
ಬೀದರ ಮಗುವೊಂದಕ್ಕೆ ಕೋವಿಡ್-19 ಕರೋನಾ ಸೋಂಕು ಇರುವುದು ದೃಢಪಟ್ಟ ಬಳಿಕ ಬೀದರನ ಕೋವಿಡ್ ನಿಗದಿತ ಆಸ್ಪತ್ರೆಯಲ್ಲಿ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಿ ಮಗುವನ್ನು ಗುಣಮುಖಪಡಿಸಲಾಗಿದೆ. ಮಕ್ಕಳ ವಿಭಾಗದ ಮುಖಸ್ಥರಾದ ಡಾ.ಶಾಂತಲ ಕೌಜಲಗಿ ಅವರ ಮಾರ್ಗದರ್ಶನದಲ್ಲಿ ಹಗಲಿರುಳು ದುಡಿದು ಮಗುವನ್ನು ಮೃತ್ಯುವಿನಿಂದ ಕಾಪಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ನವಜಾತ ಶಿಶುವಿಗೆ ಏನಾಗಿತ್ತು
ಜೂನ್ 30ರಂದು ಬಸವಕಲ್ಯಾಣ ತಾಲ್ಲೂಕಿನ ಖಾನಪೂರ ಗ್ರಾಮದ ರಸ್ತೆ ಬದಿಯಲ್ಲಿ ಅಂದಾಜು ಒಂದು ತಿಂಗಳು ಹದಿನೈದು ದಿವಸದ ಅಪರಿಚಿತ ಹೆಣ್ಣು ಮಗು ಪತ್ತೆಯಾಗಿರುವುದನ್ನು ಬಸವಕಲ್ಯಾಣ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬ್ರೀಮ್ಸ್ ಆಸ್ಪತ್ರೆ ಬೀದರಗೆ ಜುಲೈ 1ರಂದು ದಾಖಲು ಮಾಡಲಾಗಿ ಮಗು ತುಂಬಾ ನಿತ್ರಾಣವಾಗಿತ್ತು. ಅದಲ್ಲದೆ ಹೊಟ್ಟೆ ಊದಿಕೊಂಡಿತ್ತು.
ತಪಾಸಣೆ ನಂತರ ಮಗು ರಕ್ತಹೀನತೆ ಹಾಗೂ ಕೋವಿಡ್ ರೋಗದಿಂದ ಬಳಲುತ್ತಿದಿದ್ದು ಕಂಡುಬಂದಿತ್ತು. ಮಕ್ಕಳ ವಿಭಾಗದ ಪ್ರತ್ಯೇಕ ಶಿಶು ತೀವ್ರ ನಿಗಾ ಘಟಕದಲ್ಲಿ ಮಗುವನ್ನು ದಾಖಲಿಸಿ ರಕ್ತಹೀನತೆ ಸಲುವಾಗಿ ರಕ್ತವನ್ನು ನೀಡಲಾಗಿರುವುದಲ್ಲದೇ ಸಪ್ಸಿಸ್ ಚಿಕಿತ್ಸೆಯನ್ನು ಕೂಡ ಪರಿಣಾಮಕಾರಿಯಾಗಿ ನೀಡಿರುತ್ತಾರೆ.
ನಂತರ ಮಗುವಿಗೆ ಕೋವಿಡ್ ಇರಬಹುದೆಂದು ಶಂಕೆ ವ್ಯಕ್ತಪಡಿಸಿ, ಕೋವಿಡ್ ಪರೀಕ್ಷೆಗಾಗಿ ಕಳುಹಿಸಲಾಗಿ ಮಗುವಿಗೆ ಕೋವಿಡ್ ಇರುವುದನ್ನು ದೃಢಪಡಿಸಿಕೊಂಡು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಿ ಮಗುವನ್ನು ಗುಣಮುಖಮಾಡಲಾಯಿತು.
ಮಕ್ಕಳ ವಿಭಾಗದ ಮುಖಸ್ಥರಾದ ಡಾ.ಶಾಂತಲ ಕೌಜಲಗಿ ಅವರ ಮಾರ್ಗದರ್ಶನದಲ್ಲಿ ಡಾ. ಶರಣಬುಳ್ಳಾ, ಡಾ.ಪ್ರಿಯಾಂಕ, ಡಾ.ರವಿಕಾಂತ, ಡಾ.ಜಗದೀಶ ಕೋಟೆ ಮತ್ತು ಡಾ.ಸೈಫ್ ಉದ್ದಿನ್ ಮತ್ತು ಶುಶ್ರೂಷಕ ಶುಶ್ರೂಷಿಕಿಯರು ಕಾಳಜಿಯಿಂದ ಚಿಕಿತ್ಸೆಯಿಂದ ಮಗುವನ್ನು ಮ್ರೃತುವಿನಿಂದ ಕಾಪಾಡಿ ಗುಣಮುಖವಾದ ನಂತರ ಜುಲೈ 14ರಂದು ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಗೌರಿಶಂಕರ ಅವರಿಗೆ ಒಪ್ಪಿಸಲಾಗಿದೆ.