು ಮಗು ಹುಟ್ಟಿ ಎರಡು ವರ್ಷಕ್ಕೆ ಮಗುವಿಗೆ ಪಿಡ್ಸ್ ಬಂದಿತ್ತು. ಬಳಿಕ ಚಿಕಿತ್ಸೆ ಕೊಡಿಸಿದ್ದರೂ ಪ್ರಯೋಜನವಾಗಿಲ್ಲ. ಹಂತ ಹಂತವಾಗಿ ಮಗು ಸಾಮಾನ್ಯ ಸ್ಥಿತಿಯಿಂದ ವಿಭಿನ್ನವಾಗುತ್ತಾ ಬೆಳೆದಿದೆ.
ಸದ್ಯ ಶಿವಮೊಗ್ಗ ನಗರದ ಪುರಲೆ ಬಡಾವಣೆಯಲ್ಲಿ ಮಗನ ಜೊತೆ ವಾಸವಿರುವ ಸರೋಜಮ್ಮ ಮಗನ ಚಿಕಿತ್ಸೆಗೆ ಹಣ ಹೊಂದಿಸುವುದಕ್ಕೂ ಪರದಾಡುತ್ತಿದ್ದಾರೆ. ಅತ್ತ ಸರ್ಕಾರದಿಂದ ಬರುತ್ತಿದ್ದ ಹಣವೂ ಇಲ್ಲದೆ, ಇತ್ತ ಮನೆಯನ್ನೂ ನಡೆಸಲಾಗದೆ ಕ್ಷಣಕ್ಷಣಕ್ಕು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಸರೋಜಮ್ಮ ದಾನಿಗಳ ಸಹಾಯದ ನಿರೀಕ್ಷೆಯಲ್ಲಿದ್ದಾರೆ.
ಕಳೆದ 20 ವರ್ಷಗಳಿಂದಲೂ ನರಕ ಅನುಭವಿಸುತ್ತಿರುವ ತಾಯಿಗೆ ದಾನಿಗಳು ನೆರವಾಗಬೇಕಿದೆ. ಸದ್ಯ ಶಿವಮೊಗ್ಗ ನಗರದ ಪುರಲೆ ಬಡಾವಣೆಯಲ್ಲಿ ಪುತ್ರನ ಜೊತೆ ವಾಸವಿರುವ ಸರೋಜಮ್ಮನ ಮಗನ ಚಿಕಿತ್ಸೆಗೆ ದಾನಿಗಳು ನೆರವು ನೀಡಬೇಕಿದೆ. ಅಲ್ಲದೆ ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಇತ್ತ ಗಮನ ಹರಿಸಿ, ಸರೋಜಮ್ಮ ಅವರಿಗೆ ಬಿಡುಗಡೆ ಆಗಬೇಕಿರುವ ಹಣವನ್ನು ರಿಲೀಸ್ ಮಾಡಲು ಕ್ರಮ ಕೈಗೊಳ್ಳಬೇಕಿದೆ. -ಬಸವರಾಜ್